ಡೇರೆ ಮೇಳದಲ್ಲಿ ಪೌರಾಣಿಕ ಕಾವ್ಯರಂಜಿನಿ “ಶಪ್ತ ಭಾಮಿನಿ”

  • ಶಶಿಧರ್ ತಲ್ಲೂರಂಗಡಿ

(ಚಿತ್ರಗಳು : ಪ್ರವೀಣ್ ಪೆರ್ಡೂರು)

ಕಿರಿದಾದ ದಾರಿಯಲ್ಲಿ ಸಾಗುತ್ತಿರುವಾಗ ಎದುರಿನಲ್ಲೊಂದು ದೊಡ್ಡದೊಂದು ವಾಹನ ಸಿಕ್ಕಿಬಿಟ್ಟರೆ ದಾರಿ ಸುಗಮವಾಗುವಲ್ಲಿಯ ವರೆಗೆ ನಮಗಿಷ್ಟವಿಲ್ಲದಿದ್ದರೂ ಆ ವಾಹನದ ಹಿಂದೆಯೇ ಸಾಗಬೇಕಾದ ಅನಿವಾರ್ಯತೆ ಒದಗಿಬಿಡುತ್ತದೆ. ಒಂದು ವೇಳೆ ಆತುರಪಟ್ಟು ಮುನ್ನುಗ್ಗಿದೆವೋ ಅಪಘಾತವಾಗುವ ಸಂಭವವೇ ಹೆಚ್ಚು. ಪರಿಸ್ಥಿತಿ ಹೀಗಿರುವಾಗ ತಾಳ್ಮೆಯಿಂದ ಆಲೋಚಿಸಿ ಮುನ್ನಡೆಯುವುದನ್ನು ಹೊರತು ಬೇರೆ ಮಾರ್ಗವಿರುವುದಿಲ್ಲ. ಕೊರೋನಾ ಮಹಾಮಾರಿ ನಮಗೆ ಕಲಿಸಿದ ಪಾಠವಿದು. ಅದೆಷ್ಟೇ ಇಷ್ಟವಿಲ್ಲದಿದ್ದರೂ ನಾಳಿನ ಬದುಕಿಗಾಗಿ ಇಂದಿನ ಅದೆಷ್ಟೋ ವಿಚಾರಗಳನ್ನು ತ್ಯಾಗ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿಸಿಬಿಟ್ಟಿತಾ ಮಹಾಮಾರಿ.

ಎಲ್ಲ ಕ್ಷೇತ್ರಗಳಂತೆ ಕೊರೊನಾದಿಂದ ಅತಿಯಾಗಿ ಪೆಟ್ಟುತಿಂದ ಕ್ಷೇತ್ರವೆಂದರೆ ಅದು ಯಕ್ಷಗಾನ ಕ್ಷೇತ್ರ. ಅದರಲ್ಲಿಯೂ ಡೇರೆ ಮೇಳಗಳ ಕಲಾವಿದರ ಪರಿಸ್ಥಿತಿ ‘ಹೇಳಲಾರೆನು ಹೇಳದುಳಿಯಲಾರೆನು’ ಎಂಬಂತಾಗಿತ್ತು. ಬಹುಪಾಲು ಹರಕೆ ಬಯಲಾಟ ಮೇಳಗಳು ತಮ್ಮ ಕಲಾವಿದರಿಗೆ ಕೊರೊನಾ ಸಮಯದಲ್ಲಿಯೂ ಸಂಪೂರ್ಣ ಸಂಬಳವನ್ನು ನೀಡಿವೆ ಎಂಬುದು ಬಹಳ ಸಂತಸದ ಹಾಗೂ ಹೆಮ್ಮೆಯ ವಿಚಾರ.

