ಏನ್ ಕಾಲ ಬಂತಪ್ಪಾ : ಚರಂಡಿಯಲ್ಲಿ ಕಾಫಿ ಚೆಲ್ಲಿದ ಮಹಿಳೆಗೆ 17 ಸಾವಿರ ರೂಪಾಯಿ ದಂಡ
Coffee fine : ಕೊನೆಯ ಗುಟುಕು ಕಾಫಿಯನ್ನು ಚರಂಡಿಗೆ ಎಸೆಯುವುದು ದೊಡ್ಡ ವಿಚಾರವೇ ಅಲ್ಲ. ಇದರ ಪರಿಣಾಮಗಳ ಬಗ್ಗೆ ಯಾರೂ ಯೋಚನೆ ಕೂಡ ಮಾಡಿರುವುದಿಲ್ಲ. ಆದರೆ ಲಂಡನ್ನಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದ ಘಟನೆಯೊಂದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ನಾವು ಮಾಡುವ ಒಂದು ಸಣ್ಣ ಪ್ರಮಾದವು ಯಾವ ರೀತಿಯಲ್ಲಿ ನಮಗೆ ನಷ್ಟ ತಂದೊಡ್ಡಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ. ಲಂಡನ್ನ ನಿವಾಸಿಯಾದ ಬರ್ಕು ಯೆಸಿಲ್ಯೂರ್ಟ್ ಬಸ್ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ರಿಚ್ಮಂಡ್ ನಿಲ್ದಾಣದ ಸಮೀಪ ತನ್ನ ಕಾಫಿ ಕಪ್ನಲ್ಲಿ ಉಳಿದಿದ್ದ ಕೊನೆಯ ಗುಟುಕನ್ನು ಚರಂಡಿಗೆ ಚೆಲ್ಲಿದ್ದರು.
ಈ ರೀತಿ ಮಾಡಿದ್ದಕ್ಕೆ ಈ ಮಹಿಳೆಗೆ ಬರೋಬ್ಬರಿ 17.5 ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ. ಈ ವಿಚಾರವಾಗಿ ಬರ್ಕು ಪ್ರತಿಕ್ರಯಿಸಿದ್ದು, ನಾನು ಕಾನೂನು ಉಲ್ಲಂಘನೆ ಮಾಡುತ್ತಿದ್ದೇನೆ ಎಂಬ ಸಣ್ಣ ಅರಿವು ನನಗೆ ಅರಿವಿರಲಿಲ್ಲ.
ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿರುವೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎನ್ನುವ ವಿಚಾರವೇ ನನಗೆ ಭಯತರಿಸುವಂತಿದೆ ಎಂದು ಮಹಿಳೆ ಹೇಳಿದ್ದಾರೆ.
ಬರ್ಕು ಜೀವನದಲ್ಲಿ ನಡೆದ ಈ ಘಟನೆಯು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಪರಿಸರ ಸಂರಕ್ಷಣೆ, ಕಾನೂನುಗಳ ಜಾರಿ ಮತ್ತು ಸಾರ್ವಜನಿಕ ಜಾಗೃತಿಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತು. ಅಕ್ಟೋಬರ್ 22 ರಂದು, ದಂಡವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸುವ ಇಮೇಲ್ ಅನ್ನು ಅವರು ಸ್ವೀಕರಿಸಿದರು.
ಬಸ್ಗಾಗಿ ಕಾಯುತ್ತಾ ನಿಂತಿದ್ದ ಬರ್ಕು, ಇನ್ನೇನು ಬಸ್ ಬರುತ್ತದೆ ಎನ್ನುವಾಗ ಬಸ್ನಲ್ಲಿ ಕಾಫಿ ಚೆಲ್ಲುವುದು ಬೇಡ ಎಂದು ತನ್ನ ಮರುಬಳಕೆ ಮಾಡಬಹುದಾದ ಕಪ್ನಲ್ಲಿದ್ದ ಕಾಫಿಯ ಕೊನೆಯ ಗುಟುಕನ್ನು ಚರಂಡಿಗೆ ಚೆಲ್ಲಿದ್ದಳು.
ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಥೇಮ್ಸ್ ಕೌನ್ಸಿಲ್ನ ಮೂವರು ಅಧಿಕಾರಿಗಳು ಆಕೆಯ ಎದುರು ಬಂದು ಪರಿಸರ ಸಂರಕ್ಷಣಾ ಕಾಯ್ದೆ 1990 ರ ಅಡಿಯಲ್ಲಿ ದಂಡ ವಿಧಿಸಿದ್ದರು. ಈ ಕಾಯ್ದೆಯ ಅಡಿಯಲ್ಲಿ ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಈ ದಂಡವನ್ನು ಪ್ರಶ್ನಿಸಿ ಬರ್ಕು ದೂರು ದಾಖಲಿಸಿದ್ದರು.
ಮಹಿಳೆಯ ದೂರನ್ನು ಆಲಿಸಿದ ಕೌನ್ಸಿಲ್ ಆರಂಭದಲ್ಲಿ ಅಧಿಕಾರಿಗಳ ನಡೆ ಸರಿಯಾಗಿದೆ ಎಂದು ಸಮರ್ಥನೆ ನೀಡಿದೆ. ಅಧಿಕಾರಿಗಳು ವೃತ್ತಿಪರವಾಗಿ ಹಾಗೂ ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿತ್ತು.
ಆದರೆ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ ಬಳಿಕ ಕೌನ್ಸಿಲ್ ದಂಡವನ್ನು ರದ್ದುಗೊಳಿಸಲು ನಿರ್ಧರಿಸಿತು. ಅಲ್ಲದೇ ಕೌನ್ಸಿಲ್ ಪರವಾಗಿ ಮಹಿಳೆಯ ಬಳಿ ಕ್ಷಮೆಯನ್ನೂ ಕೇಳಲಾಗಿದೆ. ಈ ದಂಡದಿಂದ ನಿಮಗೆ ಉಂಟಾದ ಅಸಮಾಧಾನ ಅಥವಾ ಅನಾನುಕೂಲತೆಗಳಿಗಾಗಿ ದಯವಿಟ್ಟು ನಮ್ಮ ಕ್ಷಮೆಯನ್ನು ಸ್ವೀಕರಿಸಿ ಎಂದು ನೋಟಿಸ್ನಲ್ಲಿ ಬರೆಯಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ದ್ರವ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ವಿಚಾರವಾಗಿ ಇರುವ ಕಾನೂನನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಲಾಗಿದೆ. ದಂಡ ರದ್ದಾದ ವಿಚಾರ ತಿಳಿದು ಬರ್ಕು ಸಮಾಧಾನ ಹೊರಹಾಕಿದ್ದಾರೆ.
ಈ ಘಟನೆಯು ನನಗೆ ಅನಗತ್ಯ ಆತಂಕವನ್ನುಂಟು ಮಾಡಿತ್ತು. ಚರಂಡಿಯಲ್ಲಿ ದ್ರವ ವಸ್ತುಗಳನ್ನು ಸುರಿಯುವುದು ಅಪರಾಧವೆಂದು ನನಗೆ ಖಂಡಿತ ತಿಳಿದಿರಲಿಲ್ಲ . ಈಗ ನನಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕೆಂಬ ಭಯ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ಮಾಡುವಂತೆ ಆಗಬಿಟ್ಟಿದೆ ಎಂದು ಮಹಿಳೆ ಹೇಳಿದ್ದಾರೆ.
Coffee fine : Woman Fined Rs 17. 5K For Pouring Coffee Down Street Drain, Penalty Later Revoked in London



