KSRTC Good News : ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 50 ಲಕ್ಷ ಅಪಘಾತ ವಿಮೆ ಯೋಜನೆ ಜಾರಿ

ಬೆಂಗಳೂರು : KSRTC Good News : ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದೆ. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸಿಬ್ಬಂದಿಗೆ 50 ಲಕ್ಷ ಅಪಘಾತ ವಿಮೆ ಜಾರಿಗೊಳಿಸಿದೆ. ಈ ಸಂಬಧ ಕೆಎಸ್‌ಆರ್‌ಟಿಸಿ ನಿಗಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ನಿಗಮದ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಡಾ. ಎಂ. ಚಂದ್ರಪ್ಪ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಪಂಕಜ್ ತಪ್ಲಿಯಾಲ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು.

ಎಸ್‌ಬಿಐನಲ್ಲಿ ತಮ್ಮ ಸಂಬಳದ ಖಾತೆ ಹೊಂದಿರುವ ನಿಗಮದ ನೌಕರರಿಗೆ ಪ್ರೀಮಿಯಮ್ ರಹಿತ ವೈಯಕ್ತಿಕ ಅಪಘಾತ ವಿಮೆ ಒಳಗೊಂಡಿದೆ. ಈ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಸಾವಿಗೀಡಾದಲ್ಲಿ ಅವರ ಅವಲಂಬಿತರಿಗೆ 50 ಲಕ್ಷ ರೂ.ಗಳ ಪರಿಹಾರ ಧನ ತಕ್ಷಣವೇ ಸಿಗಲಿದೆ. ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ 20 ಲಕ್ಷ ರೂ. ಹಾಗೂ ಭಾಗಶಃ ಅಂಗವೈಕಲ್ಯ ಉಂಟಾದಲ್ಲಿ 10 ಲಕ್ಷ ರೂ. ವಿಮಾ ಪರಿಹಾರ ದೊರೆಯಲಿದೆ. ಕರ್ತವ್ಯನಿರತ ಹಾಗೂ ಕರ್ತವ್ಯವಿಲ್ಲದ ಸಮಯದಲ್ಲೂ ಸಂಭವಿಸುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯವಾಗಲಿದೆ.

ಅಪಘಾತದಿಂದ ಸಿಬ್ಬಂದಿ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗೆ ಒಳಗಾದಲ್ಲಿ ಗರಿಷ್ಠ 10 ಲಕ್ಷ ರೂ. ಔಷಧಿಗಾಗಿ ಗರಿಷ್ಠ 5 ಲಕ್ಷ ರೂ. ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ 2 ಲಕ್ಷ ರೂ. (ರೂ.50 ಲಕ್ಷ+ ರೂ.2 ಲಕ್ಷ), ಏರ್ ಆಂಬ್ಯುಲೆನ್ಸ್ ಸೇವೆಗೆ 10 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುತ್ತದೆ. ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಅವರ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಠ 5 ಲಕ್ಷ ರೂ. ಹಾಗೂ ಹೆಣ್ಣುಮಗಳ ಮದುವೆಗೆ ಗರಿಷ್ಠ 5 ಲಕ್ಷ ರೂ.ಗಳವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆ ಒಳಗೊಂಡಿರುತ್ತೆ.

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಸಿಬ್ಬಂದಿಗೆ ವಿಶೇಷ ಟೂರ್ ಪ್ಯಾಕೇಜ್ :

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಸಿಬ್ಬಂದಿಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಲಾಗಿದ್ದು, ದೀಪಾವಳಿ ಹಬ್ಬದ ಸಂದರ್ಭ ವಾರಾಂತ್ಯದಲ್ಲಿ ಪ್ರಯಾಣಿಕರಿಗೆ ಪ್ರಯೋಜನ ವಾಗಲಿದೆ. ದಕ್ಷಿಣ ಕನ್ನಡದ ಪ್ರಮುಖ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಕೆಎಸ್‌ಆರ್‌ಟಿಸಿ ನಿಗಮ ಪ್ಯಾಕೇಜ್ ಟೂರ್‌ಗಳನ್ನು ಘೋಷಿಸಿದ್ದು, ಅಂತೆಯೇ 5 ರಿಂದ 10 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸಲಿದೆ.

ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಮಾದರಿಯಲ್ಲಿಯೇ ಅ.21 ರಿಂದ ಅ.27ರವರೆಗೆ ದೀಪಾವಳಿ ಟೂರ್ ಪ್ಯಾಕೇಜ್ ಪರಿಚಯಿಸಲಾಗಿದ್ದು. ಇದರಲ್ಲಿ ಕುಂದಾಪುರ, ಉಡುಪಿ, ದಕ್ಷಿಣ ಕನ್ನಡದ ಸುತ್ತಮುತ್ತಲಿನ ದೇವಾಲಯಗಳ ದರ್ಶನಕ್ಕೆ ಭಕ್ತರಿಗೆ ಅವಕಾಳ ಕಲ್ಪಿಸಲಾಗಿದೆ. ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಹಾಗೂ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಗಳೂ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿವೆ. ನೋಂದಾಯಿತ ಕಟ್ಟಡ ಮತ್ತು ಇತರ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಉಚಿತ ಬಸ್ ಪಾಸ್ ಇದ್ದರೆ ಆ ಪ್ರಯಾಣಿಕರು ಬಸ್ ಹತ್ತುವ ಸ್ಥಳದಿಂದ 45 ಕಿ.ಮೀ ದೂರ ಉಚಿತವಾಗಿ ಪ್ರಯಾಣಿಸಬಹುದು. ರಾಜ್ಯದಲ್ಲಿ ಸುಮಾರು 37 ಲಕ್ಷ ಕಾರ್ಮಿಕರು ನೋಂದಣಿ ಆಗಿದ್ದು, ಆ ಪೈಕಿ 1 ಲಕ್ಷ ಕಾರ್ಮಿಕರಿಗೆ ಪಾಸ್ ನೀಡಲು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಎಲ್ಲಾ ನೋಂದಾಯಿತ ಕಾರ್ಮಿಕರಿಗೆ ರಕ್ಷಣೆ ನೀಡುವುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ.

ಇದನ್ನೂ ಓದಿ : Diwali Firecrackers Ban : ದೀಪಾವಳಿ ಪಟಾಕಿ ನಿಷೇಧ : ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು

ಇದನ್ನೂ ಓದಿ : ಹೋಟ‌ಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

ksrtc good news 50 lakh accident insurance scheme for KSRTC staff

Comments are closed.