Udupi Court Bomb Threat : ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಶೋಧ
ಬಾಂಬ್ ಬೆದರಿಕೆ ಸಂದೇಶ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಉಡುಪಿ ನಗರ ಠಾಣೆ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ.

ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶವೊಂದು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂಕೀರ್ಣದಲ್ಲಿ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಇಡೀ ಸಂಕೀರ್ಣದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬಾಂಬ್ ಬೆದರಿಕೆ ಸಂದೇಶ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಉಡುಪಿ ನಗರ ಠಾಣೆ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ನ್ಯಾಯಾಲಯ ಸಂಕೀರ್ಣದ ಸಂಪೂರ್ಣ ಪ್ರದೇಶವನ್ನು ಜಾಲಾಡಲಾಗುತ್ತಿದೆ.
ಸಾರ್ವಜನಿಕರ ತಪಾಸಣೆ, ಆತಂಕದ ವಾತಾವರಣ:
ಭದ್ರತಾ ದೃಷ್ಟಿಯಿಂದ ನ್ಯಾಯಾಲಯ ಆವರಣದ ವಿವಿಧ ಕಟ್ಟಡಗಳು, ಕಚೇರಿಗಳು ಹಾಗೂ ಸಾರ್ವಜನಿಕರು ಸಂಚರಿಸುವ ಜಾಗಗಳಲ್ಲಿ ಸೂಕ್ಷ್ಮ ತಪಾಸಣೆ ನಡೆಸಲಾಗುತ್ತಿದೆ. ಕೋರ್ಟ್‌ಗೆ ಆಗಮಿಸುವ ಪ್ರತಿಯೊಬ್ಬ ಸಾರ್ವಜನಿಕರನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಒಳಗೆ ಬಿಡಲಾಗುತ್ತಿದೆ. ದಿಢೀರ್ ನಡೆದ ಈ ಬೆಳವಣಿಗೆಯಿಂದಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು.
ಇದನ್ನೂ ಓದಿ : ಉಡುಪಿ : ನವಜಾತ ಶಿಶು ಅಕ್ರಮ ಮಾರಾಟ ಪ್ರಕರಣ; ವೈದ್ಯ ಸೇರಿ ಇಬ್ಬರು ಅರೆಸ್ಟ್
ಕಿಡಿಗೇಡಿಗಳ ಕೃತ್ಯವೇ? ತನಿಖೆ ಚುರುಕು:
ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಅದರ ಐಪಿ ಅಡ್ರೆಸ್ ಹಾಗೂ ಮೂಲವನ್ನು ಪತ್ತೆ ಹಚ್ಚುವ ಕಾರ್ಯವನ್ನು ಸೈಬರ್ ವಿಭಾಗದ ನೆರವಿನೊಂದಿಗೆ ಪೊಲೀಸರು ಆರಂಭಿಸಿದ್ದಾರೆ. ಇದು ನೈಜ ಬೆದರಿಕೆಯೋ ಅಥವಾ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಲು ಕಿಡಿಗೇಡಿಗಳು ಮಾಡಿದ ಕೃತ್ಯವೋ ಎಂಬ ಕುರಿತು ತನಿಖೆ ಮುಂದುವರಿದಿದೆ.
ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ. ನ್ಯಾಯಾಲಯದ ಆವರಣದಲ್ಲಿ ಸದ್ಯ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
udupi district court bomb threat dog squad investigation



