ಫೋನ್ ಸ್ಲೋ ಆಗಿದೆಯೇ? ಮೊದಲು ಈ ಆ್ಯಪ್‌ಗಳನ್ನು ಡಿಲೀಟ್ ಮಾಡಿ!
ಬಳಸದ ಆ್ಯಪ್‌ಗಳನ್ನು ಸಮಯಕ್ಕೆ ತೆಗೆದುಹಾಕುವುದರಿಂದ ಫೋನ್ ವೇಗ ಹೆಚ್ಚುವುದರ ಜೊತೆಗೆ ಸ್ಟೋರೇಜ್ ಖಾಲಿಯಾಗುತ್ತದೆ. ಬ್ಯಾಟರಿ ಕಾರ್ಯಕ್ಷಮತೆ ಸುಧಾರಿಸಿ, ವೈಯಕ್ತಿಕ ಡೇಟಾ ಸುರಕ್ಷತೆಯೂ ಮತ್ತಷ್ಟು ಬಲವಾಗುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ ಹೊಸ ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಸಾಮಾನ್ಯ. ಆದರೆ ಒಮ್ಮೆ ಬಳಸಿದ ಬಳಿಕ ಮತ್ತೆ ತೆರೆಯದ ಆ್ಯಪ್‌ಗಳು ತಿಂಗಳುಗಟ್ಟಲೆ ಫೋನ್‌ನಲ್ಲೇ ಉಳಿಯುತ್ತವೆ. ಇಂತಹ ಬಳಸದ ಆ್ಯಪ್‌ಗಳು ಫೋನ್ ವೇಗವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ನಿಮ್ಮ ವೈಯಕ್ತಿಕ ಮಾಹಿತಿಗೂ ಅಪಾಯ ಉಂಟುಮಾಡಬಹುದು ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸುತ್ತಿದ್ದಾರೆ.
ಒಮ್ಮೆ ಇನ್‌ಸ್ಟಾಲ್ ಮಾಡಿದ ಅನೇಕ ಆ್ಯಪ್‌ಗಳಿಗೆ ಕ್ಯಾಮೆರಾ, ಮೈಕ್ರೋಫೋನ್, ಲೊಕೇಶನ್, ಸಂಪರ್ಕ ಪಟ್ಟಿಯಂತಹ ಹಲವು ಅನುಮತಿಗಳನ್ನು ನೀಡಿರುತ್ತೇವೆ. ಆ್ಯಪ್ ಬಳಸದೇ ಇದ್ದರೂ ಕೆಲವು ಆ್ಯಪ್‌ಗಳು ಹಿನ್ನಲೆಯಲ್ಲಿ ಕಾರ್ಯನಿರ್ವಹಿಸಿ ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇರುತ್ತದೆ. ಭದ್ರತಾ ದೋಷ ಉಂಟಾದರೆ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಅಪಾಯವೂ ಹೆಚ್ಚುತ್ತದೆ.
ಇದರ ಜೊತೆಗೆ ಬಳಸದ ಆ್ಯಪ್‌ಗಳು ಹಿನ್ನಲೆಯಲ್ಲಿ ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮಾಡುವುದು, ನೋಟಿಫಿಕೇಶನ್ ಕಳುಹಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತವೆ. ಇದರಿಂದ ಫೋನ್ ನಿಧಾನವಾಗುವುದು, ಬ್ಯಾಟರಿ ಬೇಗ ಖಾಲಿಯಾಗುವುದು ಹಾಗೂ ಮೊಬೈಲ್ ಡೇಟಾ ಅನಗತ್ಯವಾಗಿ ಬಳಕೆಯಾಗುವುದು ಸಾಮಾನ್ಯ ಸಮಸ್ಯೆಗಳಾಗಿವೆ.
ಸ್ಟೋರೇಜ್ ಸಮಸ್ಯೆಯೂ ಇದೇ ಕಾರಣದಿಂದ ಹೆಚ್ಚಾಗುತ್ತದೆ. ಹೆಚ್ಚಿನ ಜಾಗವನ್ನು ಆಕ್ರಮಿಸುವ ಆ್ಯಪ್‌ಗಳಿಂದ ಫೋಟೋ, ವಿಡಿಯೊ ಅಥವಾ ಅಗತ್ಯ ದಾಖಲೆಗಳನ್ನು ಉಳಿಸಲು ಸ್ಥಳದ ಕೊರತೆ ಎದುರಾಗಬಹುದು. ಆದ್ದರಿಂದ ಅಗತ್ಯವಿಲ್ಲದ ಆ್ಯಪ್‌ಗಳನ್ನು ಸಮಯಕ್ಕೆ ಅಳಿಸುವುದು ಉತ್ತಮ ಅಭ್ಯಾಸವಾಗಿದೆ.
ಭವಿಷ್ಯದಲ್ಲಿ ಆ್ಯಪ್ ಬೇಕಾಗಬಹುದು ಎಂದು ಭಾವಿಸಿದರೆ, ಐಫೋನ್‌ನಲ್ಲಿ Offload App ಹಾಗೂ ಆಂಡ್ರಾಯ್ಡ್‌ನಲ್ಲಿ App Archiving ಸೌಲಭ್ಯ ಬಳಸಬಹುದು. ಇದರಿಂದ ಆ್ಯಪ್ ತೆಗೆದುಹಾಕಿದರೂ ಅದರಲ್ಲಿದ್ದ ವೈಯಕ್ತಿಕ ಡೇಟಾ ಸುರಕ್ಷಿತವಾಗಿರುತ್ತದೆ.
ಇನ್ನೊಂದು ಮುಖ್ಯ ವಿಷಯವೆಂದರೆ, ಆ್ಯಪ್ ಅನ್‌ಇನ್‌ಸ್ಟಾಲ್ ಮಾಡುವ ಮೊದಲು ಕಡ್ಡಾಯವಾಗಿ ಲಾಗ್‌ಔಟ್ ಆಗಬೇಕು. ಆ ಆ್ಯಪ್ ಇನ್ನು ಮುಂದೆ ಬಳಸುವ ಉದ್ದೇಶವೇ ಇಲ್ಲದಿದ್ದರೆ, ಸಾಧ್ಯವಾದರೆ ಸಂಬಂಧಿತ ಖಾತೆಯನ್ನೂ ಶಾಶ್ವತವಾಗಿ ಅಳಿಸಬೇಕು. ಇದರಿಂದ ನಿಮ್ಮ ಮಾಹಿತಿ ಕಂಪನಿಯ ಸರ್ವರ್‌ಗಳಲ್ಲಿ ಉಳಿಯುವ ಸಾಧ್ಯತೆ ಕಡಿಮೆಯಾಗುತ್ತದೆ.
ತಜ್ಞರ ಸಲಹೆಯಂತೆ, ಕನಿಷ್ಠ ಮೂರು ತಿಂಗಳಿಗೊಮ್ಮೆ ಫೋನ್‌ನಲ್ಲಿರುವ ಎಲ್ಲಾ ಆ್ಯಪ್‌ಗಳನ್ನು ಪರಿಶೀಲಿಸಿ. ಅಗತ್ಯವಿಲ್ಲದವುಗಳನ್ನು ಅಳಿಸುವುದರಿಂದ ಫೋನ್ ವೇಗ ಹೆಚ್ಚುವುದು, ಬ್ಯಾಟರಿ ಕಾರ್ಯಕ್ಷಮತೆ ಸುಧಾರಿಸುವುದು, ಸ್ಟೋರೇಜ್ ಖಾಲಿಯಾಗುವುದು ಮತ್ತು ಡಿಜಿಟಲ್ ಸುರಕ್ಷತೆ ಮತ್ತಷ್ಟು ಬಲವಾಗುವುದು.

