Byndoor : ಬೈಂದೂರು : ರಾಷ್ಟ್ರೀಯ ಹೆದ್ದಾರಿ-66ರ ಉಪ್ಪುಂದ-ಬಿಜೂರು ನಡುವಿನ ಸೇತುವೆಯ ಮೇಲೆ ಚಲಿಸುತ್ತಿದ್ದ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಭೀಕರ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.
ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿ ಇದಾಗಿದ್ದು, ಅಗ್ನಿ ಅವಘಡದಿಂದಾಗಿ ಲಾರಿ ಸಹಿತ ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸರಕು ಭಸ್ಮವಾಗಿದೆ.
ಲಾರಿಯು ಗುರುವಾರ ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಬೈಂದೂರಿನ ಯಡ್ತರೆ ಬೈಪಾಸ್ ದಾಟಿ ಬಿಜೂರು ಸಮೀಪದ ಸೇತುವೆ ಮೇಲೆ ಸಾಗುತ್ತಿತ್ತು. ಈ ವೇಳೆ ಲಾರಿಯ ಹಿಂಬದಿಯ ಟಯರ್ ಏಕಾಏಕಿ ಸ್ಫೋಟಗೊಂಡಿದೆ.

ಘರ್ಷಣೆಯ ರಭಸಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಲಾರಿಯ ಹಿಂಭಾಗಕ್ಕೆ ವ್ಯಾಪಿಸಿದೆ. ಲಾರಿ ಚಾಲಕ ಚಂದ್ರಕಾಂತ್ ಅವರು ತಕ್ಷಣವೇ ಎಚ್ಚೆತ್ತುಕೊಂಡು ಲಾರಿಯಿಂದ ಕೆಳಗಿಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೆದ್ದಾರಿಯ ಸೇತುವೆಯ ಮೇಲೆಯೇ ಲಾರಿ ಹೊತ್ತಿ ಉರಿಯುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಬೈಂದೂರು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಯಡ್ತರೆ ಜಂಕ್ಷನ್ ಬಳಿ ವಾಹನಗಳಿಗೆ ತಿರುವು ನೀಡಿ, ಹೆದ್ದಾರಿಯ ಇನ್ನೊಂದು ಪಥದ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Also read : ಉಡುಪಿ: ಅಂಬಾಗಿಲು ಬಳಿ ಭೀಕರ ಅಪಘಾತ; ಒನ್‌ವೇಯಲ್ಲಿ ಬಂದ ಬಸ್ ಚಾಲಕ ಬಲಿ, ಮತ್ತೋರ್ವ ಗಂಭೀರ
ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಶ್ರೀನಿವಾಸ ಪೂಜಾರಿ, ರವೀಂದ್ರ ಎಸ್. ದೇವಾಡಿಗ, ಸುರೇಶ್ ಪಟಗಾರ, ಸಚಿನ್ ಮತ್ತು ಚಾಲಕ ಲೋಕೇಶ್ ಅವರು ಸ್ಥಳಕ್ಕೆ ಧಾವಿಸಿ ಸತತ 3-4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು.

ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಪಶು ಆಹಾರವು ಒಣಗಿದ್ದ ಕಾರಣ ಬೆಂಕಿ ಬೇಗನೆ ಹರಡಿತ್ತು, ಇದರಿಂದಾಗಿ ಲಾರಿಯ ಬಹುಭಾಗ ಜಖಂಗೊಂಡಿದೆ.
Also Read : ಉಡುಪಿ: ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ : ‘ನಾವೇನು ಭಯೋತ್ಪಾದಕರಲ್ಲ’ ಎಂದು ಪೊಲೀಸರ ವಿರುದ್ಧ ಗರಂ
Byndoor truck Loaded with Cattle Feed Engulfed in Flames on NH-66 Bridge Driver Miraculously Escapes


