ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಭಕ್ತರಿಗೆ ಸೈಬರ್ ವಂಚನೆ ಜಾಲ

ಕೊಲ್ಲೂರು ( Kollur) : ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ (Kollur Mookambika Temple) ದ ಭಕ್ತರಿಗೆ ಸೈಬರ್ ವಂಚನೆ ನಡೆದಿದೆ. ನಕಲಿ ವೆಬ್‌ಸೈಟ್ ಮೂಲಕ ದೇವಸ್ಥಾನದ ವಸತಿ ಗೃಹದ ಬುಕ್ಕಿಂಗ್ ಮಾಡಿಸಿಕೊಂಡು ಲಕ್ಷಾಂತರ ರೂಪಾಯಿ ಪಂಗನಾಮ ಹಾಕಲಾಗಿದೆ.
ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯಾದ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ಸೈಬರ್ ವಂಚನೆಯ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಭಕ್ತರ ಅನುಕೂಲಕ್ಕಾಗಿ ಕೊಲ್ಲೂರು ದೇವಸ್ಥಾನದಲ್ಲಿನ ವಸತಿಗೃಹಗಳ ಬುಕ್ಕಿಂಗ್ ಸಲುವಾಗಿಯೇ ದೇವಸ್ಥಾನದ ಅಧಿಕೃತ ವೆಬ್‌ಸೈಟ್ http://karnatakatemplesaccommodation.com ಕಾರ್ಯನಿರ್ವಹಿಸುತ್ತಿದೆ.
ಆದರೆ ವಂಚಕರು karnataka temple accommodation ಎಂಬ ಹೆಸರಿನ ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದಾರೆ. ಆದರೆ ಭಕ್ತರು ಅಧಿಕೃತ ವೆಬ್‌ಸೈಟ್ ಎಂದು ತಿಳಿದು ಅನಧಿಕೃತ ಜಾಲತಾಣಗಳ ಮೂಲಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಲಿತಾಂಬಿಕಾ ಅತಿಥಿ ಗೃಹದ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ.
ಕೊಠಡಿ ಕಾಯ್ದಿರಿಸಿದ ನಂತರ, ವಂಚಕರು ವಾಟ್ಸ್‌ಆಪ್ ತಂತ್ರಾಂಶದಲ್ಲಿ ಫೋನ್‌ಪೇ ಕ್ಯೂಆರ್ ಕೋಡ್ ನೀಡಿ ಹಣವನ್ನು ಪಾವತಿಸಿಕೊಂಡಿದ್ದಾರೆ. ಹಣ ಪಡೆದ ಮೇಲೆ ನಕಲಿ ರಶೀದಿ ನೀಡಿ, ಭಕ್ತರನ್ನು ವಂಚಿಸಿ ಅಕ್ರಮವಾಗಿ ಹಣ ದೋಚುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬ್ರಹ್ಮಾವರ : ಕಳಪೆ ಗುಣಮಟ್ಟದ ಚಿನ್ನಾಭರಣ ಅಡಮಾನವಿಟ್ಟು ವಂಚನೆ
ವಂಚಕರ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕೊಲ್ಲೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಭಕ್ತರು ಇಂತಹ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಅಧಿಕೃತ ಜಾಲತಾಣದ ಮೂಲಕವೇ ವ್ಯವಹಾರ ನಡೆಸಬೇಕೆಂದು ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.
ಈ ಹಿಂದೆ ಕೂಡ ಕರಾವಳಿ ಭಾಗದಲ್ಲಿನ ಪ್ರಖ್ಯಾತ ದೇವಾಲಯದ ಹೆಸರಲ್ಲಿ ವೆಬ್‌ಸೈಟ್ ರಚಿಸಿಕೊಂಡು ಹಣ ದೋಚಿದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಇನ್ಮುಂದೆ ಭಕ್ತರು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ದೇವಾಲಯಗಳ ಯಾವುದೇ ಸೇವೆಯನ್ನು ಪಡೆಯುವ ಮೊದಲು ಅಧಿಕೃತ ಅನ್ನೋದನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ : ಹಳ್ಳಿಹೈದನ ವಿಭಿನ್ನ ಪ್ರೀ ವೆಡ್ಡಿಂಗ್ ಪೋಟೋ ಶೂಟ್ : ನೆಟ್ಟಿಗರ ಗಮನ ಸೆಳೆದ ವಿಡಿಯೋ
Cyber Fraud Network Targeting Devotees of Kollur Mookambika Temple