ಶ್ರೀ ಪೆರ್ಡೂರು ಮೇಳದ ಯಜಮಾನರಾದ ಶ್ರೀ ಕರುಣಾಕರ ಶೆಟ್ಟಿಯವರು ಯಾವುದೇ ಪ್ರಚಾರವಿಲ್ಲದೆ ತಮ್ಮ ಕಲಾವಿದರ ಕಷ್ಟ ಕಾಲದಲ್ಲಿ ಅವರ ಬೆನ್ನೆಲುಬಾಗಿ ನಿಂತು ಸೂಕ್ತವಾಗಿ ಸ್ಪಂದಿಸಿದ್ದರು ಎಂಬುದೂ ಉಲ್ಲೇಖನೀಯ ವಿಚಾರ. ಸಂಕಷ್ಟದ ಸಮಯದಲ್ಲಿ ಒಬ್ಬ ಯಜಮಾನನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲಲೇಬೇಕು. ಲಾಕ್ಡೌನ್ ಸ್ವಲ್ಪ ಸಡಿಲಗೊಂಡ ನಂತರ ಕ್ರಮೇಣ ಮೇಳಗಳು ತಿರುಗಾಟವನ್ನೂ ಆರಂಭಿಸಿದವು. ಆದರೆ ಡೇರೆ ಮೇಳಗಳಾದ ಶ್ರೀ ಪೆರ್ಡೂರು ಹಾಗೂ ಶ್ರೀ ಸಾಲಿಗ್ರಾಮ ಮೇಳಗಳ ಗೊಂದಲಕ್ಕೆ ಪರಿಹಾರವೇ ಇಲ್ಲವೆಂಬ ಪರಿಸ್ಥಿತಿ. ಮೇಳ ಹೊರಡಿಸಬೇಕೆಂದು ಯಜಮಾನರು ನಿರ್ಧರಿಸಿದರೂ ಕೂಡಾ ಸರ್ಕಾರದ ಅನುಮತಿ ದೊರೆಯದೆ ಪಾಡು ಪಡಬೇಕಾಯ್ತು.

ಬದುಕಿನಲ್ಲಿ ಏಳು ಬೀಳುಗಳು ಕಲಾವಿದರಿಗೆ ಹೊಸತಲ್ಲ. ಅದರಲ್ಲಿಯೂ ಯಕ್ಷಗಾನ ಕಲಾವಿದರೆಂದರೆ ಈ ಮಣ್ಣಿನ ಸಂಸ್ಕೃತಿಯನ್ನು ಸಾರುವವರು ಆಂತರ್ಯದಲ್ಲಿ ಸಧೃಢರಾಗಿರುತ್ತಾರೆ. ಬಹುಶಃ ಕೊರೊನಾ ಪರಿಸ್ಥಿತಿಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡವರೆಷ್ಟೊ ಆದರೆ ಆ ಬಗೆಯ ಒಂದು ಉದಾಹರಣೆ ಯಕ್ಷಗಾನ ಕಲಾವಿದರಲ್ಲಿ ಕಾಣಸಿಗುವುದಿಲ್ಲ ಕಾರಣ ಈ ಬಗೆಯ ಹೊಡೆತಗಳು ನಮಗೆ ಹೊಸತಲ್ಲ. ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ದಿಯ ಉತ್ತುಂಗಕ್ಕೇರುವ ಕ್ಷೇತ್ರ ಯಕ್ಷಗಾನವಲ್ಲ ಇಲ್ಲಿ ನಿರಂತರ ಪ್ರಯತ್ನವಿರಬೇಕು ಅದಕ್ಕೆ ತಕ್ಕ ಸಾಧನೆಯಿರಬೇಕು. ಯಕ್ಷಗಾನ ಕಲಾವಿದರು ಕೆಲವೊಮ್ಮೆ ನಿರೀಕ್ಷಿತ ಹಂತವನ್ನು ಸಾಧಿಸುವಲ್ಲಿ ವಿಫಲರಾಗಬಹುದು ಆದರೆ ಮತ್ತೆ ಪ್ರಯತ್ನದಲ್ಲಿ ವಿಫಲರಾಗುವುದಿಲ್ಲ. ಯಕ್ಷಗಾನ ಕಲಾವಿದರ ಈ ಬಗೆಯ ಅನುಭವಗಳೇ ಅವರನ್ನು ಇನ್ನಷ್ಟು ಗಟ್ಟಿಯಾಗಿಸಿದ್ದು.

