ದುಬಾರಿಯಾಯ್ತು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ S26 ಸರಣಿ ಮೊಬೈಲ್‌ಗಳು: ಆಪಲ್‌ ಫೋನ್‌ ಖರೀದಿಯೂ ಕೈಸುಡಲಿದೆಯಾ?

Samsung Galaxy S26 Series: ಬೆಲೆ ಏರಿಕೆಯ ಬಿಸಿ ಸ್ಮಾರ್ಟ್‌ಫೋನ್‌ಗಳ ದುನಿಯಾಕ್ಕೂ ತಟ್ಟಿದಂತಿದೆ. ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ S26 ಸರಣಿಯನ್ನು ಬಿಡುಗಡೆಮಾಡಿದೆ.

ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅದರ ಮಾರಾಟ ದರವನ್ನು ಸಹ ಬಹಿರಂಗಪಡಿಸಿದೆ. RAM ಮತ್ತು ಮೆಮೊರಿ ಚಿಪ್‌ಗಳಂತಹ ಯುನಿಟ್‌ಗಳ ತಯಾರಿಕೆಯ ವೆಚ್ಚ ಹೆಚ್ಚಾಗುತ್ತಿರುವ ಕಾಲದಲ್ಲಿ ಸ್ಮಾರ್ಟ್‌ಫೋನ್‌ ತಯಾರಕರು ಫೋನ್‌ ಬೆಲೆ ಹೆಚ್ಚಿಸುತ್ತಾರೆಯೇ ಎಂಬ ದೀರ್ಘಕಾಲದ ಪ್ರಶ್ನೆಗೆ ತೆರೆಬಿದ್ದಿದೆ.

2026ರ ಮೊದಲ ಫ್ಲಾಗ್‌ಶಿಪ್‌ ಸರಣಿಯ ಫೋನ್‌ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಬೆಲೆ ಏರಿಸಿಕೊಂಡಿದೆ. ಕೆಲವು ವಿನಾಯಿತಿಗಳನ್ನು ನೀಡಿದ್ದರೂ ಸಹ ಬೆಲೆ ಏರಿಸಿಕೊಂಡಿದ್ದಂತೂ ಕಾಣಬಹುದಾಗಿದೆ.

ಇದರಿಂದಾಗಿ ಜಗತ್ತಿನ ಮೊಟ್ಟಮೊದಲ ಪ್ರೈವೆಸಿ ಡಿಸ್ಪ್ಲೇ ಮೊಬೈಲ್‌ ಖರೀದಿಸಲು ಗ್ರಾಹಕರು ಹೆಚ್ಚು ಬೆಲೆ ತೆತ್ತಬೇಕಾಗಿದೆ. ಹಾಗಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಸರಣಿಯ ಬೆಲೆ ಎಷ್ಟು ಹೆಚ್ಚಾಗಿದೆ ಎಂದು ನೋಡೋಣ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಸರಣಿಯ ಬೆಲೆ ಎಷ್ಟು ಏರಿದೆ?

ಯುಎಸ್‌ನಲ್ಲಿ ಗ್ಯಾಲಕ್ಸಿ S26 ನ 256 ಜಿಬಿ ಮಾದರಿಯ ಫೋನ್‌ ಬೆಲೆಯು $899 ರಿಂದ ಪ್ರಾರಂಭವಾಗುತ್ತಿದೆ. ಇದು ಗ್ಯಾಲಕ್ಸಿ S25ಗೆ ಹೋಲಿಸಿದರೆ $100 ಏರಿಕೆಯಾಗಿದೆ.

ಅದೇ ರೀತಿ ಗ್ಯಾಲಕ್ಸಿ S26 ಪ್ಲಸ್‌ನ ಬೆಲೆಯು $1,099 ರಿಂದ ಪ್ರಾರಂಭವಾಗುತ್ತದೆ. ಇದರ ಹಿಂದಿನ ಮೊಬೈಲ್‌ನ ಬೆಲೆ $999
ಆಗಿತ್ತು. ಅಂದರೆ ಇದೂ ಕೂಡಾ $100 ಏರಿಕೆಯಾಗಿದೆ.

ಆದರೆ ಪ್ರೀಮಿಯಂ ಗ್ಯಾಲಕ್ಸಿ S26 ಅಲ್ಟ್ರಾದ ಆರಂಭಿಕ ಬೆಲೆಯು $1,299 ಆಗುವ ಮೂಲಕ ಸ್ಥಿರವಾಗಿದೆ.

ಭಾರತದಲ್ಲಿ ಬೆಲೆ ಎಷ್ಟು ಹೆಚ್ಚಾಗಿದೆ?

ಭಾರತದ ಮಾರುಕಟ್ಟೆಯಲ್ಲಿಯೂ ಇದರ ಬೆಲೆ ಹೆಚ್ಚಳ ದೃಢಪಟ್ಟಿದೆ. ಭಾರತದಲ್ಲಿ ಗ್ಯಾಲಕ್ಸಿ S26 ಅಲ್ಟ್ರಾದ ಬೆಲೆ 1,39,999 ರೂ.ಗಳಿಂದ ಪ್ರಾರಂಭವಾಗುತ್ತದೆ. ಅಂದರೆ ಅದರ ಹಿಂದಿನದಕ್ಕಿಂತ 10,000 ರೂ. ಹೆಚ್ಚಳ ಕಂಡಿದೆ.

