ಆಲೂರು ರೇವ್ ಪಾರ್ಟಿ ಹಿಂದೆ ಸಿಸಿಬಿ ಪೊಲೀಸ್ ಕೈವಾಡ..? ವಿಡಿಯೋ ವೈರಲ್..!

ಹಾಸನ‌ : ರಾಜ್ಯದಾದ್ಯಂತ ಕುತೂಹಲ‌ ಮೂಡಿಸಿದ ಆಲೂರಿನ ಹೈದೂರು ರೇವ್ ಪಾರ್ಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರೇವ್ ಪಾರ್ಟಿ ಆಯೋಜಕ, ಪ್ರಮುಖ ಡ್ರಗ್ ಪೆಡ್ಲರ್ ಅತುಲ್ ಎಂಬಾತ ಮಂಗಳೂರಿನ ಸಿಸಿಬಿ ಪೊಲೀಸ್ ಸಿಬ್ಬಂದಿಯೊರ್ವರ ಮಗ ಅನ್ನೋ ಸ್ಪೋಟಕ ಸತ್ಯ ಇದೀಗ ಬಯಲಾಗಿದೆ. ಅಷ್ಟೇ ಅಲ್ಲಾ ರೆವ್ ಪಾರ್ಟಿ ಮಾಡಿದ ದಿನ ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಅರೆಸ್ಟ್ ಆಗಿದ್ದು ಇದೀಗ ಭಾರೀ ಕುತೂಹಲ ಮೂಡಿಸಿದೆ.

ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆಷಿರುವ ರೇವ್ ಪಾರ್ಟಿ ಆಯೋಜನೆ ಹಿಂದೆ ಮಹಿಳಾ ಪೊಲೀಸ್ ಸಿಬ್ಬಂದಿ ಕೈವಾಡ ಇತ್ತಾ ಅನ್ನೋ ಬಗ್ಗೆ ಅನುಮಾನ‌ ಮೂಡಿದೆ. ಮಾತ್ರವಲ್ಲ ಮತ್ತೋರ್ವ ಪೆಡ್ಲರ್ ನಾಸಿರ್ ಮನೆ ಮೇಲೆ ದಾಳಿ ಮಾಡಿರೊ ಪೊಲೀಸರಿಗೆ ಮತ್ತಷ್ಟು ಡ್ರಗ್ಸ್ ಪತ್ತೆಯಾಗಿರೋದು ಈ ಪಾರ್ಟಿ ಹಿಂದೆ ದೊಡ್ಡ ಡ್ರಗ್ಸ್ ಜಾಲವೇ ಅಡಗಿದೆಯಾ ಅನ್ನೊ ಶಂಕೆ ಮೂಡಿಸಿದೆ.

ಬೆಂಗಳೂರಿನಲ್ಲಿರುವ ಮನೆಯಲ್ಲಿ ಮತ್ತಷ್ಟು ಡ್ರಗ್ಸ್  ಪತ್ತೆಯಾಗಿದ್ದು ಮಾದಕ ಲೋಕದ ಕಹಾನಿ ಬಗೆದಷ್ಟು ವಿಶಾಲ ಆಗ್ತಿದೆ. ಏಪ್ರಿಲ್ 11 ರಂದು ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹೈದೂರು ಗ್ರಾಮದಲ್ಲಿ ನಡೆದಿದ್ದ ರೇವ್ ಪಾರ್ಟಿ ತನಿಖೆಯ ಆಳಕ್ಕೆ‌ ಇಳಿದಷ್ಟು ವಿಸ್ತಾರ ವಾಗುತ್ತಲೇ ಇದೆ. ಪ್ರಕರಣದ ತನಿಖೆಗಿಳಿದ ಪೊಲೀಸ ರಿಗೆ ಅಂದಿನ ಪಾರ್ಟಿಯ ಆಯೋಜಕ‌ ಪ್ರಮುಖ ಪೆಡ್ಲರ್ ಆಗಿರುವ ಮಂಗಳೂರಿನ ಅತುಲ್ ಎಂಬಾತ  ಮಂಗಳೂರಿನ ಸಿಸಿಬಿಯಲ್ಲಿ ಕರ್ತವ್ಯದಲ್ಲಿರುವ ಮಹಿಳಾ ಪೊಲೀಸ್ ಸಿಬ್ಬಂದಿಯ ಮಗ ಅನ್ನುವ  ಸ್ಪೋಟಕ ಸತ್ಯ ಹೊರಬಿದ್ದಿದೆ‌. ಜೊತೆಗೆ ಅಂದು ಅರೆಸ್ಟ್ ಆಗಿದ್ದ 24 ಮಹಿಳೆಯರಲ್ಲಿ ಆ ಮಹಿಳಾ ಪೊಲೀಸ್ ಕೂಡ ಓರ್ವ ಆರೋಪಿ ಅನ್ನೋದು ಬಯಲಾಗಿದೆ.