ತಮ್ಮೆಲ್ಲ ನೋವುಗಳನ್ನೂ ಬಿಗಿಹಿಡಿದು ಸಮಸ್ಯೆಗಳಿಗೆ ಉತ್ತರವಾಗಿ ಬೇರೆಯಷ್ಟು ಮಾರ್ಗಗಳನ್ನು ಹುಡುಕಿಕೊಂಡು ಯಕ್ಷಗಾನದ ಮೇಲಿನ ಪ್ರೇಮವನ್ನು ಅಂತೆಯೇ ಇರಿಸಿಕೊಂಡು ತಾಳ್ಮೆಯಿಂದ ಕಾದ ಫಲ ಈಗ ಮೇಳ ಮತ್ತೆ ತಿರುಗಾಡಲು ಅನುಮತಿ ದೊರೆತಿದೆ. ಎಲ್ಲವೂ ಸನ್ನದ್ಧವಾಗಿದೆ. ಕಾಲ ಸನ್ನಿಹಿತವಾಗಿದೆ. ಆದರೆ ಬದಲಾವಣೆಯ ಗಾಳಿ ಎಲ್ಲೆಡೆಯೂ ಬೀಸಿದ ಪರಿಣಾಮ ಡೇರೆ ಮೇಳಗಳ ಮೇಲೂ ಆಗಿದೆ. ಕಾಲಮಿತಿ ಆಟಗಳೇ ನಡೆಯಬೇಕೆಂಬ ಕೂಗೊಂದೆಡೆಯಾದರೆ ಇಲ್ಲ ಇಡಿ ರಾತ್ರಿ ಆಟವಿರಬೇಕೆಂಬ ಕೂಗೊಂದೆಡೆ ಹೀಗಾಗಿ ಆ ಆಯ್ಕೆಯನ್ನು ಸಂಘಟಕರಿಗೇ ಬಿಟ್ಟು ಅವರು ಹೇಳಿದಂತೆ ಆಟವಾಡಲು ನಮ್ಮ ನೆಚ್ಚಿನ ಪೆರ್ಡೂರು ಮೇಳ ಸಮರ್ಥವಾದ ಹಿಮ್ಮೇಳ ಮುಮ್ಮೇಳದ ಕಲಾವಿದರೊಂದಿಗೆ ಸಂಘಟಕ ಸ್ನೇಹಿ ಮೇಳವಾಗುವತ್ತ ದಾಪುಗಾಲಿಡಲು ಸಿದ್ಧವಾಗಿ ನಿಂತಿದೆ.

ಡೇರೆ ಮೇಳ ಎಂದಾಕ್ಷಣ ಜನ ಬಯಸುವುದು ಹೊಸತನ್ನು. ಹೊಸಪ್ರಸಂಗವಿಲ್ಲದ ಡೇರೆ ಮೇಳದ ತಿರುಗಾಟ ಸಪ್ಪೆಯೇ ಸರಿ. ಪ್ರೊ.ಪವನ್ ಕಿರಣಕೆರೆ ಯವರಂತಹ ಸರಸ್ವತಿಯ ಸುಪುತ್ರ ಶ್ರೀ ಪೆರ್ಡೂರು ಮೇಳದ ಜೊತೆಯಿರುವಾಗ ಹೊಸತನಕ್ಕೇನು ಕೊರತೆ! ಕಾಲಮಿತಿ ಹಾಗೂ ಸಂಪೂರ್ಣ ರಾತ್ರಿ ಎರಡೂ ಬಗೆಯ ಆಟಗಳಿಗೆ ಹೊಂದಾಣಿಕೆಯಾಗುವಂತೆ ಪ್ರಸಂಗವೊಂದನ್ನು ರಚಿಸಿಯೇ ಬಿಟ್ಟಿದ್ದಾರೆ. ಮೇಳ ಹೊರಡುವುದು ಬಹಳ ತಡವಾದ್ದರಿಂದ ಹಾಗೂ ಡೇರೆ ಪ್ರದರ್ಶನಗಳ ಬಗ್ಗೆ ಅಸ್ಥಿರತೆ ಇರುವುದ ರಿಂದ, ನಿಗಧಿಯಾಗಿದ್ದ ಸಾಮಾಜಿಕ ಪ್ರಸಂಗದ ಬದಲಿಗೆ ಸಿದ್ಧವಾದ ಪೌರಾಣಿಕ ಪ್ರಸಂಗ ಇದು, ಆಯ್ದುಕೊಂಡ ಕಥಾವಸ್ತು ಪುರಾಣದ್ದೇ ಆಗಿದೆ. ಪ್ರಸಂಗದ ಹೆಸರು “ಶಪ್ತ ಭಾಮಿನಿ”.

