ಉಡುಪಿ: ಫ್ರಿಡ್ಜ್ ರಿಪೇರಿ ಮಾಡಲು ಹೋದವನಿಗೆ 3.5 ಲಕ್ಷದ ‘ಕಳ್ಳತನ’ದ ಪಟ್ಟ : ಮುಂದೇನಾಯ್ತು?
ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿ! ಫೆಬ್ರವರಿ 26ರಂದು ಅನೆಟ್ ಅವರು ವಿನ್ಸಿ ಅವರಿಗೆ ಕರೆ ಮಾಡಿ, "ನೀನು ನನ್ನ ಮನೆಯಲ್ಲಿದ್ದ 3,50,000 ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದೀಯಾ" ಎಂದು ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿ: ನಾವು ಮಾಡುವ ಸಣ್ಣ ಸಹಾಯ ಅಥವಾ ವೃತ್ತಿ ಕೆಲವೊಮ್ಮೆ ಹೇಗೆ ಸಂಕಷ್ಟ ತಂದೊಡ್ಡಬಹುದು ಎಂಬುದಕ್ಕೆ ಉಡುಪಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಫ್ರಿಡ್ಜ್ ರಿಪೇರಿ ಮಾಡಲು ಹೋದ ವ್ಯಕ್ತಿಯೊಬ್ಬರ ಮೇಲೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಆರೋಪ ಹೊರಿಸಿ, ಬೆದರಿಕೆ ಹಾಕಿದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಉಪ್ಪೂರು ಗ್ರಾಮದ ನಿವಾಸಿ, ಕಳೆದ 20 ವರ್ಷಗಳಿಂದ ಫ್ರಿಡ್ಜ್ ರಿಪೇರಿ ವೃತ್ತಿ ಮಾಡುತ್ತಿರುವ ವಿನ್ಸಿ ಡಿಸೋಜಾ (55 ವರ್ಷ) ಈ ಪ್ರಕರಣದ ದೂರುದಾರರು. ಜನವರಿ 31ರಂದು ಸಂತೆಕಟ್ಟೆ ನಯಂಪಳ್ಳಿಯ ಅಪಾರ್ಟ್‌ಮೆಂಟ್ ನಿವಾಸಿ ಅನೆಟ್ ವೀರಾ ಮಥಾಯಸ್ ಎಂಬುವವರು ತಮ್ಮ ಫ್ರಿಡ್ಜ್ ರಿಪೇರಿ ಮಾಡುವಂತೆ ವಿನ್ಸಿ ಅವರಿಗೆ ಕರೆ ಮಾಡಿದ್ದರು. ಅದರಂತೆ ಫೆಬ್ರವರಿ 1ರಂದು ಅವರ ಮನೆಗೆ ಭೇಟಿ ನೀಡಿದ್ದ ವಿನ್ಸಿ, ಫ್ರಿಡ್ಜ್ ಪರಿಶೀಲಿಸಿ ಬಿಡಿಭಾಗದ ಸಮಸ್ಯೆ ಇರುವುದರಿಂದ ಕಂಪನಿಯವರನ್ನೇ ಸಂಪರ್ಕಿಸುವಂತೆ ತಿಳಿಸಿ ವಾಪಸ್ ಬಂದಿದ್ದರು.
3.5 ಲಕ್ಷ ನೀಡದಿದ್ದರೆ ಮಾನ ಹರಾಜು
ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿ! ಫೆಬ್ರವರಿ 26ರಂದು ಅನೆಟ್ ಅವರು ವಿನ್ಸಿ ಅವರಿಗೆ ಕರೆ ಮಾಡಿ, “ನೀನು ನನ್ನ ಮನೆಯಲ್ಲಿದ್ದ 3,50,000 ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದೀಯಾ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಹಣವನ್ನು ನೀಡದಿದ್ದರೆ ನಿನ್ನ ಮಾನವನ್ನು ವಾಟ್ಸಾಪ್‌ನಲ್ಲಿ ಹರಾಜು ಹಾಕುವುದಾಗಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
Also Read : ಉಡುಪಿ: ತುಳು ರಂಗಭೂಮಿಯ ಹಿರಿಯ ಕಲಾವಿದ ಸುಜಿತ್ ಶೆಟ್ಟಿ ಪಾದೂರು ನಿಧನ
ಬ್ಯಾಂಕ್‌ನಿಂದ ಹಣ ಡ್ರಾ: ದೂರು ದಾಖಲು
ಬೆದರಿಕೆ ಹಾಕಿದ್ದಲ್ಲದೆ, ಅನೆಟ್ ಅವರು ವಿನ್ನಿ ಡಿಸೋಜಾ ಅವರ ಕೆನರಾ ಬ್ಯಾಂಕ್ ಖಾತೆಯಿಂದ ಚೆಕ್ ಮೂಲಕ 1,00,000 ರೂಪಾಯಿ ಹಣವನ್ನೂ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮಾನಸಿಕ ಕಿರುಕುಳ ಹಾಗೂ ಹಣದ ವಿಚಾರವಾಗಿ ನೊಂದ ವಿನ್ಸಿ ಅವರು ಉಡುಪಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
Also Read : ಐದು ರೂಪಾಯಿ ಅಂಚೆ ಲಕೋಟೆಯ ಪತ್ರ ವಿಳಂಬ: ದೂರು ನೀಡುತ್ತಿದ್ದಂತೆಯೇ ಚುರುಕಾದ ಅಂಚೆ ಇಲಾಖೆ
ಇದೀಗ ಅನೆಟ್ ವೀರಾ ಮಥಾಯಸ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ವಿಚಾರಣೆಯ ನಂತರ ಸತ್ಯಾ ಸತ್ಯತೆ ಹೊರ ಬರುವುದಕ್ಕೆ ಸಾಧ್ಯ. ಒಟ್ಟಿನಲ್ಲಿ ಉಡುಪಿಯ ಪ್ರಕರಣ ಕರಾವಳಿಯಲ್ಲಿ ತೀವ್ರ ಕುತೂಹಲವನ್ನು ಮೂಡಿಸಿದೆ.
udupi fridge repair technician-accused theft blackmail police case