ತನ್ನ ಪುತ್ರನೇ ಪಾರ್ಟಿಯ ‌ನೇತಾರ, ಅವನೇ ಡ್ರಗ್ಸ್ ಸರಬರಾಜಿನ ರೂವಾರಿ ಎನ್ನೋ ಸತ್ಯಾ ಗೊತ್ತಿದ್ದೂ ತಾನೇ ಖುದ್ದು ಸ್ಥಳದಲ್ಲಿ ಹಾಜರಿದ್ದು ಎಲ್ಲದಕ್ಕೂ ರಕ್ಣಣೆ ನೀಡಿದ್ದರಾ ಅನ್ನೋ ಅನುಮಾನ ಮೂಡುತ್ತಿದೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರೋ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಪ್ರಕರಣದಲ್ಲಿ ಮಂಗಳೂರಿನ ಓರ್ವ ಮಹಿಳಾ ಪೊಲೀಸ್ ಇರೋದು, ಆಕೆಯ ಮಗನೇ ಪ್ರಕರಣದ ಪ್ರಮುಖ ಆರೋಪಿ ಅನ್ನೋದನ್ನ ಹೇಳಿದ್ದಾರೆ. ಘಟನೆಯಲ್ಲಿ ಮೂರನೇ ಆರೋಪಿ ಯಾಗಿರೋ ಬೆಂಗಳೂರಿನ ನಾಸಿರ್ ಮನೆ ಮೇಲೆ ದಾಳಿಮಾಡಿದ್ದು ಅಲ್ಲಿಯೂ ಕೂಡ ಡ್ರಗ್ಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಡ್ರಗ್ಸ್ ಕೇಸ್ ಹಿಂದೆ ದೊಡ್ಡ ಡ್ರಗ್ಸ್ ಜಾಲವೆ ಅಡಗಿದೆಯಾ ಎನ್ನೋ ಅನುಮಾನ ಮೂಡುವಂತೆ ಮಾಡಿದೆ.

ಬೆಂಗಳೂರು, ಮಂಗಳೂರು ಸೇರಿ ರಾಜ್ಯದ 8 ಪ್ರಮುಖ ನಗರಗಳಲ್ಲಿ ನೈಟ್ ಕರ್ಫ್ಯೂ ಇರೋ ಹಿನ್ನೆಲೆಯಲ್ಲಿ ತನ್ನ ರಾತ್ರಿ ಚಟುವಟಿಕೆಗಳನ್ನು  ಬೆಂಗಳೂರು – ಮಂಗಳೂರು ನಡುವಿನ ಹಾಸನದಲ್ಲಿ ನಡೆಸೋಕೆ ಪ್ಲಾನ್ ಮಾಡಿದ್ದ ಪೆಡ್ಲರ್ ಗಳು ಅದಕ್ಕಾಗಿ ಆಲೂರು ತಾಲ್ಲೂಕಿನ ಹೈದೂರು ಗ್ರಾಮದ ಕಾಫಿ ತೋಟದಲ್ಲಿರೋ ಮೋಟರ್ ಸೈಕಲ್ ಡೈರೀಸ್ ಎಂಬ ರೆಸಾರ್ಟ್ ಆಯ್ಕೆ ಮಾಡಿಕೊಂಡಿದ್ದರು. ಮುಂಬೈ, ಗೋವಾ, ಬೆಂಗಳೂರು, ಕೇರಳ ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿದ್ದ 300 ಜನ ಟೆಕ್ಕಿಗಳನ್ನ ಸೇರಿಸಿ ದೊಡ್ಡ ಪಾರ್ಟಿ ಆಯೋಜನೆ ಮಾಡಲಾಗಿತ್ತು.

https://youtu.be/UuYg0tADodE

ಅದಕ್ಕಾಗಿ ಪಾರ್ಟಿಗೆ ಬರುವವರ ಬೇಡಿಕೆ ಆದರಿಸಿ ಟೆಂಟ್, ಮದ್ಯ, ಡ್ರಗ್ಸ್ ಎಲ್ಲವನ್ನೂ ಅಲ್ಲಿ ಸರಬರಾಜು ಮಾಡಲಾಗಿತ್ತು, ಈ ಪಾರ್ಟಿ ಮೇಲೆ ಏಪ್ರಿಲ್ 10 ರ ರಾತ್ರಿ ದಾಳಿ ಮಾಡಿದ್ದ ಎಸ್ಪಿ ಶ್ರೀನಿವಾಸಗೌಡ ನೇತೃತ್ವದ ತಂಡ 24 ಮಹಿಳೆಯರು ಸೇರಿ 134 ಜನರನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿತ್ತು. ಬಂಧಿತರ ರಕ್ತದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ನಿರೀಕ್ಷೆಯಲ್ಲಿರುವಾಗಲೇ ಈ ಪಾರ್ಟಿ ಹಿಂದೆ ಪೊಲೀಸ್ ಹಾಗೂ ಅವರ ಕುಟುಂಬದವರೇ ಇರುವ ಸ್ಪೋಟಕ ಸತ್ಯ ಬಯಲಾಗಿದೆ. ಹಾಸನದ ಆಲೂರು ಸಕಲೇಶಪುರದಲ್ಲಿ ಹಲವು ರೆಸಾರ್ಟ್ ಗಳಿವೆ, ಸಾಕಷ್ಟು ಕಡೆ ಇದೇ ರೀತಿಯ ಚಟುವಟಿಕೆ ನಡೆಯುತ್ತಿರೊ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಹಾಸನದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ್ದ ರೇವ್ ಪಾರ್ಟಿ ವಿಚಾರ ತನಿಖೆಯ ಆಳಕ್ಕೆ ಇಳಿದಷ್ಟು ಭಯಾನಕ ಸತ್ಯಗಳು ಬಯಲಾಗುತ್ತಿವೆ. ಪ್ರಮುಖ ಆರೋಪಿ ಬಂಧನದ ಬಳಿಕವೇ  ಈ ಡ್ರಗ್ಸ್ ಮಾಫಿಯಾ ಹಿಂದೆ ಯಾರಿದ್ದಾರೆ ಎನ್ನೋ ಅಸಲಿ ಸತ್ಯ ಬಯಲಾಗಲಿದೆ.

Comments are closed.