ಹ್ಯಾಪಿ ಬರ್ತ್‌ಡೇ ಗೂಗಲ್: ಕಾಗುಣಿತದ ಒಂದು ಚಿಕ್ಕ ತಪ್ಪಿನಿಂದ ಹೊಸ ಸರ್ಚ್ ಇಂಜಿನ್ ಹುಟ್ಟಿದ್ದೇಗೆ?
Happy 27th Birthday Google: ಇಂಟೆರ್‌ನೆಟ್ ಬಳಸುವ ಪ್ರತಿಯೊಬ್ಬರಿಗೂ ಗೂಗಲ್ ಗೊತ್ತೇ ಇದೆ. ದಿನವೊಂದಕ್ಕೆ ಅದೆಷ್ಟೋ ಜನ, ಅದೆಷ್ಟೋ ಬಾರಿ ಗೂಗಲ್‌ನ ಒಳಹೊಕ್ಕು ಹೊರ ಬರುತ್ತಾರೆ.
ಜಗತ್ತಿನ ಅದ್ಯಾವುದೋ ಮೂಲೆಯಲ್ಲಿದ್ದವರೂ ಸಹ ತಮಗೆ ಬೇಕಾದ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಹುಡುಕಿ ಪಡೆದುಕೊಳ್ಳುತ್ತಾರೆ. ಜಗತ್ತಿನ ಅತಿ ದೊಡ್ಡ ಸರ್ಚ್ ಎಂಜಿನ್ ದೈತ್ಯ ಗೂಗಲ್ ಇಂದು (ಸೆಪ್ಟೆಂಬರ್ 27) ತನ್ನ 27 ನೇ ಹುಟ್ಟುಹಬ್ಬ (Happy 27th Birthday Google) ಆಚರಿಸಿಕೊಳ್ಳುತ್ತಿದೆ.
ಅಂದು ಮೆನ್ಲೋ ಪಾರ್ಕ್‌ನ ಒಂದು ಸಣ್ಣ ಗ್ಯಾರೇಜ್‌ನಲ್ಲಿ ಹುಟ್ಟಿಕೊಂಡ ಒಂದು ಚಿಕ್ಕ ಕಲ್ಪನೆ ಇಂದು ಜಗತ್ತಿನ ದಿಕ್ಕನ್ನೇ ಬದಲಿಸಿದೆ. ವಿಶ್ವದಾದ್ಯಂತ ಶತಕೋಟಿ ಜನರು ತಮ್ಮೆಲ್ಲ ಪ್ರಶ್ನೆ, ಅನುಮಾನಗಳಿಗೆ ಸುಲಭವಾಗಿ ಉತ್ತರ ಕಂಡುಕೊಳ್ಳುವ ಸಾಧನವಾಗಿ ನಮ್ಮ ಕಣ್ಮುಂದೆ ನಿಂತಿದೆ.
ಗೂಗಲ್ ಬಳಸುವ ಪ್ರತಿಯೊಬ್ಬರ ಮನದಲ್ಲೂ ಒಮ್ಮೆಯಾದರೂ ಈ ಗೂಗಲ್ ಶಬ್ದ ಹೇಗೆ ಹುಟ್ಟಿಕೊಂಡಿತು ಎಂಬ ಪ್ರಶ್ನೆ ಕಾಡದೇ ಇರದು. ಗೂಗಲ್‌ನ ಇತಿಹಾಸ ತಿಳಿಯಲು ಅದರ ಹುಟ್ಟುಹಬ್ಬದ ದಿನಕ್ಕಿಂತ ಒಳ್ಳೆಯ ದಿನ ಸಿಗಲಾರದು.
ಹಾಗಾದರೆ ಗೂಗಲ್ ಎಂದರೆ ಏನು? ಅದು ಹುಟ್ಟಿಕೊಂಡ ಬಗೆ ಹೇಗೆ ಎಂದು ತಿಳಿಯೋಣ.
ಗೂಗಲ್ ಎಂದರೇನು?
ಗಣಿತದಲ್ಲಿ ಗೂಗೋಲ್ (Googol) ಎಂಬ ಒಂದು ಪದವಿದೆ. ಅದರ ಅರ್ಥ 1 ರ ಮುಂದೆ 100 ಸೊನ್ನೆಗಳು ಅಥವಾ 10 ಘಾತ 100 ಎಂದು ಸೂಚಿಸುವ ಪದವಾಗಿದೆ. ಇದನ್ನು ಕಂಡುಹಿಡಿದವರು ಗಣಿತಜ್ಞ ಎಡ್ವರ್ಡ್ ಕಾಸ್ನರ್ ನ ಸೋದರಳಿಯ ಮಿಲ್ಟನ್ ಸಿರೋಟ್ಟಾ. ಗೂಗಲ್ ಎಂಬ ಪದವು ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುವ ಉದ್ದೇಶವಾಗಿ ಮೂಡಿಬಂದಿದೆ.
ಇದನ್ನೂ ಓದಿ: ಕೆಲಸ ಕದಿಯುವ AI: ಭವಿಷ್ಯದ ಬಗ್ಗೆ ಕಳವಳ ಹಂಚಿಕೊಂಡ ಜೆಫ್ರಿ ಹಿಂಟನ್
ಗೂಗಲ್‌ನ ಹಿಂದಿದೆ ಈ ಕಥೆ
ಗೂಗಲ್ ಸರ್ಚ್ ಎಂಜಿನ್ ಅನ್ನು ಮೊದಲು ಗೂಗಲ್ ಎಂದು ಕರೆಯುತ್ತಿರಲಿಲ್ಲ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ಒಂದು ಸರ್ಚ್ ಎಂಜಿನ್ ಪ್ರಾರಂಭಿಸುವ ಆಲೋಚನೆ ಬಂದಿತು.
ಆಗ ಅದರ ಹೆಸರನ್ನು ಗೂಗಲ್ ಎಂದು ಇಡಬೇಕೆಂಬ ಯಾವ ಯೋಚನೆಯೂ ಅವರ ಮನಸ್ಸಿನಲ್ಲಿರಲಿಲ್ಲ. ಅದನ್ನು ಮೊದಲಿಗೆ ಬ್ಯಾಕ್‌ರಬ್ ಎಂಬ ಹೆಸರಿನಿಂದ ಕರೆಯಲಾಯಿತು. ಆದರೆ 1997 ರಲ್ಲಿ ಕಂಪನಿಯು ಬ್ಯಾಕ್‌ರಬ್‌ಗೆ ಒಂದು ಹೊಸ ಹೆಸರನ್ನು ಕಂಡುಹಿಡಿಯುವ ಆಲೋಚನೆ ಪ್ರಾರಂಭವಾಯಿತು.
ಅದಕ್ಕಾಗಿ ಒಂದು ತಂಡ ರೂಪಿಸಿತು. ಈ ಸರ್ಚ್ ಎಂಜಿನ್‌ನಲ್ಲಿ ಅಡಗಿರುವ ಅಗಾಧ ಪ್ರಮಾಣದ ಉತ್ತರಗಳನ್ನು ಪ್ರತಿಬಿಂಬಿಸುವ ಯಾವುದಾದರೂ ಒಂದು ಸೂಕ್ತವಾದ ಹೆಸರು ಇಡಬೇಕು ಎಂಬುದು ಅವರ ಬಯಕೆಯಾಗಿತ್ತು.
ಆಗ ಅವರ ತಂಡವು ಗೂಗೋಲ್‌ಪ್ಲೆಕ್ಸ್ ಎಂಬ ಊಹಿಸಲೂ ಅಸಾಧ್ಯವಾದ ಗಾತ್ರದ ಸಂಖ್ಯೆ ಅಂದರೆ 1 ನಂತರ ಅದರ ಮುಂದೆ ಬರೆಯಬಹುದಾದ ಸೊನ್ನೆಗಳು ಗೂಗೋಲ್ ಎಂಬ ಸಂಕ್ಷಿಪ್ತ ಪದವನ್ನು ನೀಡಿತು.
ಹೆಸರನ್ನು ಹುಡುಕುವ ತಂಡದ ಮತ್ತೊಬ್ಬ ಸ್ಟ್ಯಾನ್‌ಫೋರ್ಡ್‌ನ ಪದವಿ ವಿದ್ಯಾರ್ಥಿ ಸೀನ್ ಆಂಡರ್ಸನ್, ಗೂಗೋಲ್ ಹೆಸರನ್ನು ತಮ್ಮ ವೆಬ್‌ಸೈಟ್‌ಗೆ ನೋಂದಾಯಿಸುವ ಸಲುವಾಗಿ ಇಂಟರ್ನೆಟ್‌ನಲ್ಲಿ ಆ ಹೆಸರು ಸಿಗಬಹುದೇ ಎಂದು ಹುಡುಕಾಟ ನಡೆಸಿದನು.
ಆದರೆ ಅವನು ಆ ಹೆಸರನ್ನು ಗೂಗೋಲ್ (Googol) ಬದಲಿಗೆ ಗೂಗಲ್ (Google) ಎಂದು ಕಾಗುಣಿತದಲ್ಲಿ ಸ್ಪಲ್ಪ ತಪ್ಪಾಗಿ ನಮೂದಿಸಿ ಹುಡುಕಿದ್ದನು. ಆ ಹೆಸರು ಲಭ್ಯವಿರುವ ಡೊಮೇನ್ ಹೆಸರಾಗಿತ್ತು.
ಈ ಹೆಸರನ್ನು ಲ್ಯಾರಿ ಪೇಜ್ ಇಷ್ಟಪಟ್ಟರು. ಕೆಲವೇ ಗಂಟೆಗಳಲ್ಲಿ ಗೂಗಲ್.ಕಾಮ್ (Google.com) ಅನ್ನು ವೆಬ್‌ಸೈಟ್ ಆಗಿ ನೋಂದಾಯಿಸಲಾಯಿತು. ಹೀಗೆ ಕಾಗುಣಿತದ ತಪ್ಪಿನಿಂದ ಹುಟ್ಟಿಕೊಂಡ ಒಂದು ಪದ ಇಂದು ಹುಡುಕಾಟದ ಜಗತ್ತಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.
ಒಂದು ಚಿಕ್ಕ ಗ್ಯಾರೇಜ್‌ನಲ್ಲಿ ಹುಟ್ಟಿ ಇಂದು ಜಗತ್ತನ್ನೇ ಆಳುತ್ತಿರುವ ಗೂಗಲ್ ತನ್ನ ಮೈಲಿಗಲ್ಲನ್ನು ಸ್ಮರಿಸಲು ಸೆಪ್ಟೆಂಬರ್ 27 ರಂದು ತನ್ನ ಜನ್ಮದಿನವನ್ನು ಆಚರಿಸುತ್ತದೆ.
ಗೂಗಲ್ ಈಗ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯಾಗಿ ರೂಪುಗೊಂಡಿದೆ. ಸದ್ಯ ಸುಂದರ್ ಪಿಚೈ ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಆಗಿದ್ದಾರೆ.
ಇದನ್ನೂ ಓದಿ: ಅಮೆಜಾನ್, ಕ್ಲಿಪ್‌ಕಾರ್ಟ್‌ನಲ್ಲಿ ವರ್ಷದ ಅತಿದೊಡ್ಡ ಹಬ್ಬದ ಮಾರಾಟ ಪ್ರಾರಂಭ
(Google celebrate 27th Birthday what does google really mean)


