ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ : ಡಿಕೆಶಿ, ಮುನಿಯಾಲು ವಿರುದ್ದ ಸುನಿಲ್‌ ಕುಮಾರ್‌ ಆಕ್ರೋಶ

Karkala Parasurama Theme Park : ಕಾರ್ಕಳ : ಕರ್ನಾಟಕದ ಪ್ರಸಿದ್ದ ಪ್ರವಾಸೋದ್ಯಮ ತಾಣವಾಗಿರುವ ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಕಳ್ಳತನ ನಡೆದಿದೆ. ಬಾಗಿಲು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೇಲ್ಚಾವಣೆಗೆ ಹಾಕಿದ್ದ ತಾಮ್ರದ ಹೊದಿಕೆಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Karkala Parasurama Theme Park Theft MLA Sunil Kumar outraged

ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಉಡುಪಿ ಜಿಲ್ಲಾಡಳಿತ ಥೀಮ್‌ ಪಾರ್ಕ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿತ್ತು. ಜಿಲ್ಲಾಡಳಿತದ ಸುಪರ್ದಿಯಲ್ಲಿದ್ದರೂ ಕಳವು ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಥೀಮ್‌ ಪಾರ್ಕ್‌ನಲ್ಲಿ ಕಳತನ : ಸರಕಾರದ ವಿರುದ್ದ ಸುನಿಲ್‌ ಕುಮಾರ್‌ ಆಕ್ರೋಶ

ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ನಡೆದಿರುವ ಕಳ್ಳತನದ ಕುರಿತು ಕಾರ್ಕಳ ಶಾಸಕರಾದ ವಿ.ಸುನಿಲ್‌ ಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹಂಚಿಕೊಂಡಿದ್ದಾರೆ.

ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ ಎಂದು ನಾನು ಭಾವಿಸುತ್ತೇನೆ. ನಮ್ಮ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ಕನಸಿನೊಂದಿಗೆ ಪ್ರಾರಂಭಿಸಿದ ಈ ಮಹತ್ವಾಕಾಂಕ್ಷಿ ಯೋಜನೆ ಸ್ಥಳೀಯ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿಯವರ ದ್ವೇಷ ಹಾಗೂ ಅಸೂಯೆಯ ರಾಜಕಾರಣಕ್ಕೆ ಬಲಿಯಾಗಿ ಹೋಯ್ತು ಎಂದಿದ್ದಾರೆ.

Karkala Parasurama Theme Park Theft MLA Sunil Kumar outraged

ಕಳೆದೆರಡು ವರ್ಷದಿಂದ ಈ ಯೋಜನೆಯ ಅಭಿವೃದ್ಧಿಗೆ ಬಿಡಿಕಾಸು ಬಿಡುಗಡೆಯಾಗದಂತೆ ಮಾಡಿ ಪರಶುರಾಮ ಥೀಂ ಪಾರ್ಕ್ ಅಕ್ಷರಶಃ ಪಾಳು ಬಿದ್ದು ಹೋಗುವಂತೆ ಮಾಡಿದರು. ಪ್ರವಾಸಿಗರು, ವಿದ್ಯಾರ್ಥಿಗಳು ಭೇಟಿಕೊಟ್ಟು ನಳನಳಿಸಬೇಕಿದ್ದ ಈ ಪ್ರವಾಸಿ ತಾಣ ಕಾಂಗ್ರೆಸ್ ನಾಯಕರ ರಾಜಕೀಯದಾಟದಿಂದಾಗಿ ಇಂದು ಕಳ್ಳರು ನುಗ್ಗಿ ಮೇಲ್ಛಾವಣಿಯನ್ನೇ ಕದ್ದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ.

Karkala Parasurama Theme Park Theft MLA Sunil Kumar outraged

ಬಹುಶಃ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಉದಯ್ ಕುಮಾರ್ ಶೆಟ್ಟಿಯವರ ಹೊಟ್ಟೆ ಇಂದು ತಣ್ಣಗಾಗಿರಬಹುದು. ಮುಂದಿನ ಚುನಾವಣೆಯವರೆಗೂ ಪರಶುರಾಮ ಥೀಂ ಪಾರ್ಕ್ ಯೋಜನೆಯನ್ನು ಜೀವಂತವಾಗಿ ಇಡಬೇಕೆಂದು ಕಾರ್ಕಳಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾರ್ಕಳ ಕಾಂಗ್ರೆಸ್ ಪಟಾಲಂಗೆ ಫತ್ವಾ ಕೊಟ್ಟಿದ್ದರು. ಅದರ ಫಲವಾಗಿ ಘಜ್ನಿ, ಘೋರಿಗಳು ಹಿಂದು ಶ್ರದ್ಧಾ ಕೇಂದ್ರಗಳನ್ನು ಧ್ವಂಸ ಮಾಡಿದ ರೀತಿ ಥೀಂ ಪಾರ್ಕ್ ನಲ್ಲಿ ಕಳ್ಳತನವನ್ನೂ ನಡೆಸಿ ಪಾಳುಬೀಳಿಸಿದರು.

Karkala Parasurama Theme Park Theft MLA Sunil Kumar outraged

ಉಡುಪಿ ಜಿಲ್ಲಾಡಳಿತದ ವೈಫಲ್ಯ

ಅಷ್ಟಕ್ಕೂ ಈ ಪ್ರಕರಣದಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಥೀಂ ಪಾರ್ಕ್ ಗೆ ಸಾರ್ವಜನಿಕ ಪ್ರವೇಶವನ್ನು 2023ರ ಸೆಪ್ಟೆಂಬರ್‌ ತಿಂಗಳಿನಿಂದಲೇ ನಿರ್ಬಂಧಿಸಲಾಗಿತ್ತು. ಸ್ಥಳೀಯ ಆಡಳಿತ ಆದೇಶ ಹೊರಡಿಸಿದ್ದರೂ ಕೆಲವರು ಕಾನೂನು ಬಾಹಿರವಾಗಿ ಇಲ್ಲಿಗೆ ಒಳನುಗ್ಗಿ ವಿಡಿಯೋ ಚಿತ್ರೀಕರಣ ನಡೆಸಿದ್ದರು.‌ ಇದೆಲ್ಲದರ ಮಧ್ಯೆಯೇ ಕಳ್ಳತನ ನಡೆದಿದೆ ಎಂದು ಆರೋಪಿಸಲಾಗಿದೆ.

ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದ್ದರೂ ಕೂಡ ಕೆಲವರು ವಿಡಿಯೋ ಚಿತ್ರೀಕರಣ ನಡೆದಿದ್ದು, ವಿಡಿಯೋ ಮಾಡಿದವರ ಜೊತೆಗೆ ಕಳ್ಳತನ ನಡೆಸಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಸುನಿಲ್‌ ಕುಮಾರ್‌ ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿ ತೆರೆದುಕೊಂಡಿದ್ದ ಪರಶುರಾಮ ಥೀಮ್‌ ಪಾರ್ಕ್‌ ಇದೀಗ ಸೊರಗಿ ನಿಂತಿದೆ. ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಳ್ಳಿ ಇಟ್ಟ ಕಾಂಗ್ರೆಸ್‌ ನಾಯಕರನ್ನು ಇತಿಹಾಸ ಎಂದಿಗೂ ಕ್ಷಮಿಸದು ಎಂದು ಸುನಿಲ್‌ ಕುಮಾರ್‌ ರಾಜ್ಯ ಸರಕಾರದ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ವೈಫಲ್ಯಕ್ಕೆ ಥೀಮ್‌ ಪಾರ್ಕ್‌ ಬಲಿ

ಕಾರ್ಕಳ ಶಾಸಕರಾದ ವಿ ಸುನಿಲ್‌ ಕುಮಾರ್‌ ಉಮಿಕಲ್‌ ಬೆಟ್ಟದಲ್ಲಿ ಪರಶುರಾಮನ ಥೀಮ್‌ ಪಾರ್ಕ್‌ ನಿರ್ಮಿಸುವ ಕನಸು ಕಂಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಿದ್ದರು. ಉಡುಪಿಯ ನಿರ್ಮಿತಿ ಕೇಂದ್ರ 12 ಕೋಟಿ ರೂಪಾಯಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಸರಕಾರ ಕೇವಲ 6 ಕೋಟಿ ರೂಪಾಯಿಯನ್ನಷ್ಟೇ ಬಿಡುಗಡೆ ಮಾಡಿತ್ತು.

ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರ ಪರಶುರಾಮ ಥೀಮ್‌ ಪಾರ್ಕ್‌ಗೆ ಬಿಡುಗಡೆ ಮಾಡಬೇಕಾಗಿದ್ದ ಬಾಕಿ ಹಣವನ್ನು ಇಂದಿಗೂ ಬಿಡುಗಡೆ ಮಾಡಿಲ್ಲ. ಮಾತ್ರವಲ್ಲ ಸ್ಥಳೀಯ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಪರಶುರಾಮ ಥೀಮ್‌ ಪಾರ್ಕ್‌ ವಿರುದ್ದ ಪ್ರಕರಣ ದಾಖಲಿಸಿದ್ದರು. ಮಾತ್ರವಲ್ಲ ಸರಕಾರದಿಂದ ಬಿಡುಗಡೆ ಆಗಬೇಕಾಗಿದ್ದ ಹಣ ಬಿಡುಗಡೆ ಆಗದಂತೆ ನೋಡಿಕೊಂಡಿದ್ದಾರೆಂಬ ಆರೋಪವೂ ಇದೆ.

ಈ ಹಿಂದೆ ಕಾರ್ಕಳಕ್ಕೆ ಬಂದಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಕೂಡ ಪರಶುರಾಮ ಥೀಮ್‌ ಪಾರ್ಕ್‌ನ್ನು ಚುನಾವಣಾ ಅಸ್ತ್ರವನ್ನಾಗಿಸುವುದಾಗಿ ಘೋಷಿಸಿದ್ದು, ಮುಂದಿನ ಚುನಾವಣೆಯ ವರೆಗೂ ಪರಶುರಾಮ ಥೀಮ್‌ ಪಾರ್ಕ್‌ ಪೂರ್ಣಗೊಳಿಸುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು.

ಕಾರ್ಕಳದಲ್ಲಿ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳಬೇಕಾಗಿದ್ದ ಪರಶುರಾಮ ಥೀಮ್‌ ಪಾರ್ಕ್‌ ಪಾಳು ಬಿದ್ದಿರುವುದಕ್ಕೆ ಕರ್ನಾಟಕ ಸರಕಾರವೇ ಕಾರಣ ಅನ್ನೋ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದೀಗ ಥೀಮ್‌ ಪಾರ್ಕ್‌ನಲ್ಲಿ ಕಳ್ಳತನ ನಡೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Karkala Parasurama Theme Park Theft MLA Sunil Kumar outraged

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories