Swamiji suicide: ಬಂಡೇಮಠದ ಶ್ರೀಗಳ ಆತ್ಮಹತ್ಯೆ: 3 ಪುಟಗಳ ಡೆತ್‍ನೋಟಿನಲ್ಲಿ ಸಿಕ್ಕ ಮಾಹಿತಿ ಏನು..?

ರಾಮನಗರ: swamiji suicide: ಇಲ್ಲಿನ ಮಾಗಡಿ ತಾಲೂಕಿನ ಸೋಲೂರಿನ ಬಂಡೆಮಠದ ಬಸವಲಿಂಗ ಸ್ವಾಮೀಜಿ(43) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಠದಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. 3 ಪುಟಗಳ ಡೆತ್ ನೋಟು ಲಭ್ಯವಾಗಿದ್ದು, ಅದರಲ್ಲಿ ಸಾವಿಗೆ ಕಾರಣ ಬಹಿರಂಗಗೊಂಡಿದೆ.

ಸ್ವಾಮೀಜಿಗಳು ಬರೆದಿದ್ದಾರೆ ಎನ್ನಲಾದ ಡೆತ್‍ನೋಟಿನಲ್ಲಿ 10ರಿಂದ 15 ಮಂದಿ ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ. ಸ್ವಾಮೀಜಿಗಳು 3 ಪುಟದ ಡೆತ್‍ನೋಟು ಬರೆದಿಟ್ಟಿದ್ದು, ಅದರಲ್ಲಿ ತಾವು ಅನುಭವಿಸುತ್ತಿದ್ದ ನೋವು, ಮಾನಸಿಕ ಹಿಂಸೆಗಳ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಯಾರೋ ತನ್ನ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಕಳೆದ 6 ತಿಂಗಳಿನಿಂದ ತಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ಸಾಕಷ್ಟು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇನೆ. ಇದನ್ನೆಲ್ಲಾ ಸಹಿಸಲು ಶಕ್ತಿ ಇಲ್ಲದೇ ಸಾವಿನ ದಾರಿ ಹಿಡಿದಿದ್ದೇನೆ ಎಂದು ಬಸವಲಿಂಗ ಸ್ವಾಮೀಜಿಗಳು ಡೆತ್ ನೋಟಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಡೆತ್‍ನೋಟಿನಲ್ಲಿ ಕೆಲವರ ಹೆಸರುಗಳನ್ನೂ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ,

ಘಟನಾ ಸ್ಥಳಕ್ಕೆ ಕುದೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಭಿಸಿರುವ ಡೆತ್‍ನೋಟಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡೆತ್‍ನೋಟಿನಲ್ಲಿ ಉಲ್ಲೇಖವಾದ ಹೆಸರುಗಳ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಪರಿಗಣಿಸದೆ ಪೊಲೀಸರು ಪ್ರಕರಣದ ತನಿಖೆಗಳನ್ನು ಚುರುಕುಗೊಳಿಸಿದ್ದಾರೆ.

ಸ್ವಾಮೀಜಿ ಸಾವಿನ ಸುತ್ತ ಅನುಮಾನಗಳ ಹುತ್ತ:
ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್‍ನೋಟಿನಲ್ಲಿ ಉಲ್ಲೇಖವಾಗಿದ್ದರೂ ಅವರ ಸಾವಿನ ಸುತ್ತ ಅನುಮಾನಗಳು ಶುರುವಾಗಿವೆ. 2021ರ ಡಿಸೆಂಬರ್ ನಲ್ಲಿ ಮೃತರಾಗಿದ್ದ ಚಿಲುಮೆ ಮಠದ ಶ್ರೀಗಳ ಸಾವಿಗೂ ಕಂಚುಗಲ್ ಬಂಡೆಮಠದ ಸ್ವಾಮೀಜಿಗಳ ಸಾವಿಗೂ ಸಾಮ್ಯತೆ ಇರುವುದು ಅನುಮಾನಗಳಿಗೆ ಪುಷ್ಠಿ ನೀಡಿದಂತಿದೆ. ಹೀಗಾಗಿ ಸಿಪಿಐ ಕುಮಾರ್ ಡೆತ್‍ನೋಟನ್ನು ಗೌಪ್ಯವಾಗಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ.

5 ಮಠಗಳ ಉಸ್ತುವಾರಿಗಳನ್ನು ವಹಿಸಿದ್ದ ಸ್ವಾಮೀಜಿಗಳು ಬಂಡೇಮಠದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ಜನಾನುರಾಗಿ ಆಗಿ, ಭಕ್ತರ ಪಾಲಿಗೆ ದೇವಾಂಶ ಸಂಭೂತನಾಗಿ ಮೆಚ್ಚುಗೆಯನ್ನು ಪಡೆದಿದ್ದರು. ನಾಳೆ(ಅ.25) ನಡೆಯಬೇಕಿದ್ದ ವಿದ್ಯಾರ್ಥಿ ನಿಲಯ, ಅತಿಥಿ ಗೃಹ, ಕಟ್ಟಡವೊಂದರ ಶಿಲಾನ್ಯಾಸ ಸಮಾರಂಭಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಈ ಸಂಬಂಧ ನಿನ್ನೆಯಷ್ಟೆ ಸ್ಥಳೀಯ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಜೊತೆ ಮಾತುಕತೆ ಕೂಡಾ ನಡೆಸಿದ್ದರು ಎನ್ನಲಾಗಿದೆ. ಹೀಗಿರುವಾಗ ಬೆಟ್ಟದ ಮೇಲಿರುವ ಮಹಾಲಿಂಗೇಶ್ವರ ಪೂಜಾ ನಿಲಯದ ಕಿಟಕಿಗೆ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಸ್ವಾಮೀಜಿಗಳ ಮೃತದೇಹ ಪತ್ತೆಯಾಗಿದೆ.

ಬಂಡೆಮಠದ ಸ್ವಾಮೀಜಿಗಳ ಸಂಕ್ಷಿಪ್ತ ಪರಿಚಯ:
ಮರಿಗಂಗಪ್ಪ ಹಾಗೂ ಪುಟ್ಟಗೌರಮ್ಮ ದಂಪತಿಯ 8 ಮಕ್ಕಳ ಪೈಕಿ ಒಬ್ಬರಾಗಿ 1977ರಲ್ಲಿ ಜನಿಸಿದ್ದ ಇವರು ಮರಿಸ್ವಾಮಿ ಆಗಿ ಮಠಕ್ಕೆ ಪ್ರವೇಶ ನೀಡಿದ್ದರು. 8ನೇ ತರಗತಿವರೆಗೆ ಬಂಡೇಮಠದಲ್ಲಿ ಶಿಕ್ಷಣ ಪಡೆದಿದ್ದ ಇವರು ಬಳಿಕ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಮುಂದುವರೆಸಿದ್ದರು. ವೇದ, ಉಪನಿಷತ್, ವಿದ್ವತ್ ವ್ಯಾಸಂಗ ಮಾಡಿದ್ದ ಅವರು, ಸಿದ್ದಗಂಗಾ ಮಠದಲ್ಲೇ ಶ್ರೀಗಳಿಂದ ದೀಕ್ಷೆ ಪಡೆದಿದ್ದರು.

1997ರಲ್ಲಿ ಬಂಡೇಮಠದ ಅಧ್ಯಕ್ಷರಾಗಿ ಪೀಠವೇರಿದ್ದ ಶ್ರೀಗಳು ಇತ್ತೀಚೆಗಷ್ಟೆ ತಮ್ಮ ಪೀಠಾರೋಹಣದ 25ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಅನ್ನ ದಾಸೋಹ, ಅಕ್ಷರ ದಾಸೋಹ ಮಾಡುತ್ತಿದ್ದ ಶ್ರೀಗಳು ಬಂಡೇಮಠ ಮತ್ತು ಭಕ್ತರ ಸರ್ವತೋಮುಖ ಬೆಳವಣಿಗೆಯತ್ತ ಶ್ರಮಿಸುತ್ತಿದ್ದರು. ಮಠದ ಆವರಣದಲ್ಲೇ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಅವಕಶ ಕಲ್ಪಿಸಲಾಗಿತ್ತು. ಬಳಿಕ ಸಕಲ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಯಿತು.

ಇದನ್ನೂ ಓದಿ: Top 10 Polluted Cities: ಏಷ್ಯಾದ ಟಾಪ್-10 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ್ದೇ ಮೇಲುಗೈ..!

ಇದನ್ನೂ ಓದಿ: Biryani spices : ಬಿರಿಯಾನಿ ತಿಂದರೆ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತೆ : ವಿಚಿತ್ರ ಹೇಳಿಕೆ ನೀಡಿದ ಮಾಜಿ ಸಚಿವ

ramnagr bandemutt basavalinga swamiji committed suicide

Comments are closed.