ಗ್ಯಾಲಕ್ಸಿ S26 ಫೋನ್‌ ಬೆಲೆ 87,999 ರೂ. ರಿಂದ ಪ್ರಾರಂಭವಾಗುತ್ತದೆ. ಅಂದರೆ ಅದರಲ್ಲೂ ಕೂಡಾ ಸುಮಾರು ರೂ. 7,000 ಹೆಚ್ಚಾಗಿರುವುದನ್ನು ಗಮನಿಸಬಹುದು.

ಆದರೆ ಅತಿ ಹೆಚ್ಚು ಏರಿಕೆಯು S26 ಪ್ಲಸ್ ನಲ್ಲಿ ಕಾಣಬಹುದು. ಗ್ಯಾಲಕ್ಸಿ S26 ಪ್ಲಸ್‌ ಬೆಲೆ 1,19,999 ರೂ.ಕ್ಕೆ ನಿಗದಿಯಾಗಿದೆ. ಇದರ ಹಿಂದಿನ ಗ್ಯಾಲಕ್ಸಿ S25 ಪ್ಲಸ್‌ಗಿಂತ ಬರೋಬ್ಬರಿ 20,000 ರೂ. ಹೆಚ್ಚಾಗಿದೆ.

ಇದನ್ನೂ ಓದಿ: ಎಐ ಲೋಕದಲ್ಲಿ ಗೂಗಲ್ ಧಮಾಕಾ: ‘ನ್ಯಾನೋ ಬನಾನಾ 2’ ಫೀಚರ್ಸ್‌ಗೆ ನೆಟ್ಟಿಗರು ಫಿದಾ

ಐಫೋನ್‌ 17e ಮತ್ತು ಐಫೋನ್‌ 18 ಫೋನ್‌ಗಳ ಬೆಲೆಯೂ ಹೆಚ್ಚಾಗಲಿದೆಯಾ?

ಯಾವುದಾದರೂ ಒಂದು ಕಂಪನಿ ತನ್ನ ಮೊಬೈಲ್‌ಗಳ ಬೆಲೆ ಏರಿಸಿದೆ ಅಂದ್ರೆ ಉಳಿದ ಕಂಪನಿಗಳೂ ಬೆಲೆ ಏರಿಸುವುದು ಸಾಮಾನ್ಯ. ಆದರೆ ಐಫೋನ್‌ ಇದಕ್ಕೆ ವಿರುದ್ಧವಾಗಿದೆ. ಆಪ‌ಲ್‌ ಬೆಲೆ ಏರಿಕೆಗೆ ತನ್ನ ವಿರೋಧ ವ್ಯಕ್ತಪಡಿಸಿದೆ. ಅದರ ಪ್ರಕಾರ ಬೃಹತ್‌ ಪ್ರಮಾಣದ ಹಾಗೂ ದೀರ್ಘಕಾಲದ ಪೂರೈಕೆದಾರರ ಒಪ್ಪಂದಗಳಿಂದ ಕಂಪನಿಗಳು ಲಾಭವನ್ನು ಗಳಿಸಿವೆ. ಜೊತೆಗೆ ಈ ಅಲ್ಪಾವಧಿಯ ವೆಚ್ಚದ ಒತ್ತಡಗಳನ್ನು ಸರಿದೂಗಿಸಿಕೊಳ್ಳುತ್ತದೆ ಎಂದು ಹೇಳುತ್ತದೆ. ವಿಶೇಷವಾಗಿ ಆಪಲ್‌ ಆರಂಭಿಕ ಹಂತದ ಮಾದರಿಗಳಿಗೆ ಮೂಲ ಬೆಲೆಗಳನ್ನೇ ಸ್ಥಿರವಾಗಿಡುವ ಸಾಧ್ಯತೆಯಿದೆ. ಅದರಲ್ಲೂ ಐಫೋನ್‌ 17 e ಫೋನ್‌ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಯೂ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೆ ಕಂಪನಿಯು ಐಫೋನ್‌ 18ಪ್ರೋ ಮತ್ತು ಪೋ ಮ್ಯಾಕ್ಸ್‌ನ ಹೆಚ್ಚಿನ ಶೇಖರಣಾ ಸಾಮರ್ಥ್ಯದ ಫೋನ್‌ಗಳಿಗೆ ಸಣ್ಣ ಪ್ರಮಾಣದಲ್ಲಿ ಹೆಚ್ಚಿನ ಬೆಲೆಯನ್ನು ಪರಿಚಯಿಸಬಹುದು. ಗ್ಯಾಲಕ್ಸಿ S26 ಬೆಲೆ ಏರಿಕೆಯನ್ನು ಸಂಕೇತಿಸುತ್ತಿದ್ದರೂ ಆಪಲ್‌ ಆ ದಾರಿಯನ್ನು ಅನುಸರಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories