App based auto transport: ಆಪ್ ಆಧಾರಿತ ಆಟೋ ಸಂಚಾರ: ಸಾಧಕ–ಬಾಧಕ ಚರ್ಚಿಸಿ ನಿರ್ಧಾರ : ಜಿಲ್ಲಾಧಿಕಾರಿ
ಉಡುಪಿ : App based auto transport: ಉಡುಪಿ ನಗರ ವ್ಯಾಪ್ತಿಯಲ್ಲಿ ಡಿಜಿಟಲ್ ಆಪ್ ಆಧಾರಿತ ಆಟೋ ಸಂಚಾರಕ್ಕೆ ಸರಕಾರದ ಪರವಾನಿಗೆ ಕಡ್ಡಾಯವಾಗಿದ್ದು, ಪರವಾನಿಗೆ ಪಡೆದ ಬಳಿಕ ಅದರ ಸಾಧಕ–ಬಾಧಕಗಳನ್ನು ಚರ್ಚಿಸಿ ಅನುಷ್ಠಾನಗೊಳಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.
ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮಣಿಪಾಲ್(Manipal) ಸೇರಿದಂತೆ ಉಡುಪಿ ನಗರ ವ್ಯಾಪ್ತಿಯಲ್ಲಿ ನಮ್ಮ ಯಾತ್ರಿ ಮತ್ತು ರ್ಯಾಪಿಡ್ ಆಪ್ ಆಧಾರಿತ ಆಟೋ ಸಂಚಾರದ ಬಗ್ಗೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆಪ್ ಕಂಪನಿಗಳು ಅಗತ್ಯ ದಾಖಲೆಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಿದ ಬಳಿಕ ಸ್ಥಳೀಯ ಆಟೋ ಚಾಲಕರ ಸಂಘಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಉಡುಪಿ ನಗರದ ವಲಯ–1ರಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಆಟೋರಿಕ್ಷಾಗಳು ಸಂಚರಿಸುತ್ತಿದ್ದು, ಎಲ್ಲಾ ಆಟೋಗಳು ಕಡ್ಡಾಯವಾಗಿ ಮೀಟರ್ ಬಳಸಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹಲವು ವರ್ಷಗಳಿಂದ ಆಟೋ ವೃತ್ತಿಯನ್ನು ನಂಬಿಕೊಂಡಿರುವ ಚಾಲಕರ ಅಭಿಪ್ರಾಯಗಳಿಗೂ ಆದ್ಯತೆ ನೀಡಲಾಗುವುದು ಎಂದರು.
Also Read: Udupi: ಎರಡು ವಾರಗಳಲ್ಲಿ ಅಂಬಾಗಿಲು–ಬಲೈಪಾದೆ ಜಂಕ್ಷನ್ ಸಂಚಾರ ಸಿಗ್ನಲ್ ಕಾರ್ಯಾರಂಭ ಸಾಧ್ಯತೆ
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, ಆಪ್ ಆಧಾರಿತ ಆಟೋ ಸಂಚಾರದಿಂದ ಇತರೆ ಆಟೋ ಚಾಲಕರಿಗೆ ಅನ್ಯಾಯವಾಗದಂತೆ ಕ್ರಮ ವಹಿಸಬೇಕು ಎಂದರು. ಪರವಾನಿಗೆ ಇಲ್ಲದೆ ನಗರ ವ್ಯಾಪ್ತಿಯಲ್ಲಿ ಆಟೋ ಸಂಚರಿಸುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ಯಶ್ಪಾಲ್ ಎ. ಸುವರ್ಣ, ಆಟೋ ಚಾಲಕರು ವಲಯಗಳ ಸ್ಪಷ್ಟ ಗುರುತಿಗಾಗಿ ಕಲರ್ ಕೋಡಿಂಗ್, ಹೊಸ ಆಟೋ ನಿಲ್ದಾಣ ನೋಂದಣಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಸಭೆಯಲ್ಲಿ ಪೌರಾಯುಕ್ತರು, ಸಾರಿಗೆ ಅಧಿಕಾರಿಗಳು, ಆಟೋ ಚಾಲಕರು ಹಾಗೂ ಆಪ್ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



