ಹೋಮ್ ರೆಮಿಡಿ ಹಚ್ಚಿಸಿಕೊಂಡು ಸ್ನಾನಕ್ಕಿಳಿದ ಶ್ವಾನ! ವಿಡಿಯೋ ವೈರಲ್
ಕೆಲವು ಶ್ವಾನಗಳಿಗೆ ನೀರು ಅಂದ್ರೆ ಆಟ. ನೀರಿನ ಜೊತೆ ಮಸ್ತ್ ಮಜಾ ಮಾಡ್ತವೆ ನಾಯಿಗಳು. ಇನ್ನು ಕೆಲವು ನೀರನ್ನ ಕಂಡ್ರೆ ಭಯ ಪಡೋದು ಉಂಟು. ಆದ್ರೆ ವಿಡಿಯೋದಲ್ಲಿ ವೈರಲ್ ಆದ ಶ್ವಾನವಂತೂ ಬಾತ್ ಜೊತೆ ಸಕತ್ ಎಂಜಾಯ್ ಮಾಡ್ತಾ ಇದೆ. ಆದರೆ ವಿಶೇಷ ಅಂದ್ರೆ ಈ ಶ್ವಾನ ಮಾಮೂಲಿ ಸ್ನಾನ ಮಾಡ್ತಿಲ್ಲ, ಹೋಮ್ ರೆಮಿಡಿ ಹಚ್ಚಿಸಿಕೊಂಡು ಸ್ನಾನಕ್ಕಿಳಿದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇದು ಬೆಂಗಳೂರಿನಲ್ಲಿ ಕಂಡು ಬಂದ ದೃಶ್ಯ. ಸಾಕುಪ್ರಾಣಿಯ ಮಾಲೀಕರು ತಮ್ಮ ಪ್ರೀತಿಯ ಶ್ವಾನಕ್ಕೆ ಬಳಸಿಕೊಂಡಿರುವ ವಿಧಾನ ಅಸಾಮಾನ್ಯವಾದದ್ದು. ವಿಡಿಯೋದಲ್ಲಿ ಕಾಣುವಂತೆ ಮಾಲೀಕರು ತನ್ನ ನಾಯಿಯ ಮೇಲೆ ನುಣ್ಣನೆ ಪುಡಿ ಮಾಡಿದ ಬೇವಿನ ಎಲೆಗಳು, ಅರಿಶಿನ ಮತ್ತು ಮೊಸರಿನಿಂದ ತಯಾರಿಸಿದ ಹಸಿರು ಬಣ್ಣದ ಪೇಸ್ಟನ್ನು ಹಚ್ಚುತ್ತಿದ್ದಾರೆ. “ಈ ಪೇಸ್ಟ್ ಶಿಲೀಂಧ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ” ಎಂದು ಮಾಲೀಕರು ವಿಡಿಯೋದಲ್ಲಿ ಹೇಳೋದನ್ನು ನಾವು ಕೇಳಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾತಲಾಣದಲ್ಲಿ ಹರಿದಾಡುತ್ತಿದೆ.
ದೃಶ್ಯದಲ್ಲಿ ನೀವು ನೋಡುವಂತೆ ಮೊದಲಿಗೆ ಮಾಲೀಕರು ಪೇಸ್ಟ್‌ನಿಂದ ತುಂಬಿದ ಬಟ್ಟಲನ್ನು ಹಿಡಿಕೊಳ್ಳುತ್ತಾರೆ. ನಂತರ “ಇದು ಬೇವಿನ ಎಲೆ, ಅರಿಶಿಣ ಮತ್ತು ಮೊಸರನ್ನು ಬೆರೆಸಿ ತಯಾರಿಸಿದ ಪೇಸ್ಟ್. ಇದು ಶೀಲೀಂದ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ” ಎಂದು ಹೇಳುತ್ತಾರೆ.
ವಿಡಿಯೋ ಕ್ಲಿಪ್‌ನಲ್ಲಿ ನಾಯಿ ಆಚೆ ಈಚೆ ತಲೆಯಾಡಿಸುತ್ತಾ ಮಾಲೀಕರ ಮಾತನ್ನ ಕೇಳಿಸಿಕೊಳ್ಳುತ್ತಾ ಅಲ್ಲಿಯೇ ನಿಂತಿದೆ. ಮಾಲೀಕರು ಹೋಮ್ ರೆಮಿಡಿ ಹಚ್ಚುವುದನ್ನು ಆನಂದಿಸುತ್ತದೆ. ನಂತರ ಆ ವ್ಯಕ್ತಿ, “ಈ ಪೇಸ್ಟನ್ನು ಸಾಕುಪ್ರಾಣಿಗಳಿಗೆ ಹಚ್ಚಿ ಮುಕ್ಕಾಲು ಗಂಟೆಯ ಕಾಲ ಹಾಗೆಯೇ ಬಿಡಬೇಕು, ಇದು ತುಂಬಾ ಪ್ರಯೋಜನಕಾರಿ” ಎಂದು ಹೇಳುತ್ತಾರೆ.
ವೈರಲ್ ಆದ ವಿಡಿಯೋ ನೋಡಲು ಈ ಲಿಂಕನ್ನು ಕ್ಲಿಕ್ ಮಾಡಿ;
ಈ ವಿಡಿಯೋ ಕ್ಲಿಪ್ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ದಾಟಿದೆ. ಹೆಚ್ಚಿನ ಜನರು ಲೈಕ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.. ಇನ್ನು ಕೆಲವರು ತಮ್ಮ ಅನಿಸಿಕೆಗಳನ್ನ ಕಾಮೆಂಟ್ ಸೆಕ್ಷನ್‌ನಲ್ಲಿ ತಿಳಿಸಿದ್ದಾರೆ. ವಿವಿಧ ರೀತಿಯ ಅನಿಸಿಕೆಗಳು ಕೇಳಿ ಬರುತ್ತಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಮಾಲೀಕರು, “ಸಾಕುಪ್ರಾಣಿಗಳಿಗೆ ಯಾವುದೇ ಮನೆಮದ್ದು ಅಥವಾ ರೆಮಿಡಿಗಳನ್ನು ಬಳಸಬೇಕಾದಲ್ಲಿ, ವೆಟರ್ನರಿ ವೈದ್ಯರನ್ನು ಸಂಪರ್ಕಿಸಿ” ಎಂಬುದಾಗಿ ತಿಳಿಸಿದ್ದಾರೆ.



