ನಮೋ ಭಾರತ್ ರೈಲಲ್ಲಿ ಅಶ್ಲೀಲ ವರ್ತನೆ; ಸಿಕ್ಕಿಬಿದ್ದಿದ್ದ ಜೋಡಿಗೆ ವಿವಾಹ
ಘಾಜಿಯಾಬಾದ್: ದೆಹಲಿ-ಮೀರತ್ ಆರ್‌ಆರ್‌ಟಿಎಸ್ (RRTS) ಮಾರ್ಗದ ‘ನಮೋ ಭಾರತ್’ ಕ್ಷಿಪ್ರ ರೈಲಿನಲ್ಲಿ ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿ ಸುದ್ದಿಯಾಗಿದ್ದ ವಿದ್ಯಾರ್ಥಿ ಜೋಡಿ ಈಗ ವಿವಾಹ ಬಂಧನಕ್ಕೆ ಒಳಗಾಗಲು ಸಿದ್ಧರಾಗಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಉಂಟಾದ ಮುಜುಗರ ಮತ್ತು ವಿವಾದವನ್ನು ಬಗೆಹರಿಸಲು ಎರಡೂ ಕುಟುಂಬದ ಹಿರಿಯರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಕಳೆದ ನವೆಂಬರ್ 24 ರಂದು ದುಹಾಯಿಯಿಂದ ಮುರಾದ್‌ನಗರಕ್ಕೆ ಸಂಚರಿಸುತ್ತಿದ್ದ ನಮೋ ಭಾರತ್ ರೈಲಿನ ಪ್ರೀಮಿಯಂ ಕೋಚ್‌ನಲ್ಲಿ ಈ ವಿದ್ಯಾರ್ಥಿ ಜೋಡಿ ಅಶ್ಲೀಲವಾಗಿ ವರ್ತಿಸಿದ್ದರು. ಈ ದೃಶ್ಯವನ್ನು ರೈಲು ಚಾಲಕ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ಮತ್ತು ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರು.
ವಿವಾಹಕ್ಕೆ ಕುಟುಂಬದ ಒಪ್ಪಿಗೆ:
ವರದಿಗಳ ಪ್ರಕಾರ, ಈ ಜೋಡಿ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆದ ನಂತರ ವಿದ್ಯಾರ್ಥಿನಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಗೂ ಯತ್ನಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕುಟುಂಬಸ್ಥರು ಮತ್ತು ಸಮುದಾಯದ ಹಿರಿಯರು, ಪ್ರಕರಣವನ್ನು ಇನ್ನು ಮುಂದೆ ಎಳೆಯುವುದು ಬೇಡ ಎಂದು ತೀರ್ಮಾನಿಸಿ ಇಬ್ಬರಿಗೂ ಮದುವೆ ಮಾಡಲು ದಿನಾಂಕ ನಿಗದಿಪಡಿಸಿದ್ದಾರೆ.
ವಿದ್ಯಾರ್ಥಿಗಳ ಹಿನ್ನೆಲೆ: ಯುವತಿ ಬಿಸಿಎ (BCA) ವ್ಯಾಸಂಗ ಮಾಡುತ್ತಿದ್ದರೆ, ಯುವಕ ಬಿ.ಟೆಕ್ (B.Tech) ವಿದ್ಯಾರ್ಥಿಯಾಗಿದ್ದಾನೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಚಾಲಕನ ವಜಾ: ರೈಲಿನ ಒಳಗೆ ನಿಯಮ ಬಾಹಿರವಾಗಿ ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿದ ಮತ್ತು ಅದನ್ನು ಸಾರ್ವಜನಿಕವಾಗಿ ಹಂಚಿಕೊಂಡ ಕಾರಣಕ್ಕಾಗಿ ರೈಲು ಚಾಲಕ ರಿಷಬ್ ಎಂಬಾತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಕಾನೂನು ಕ್ರಮ: ಸದ್ಯ ಪೊಲೀಸರು ಅಶ್ಲೀಲ ಕೃತ್ಯ (ಸೆಕ್ಷನ್ 296) ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 10,000ಕ್ಕೆ ಬೆಸ್ಟ್ 5G ಸ್ಮಾರ್ಟ್‌ಫೋನ್‌ಗಳು: ಸ್ಯಾಮ್‌ಸಂಗ್, ರೆಡ್ಮಿ ಮತ್ತು ಪೊಕೊ ಯಾವುದು ಬೆಸ್ಟ್?
ಸಾರ್ವಜನಿಕ ಸ್ಥಳಗಳಲ್ಲಿ ಯುವಜನತೆಯ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಈ ಘಟನೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ, ಈಗ ಕುಟುಂಬಸ್ಥರು ಮದುವೆಯ ಮೂಲಕ ಈ ವಿವಾದಕ್ಕೆ ಮಂಗಳ ಹಾಡಲು ಮುಂದಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.