ಮಲೆನಾಡ ಪ್ರಸಿದ್ಧ ಯಕ್ಷಕವಿ ಪ್ರೊ. ಪವನ್ ಕಿರಣಕೆರೆಯವರ ಕುಂಚದಿಂದ ಅರಳಿದ ಹಲವಾರು ಪ್ರಸಂಗಗಳು ಶತಕಕ್ಕೂ ಮೀರಿದ ಪ್ರದರ್ಶನಗಳನ್ನು ಕಂಡಿವೆ. ಮೂಲತಃ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯವರಾದ ಪವನ್ ರು ವೃತ್ತಿಯಲ್ಲಿ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನ ಎಂಕಾಂ ವಿಭಾಗದ ಮುಖ್ಯಸ್ಥರು. ಪ್ರವೃತ್ತಿಯಲ್ಲಿ ತಾಳಮದ್ದಲೆ ಅರ್ಥಧಾರಿ, ಧಾರ್ಮಿಕ ಉಪನ್ಯಾಸಕರು ಹಾಗೂ ಪ್ರಸಂಗಕರ್ತರು. ಪ್ರಸ್ತುತ ಕಾಲದಲ್ಲಿ ಛಂದೋಬದ್ಧವಾಗಿ ಯಕ್ಷಗಾನ ಸಾಹಿತ್ಯ ರಚಿಸುವ ಬೆರಳೆಣಿಕೆಯ ಸಾಹಿತಿಗಳಲ್ಲಿ ಕಿರಣಕೆರೆಯ ವರು ಅಗ್ರಮಾನ್ಯರು. ಅವರ ಪ್ರತಿಯೊಂದು ಪ್ರಸಂಗವೂ ಒಂದೊಂದು ಮೌಲ್ಯವನ್ನು ಪ್ರತಿಪಾದಿಸುತ್ತಾ ಸಾಗುವುದರಿಂದಲೇ ಮೌಲ್ಯಾಧಾರಿತ ಪ್ರಸಂಗಗಳ ಕರ್ತೃ ಎಂಬುದು ಅಭಿಮಾನಿಗಳೇ ಅವರಿಗೆ ನೀಡಿದ ಬಿರುದು.

ಕಲೆಯೆಂಬುದು ಮನೋರಂಜನೆಯ ಮಾಧ್ಯಮ. ಮನೋರಂಜನೆ ಎಂಬುದು ಮನೋವಿಕಾಸಕ್ಕೂ ಮನೋವಿಕಾರಕ್ಕೂ ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ಕೇವಲ ಮನೋವಿಕಾಸವನ್ನು ಮಾತ್ರವೇ ಮಾಡಬಲ್ಲ ಕಲೆಯಿದ್ದರೆ ಅದು ಯಕ್ಷಗಾನ ಮಾತ್ರ. ಹೀಗಿರುವ ಕಲೆಯಲ್ಲಿ ಪ್ರಸಂಗದ ಜೊತೆಗೊಂದಷ್ಟು ರಾಷ್ಟ್ರಪ್ರೇಮ, ಸನಾತನ ಸಂಸ್ಕೃತಿಯ ಔನ್ನತ್ಯ ಈ ಬಗೆಯ ವಿಚಾರಗಳು ಸೇರಿಕೊಂಡರೆ ಹೇಗಿರಬಹುದು!

ಕಿರಣಕೆರೆಯವರ ಪ್ರಸಂಗ ಯುಗ್ಮಯಾಮಿನಿಯಿಂದ ಆರಂಭಗೊಂಡು ಮೇಘರಂಜಿನಿ, ಶಂಕರಾಭರಣ, ಗಗನತಾರೆ, ಗೋಕುಲಾಷ್ಟಮಿ, ಕ್ಷಮಯಾಧರಿತ್ರಿ, ಅಹಂಬ್ರಹ್ಮಾಸ್ಮಿ, ಶತಮಾನಂ ಭವತಿ, ಮಾನಸಗಂಗಾ ಹೀಗೆ ಸಾಲು ಸಾಲು ಯಶಸ್ವೀ ಪ್ರಸಂಗಗಳು ಸಾರಿದ್ದು ಒಂದೊದ್ದು ಮೌಲ್ಯವನ್ನು. ಈ ಬಾರಿಯ ಪೌರಾಣಿಕ ಯಕ್ಷಕಾವ್ಯವನ್ನು ಕಲಾಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ.

ಇನ್ನು ಶ್ರೀ ಪೆರ್ಡೂರು ಮೇಳದ ಕಲಾವಿದರತ್ತ ನೋಟ ಹರಿಸಿದರೆ ಕಳೆದ ವರ್ಷಕ್ಕಿಂತ ಈ ವರ್ಷ ಒಂದಷ್ಟು ಬದಲಾವಣೆಗಳಾಗಿವೆ. ಗಾನಸಾರಥಿ ಜನ್ಸಾಲೆಯವರ ಸಾರಥ್ಯದಲ್ಲಿ ಪ್ರಸನ್ನ ಭಟ್ ಬಾಳ್ಕಲ್ ಹಾಗೂ ಹೊಸ ಸೇರ್ಪಡೆಯಾದ ಯುವ ಭಾಗವತ ಗಣೇಶ್ ಆಚಾರ್ಯರ ಗಾಯನಮೋಡಿ ಜನಮನಸೂರೆಗೊಳ್ಳುವುದರಲ್ಲಿ ಅನುಮಾನವಿಲ್ಲ. ಇನ್ನು ಮದ್ದಳೆಯಲ್ಲಿ ಅನುಭವಿ ಸುನೀಲ್ ಭಂಡಾರಿಯವರು ಹಾಗೂ ಹೊಸ ಸೇರ್ಪಡೆಗೊಂಡ ಶ್ರೀ ಅಕ್ಷಯ್ ಆಚಾರ್ಯ. ಇತ್ತೀಚೆಗಷ್ಟೇ ಅಕ್ಷಯ್ ಜನ್ಸಾಲೆಯವರಂತೆ ಭಾಗವತಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿದ್ದನ್ನು ನಾವಿಲ್ಲಿ ನೆನೆಯಬಹುದು. ಚಂಡೆಯ ಏಕಲವ್ಯ ಸುಜನ್ ಹಾಗೂ ಕಾಡೂರು ರವಿ ಆಚಾರ್ಯ ಇವರ ಸಾಥ್ ಇದ್ದ ಮೇಳೆ ಇದೊಂದು ಅತ್ಯುತ್ತಮ ಹಿಮ್ಮೇಳದ ಸಮ್ಮಿಲನ ಎನ್ನಲಡ್ಡಿಯಿಲ್ಲ.

ಮುಮ್ಮೇಳದಲ್ಲಿ ಜಲವಳ್ಳಿ ವಿದ್ಯಾಧರ ರಾವ್ ಈ ಬಾರಿ ಖಳಪಾತ್ರವೋ ಅಥವಾ ಕಥಾನಾಯಕನೋ ಕಾದುನೋಡಬೇಕು. ಯುವ ಕಣ್ಮಣಿ ಪ್ರಕಾಶ್ ಕಿರಾಡಿ ಭರವಸೆಯನ್ನು ಉಳಿಸಿಕೊಳ್ಳುವರೆಂಬ ಕಾತುರ. ಇನ್ನು ಉದಯ ಹೆಗ್ಡೆ ಕಡಬಾಳು ಈ ವರ್ಷ ಮತ್ತೆ ಪೆರ್ಡೂರು ಮೇಳ ಸೇರಿಕೊಂಡಿದ್ದಾರೆ. ಕಾರ್ತಿಕ್ ಚಿಟ್ಟಾಣಿ, ಕೆಕ್ಕಾರು ಆನಂದಭಟ್, ಮಾಗೋಡು ಅಣ್ಣಪ್ಪ, ಸನ್ಮಯ್ ಭಟ್, ವಿನಾಯಕ ಗುಂಡುಬಾಳ, ಅರುಣ್ ಬಡಾಳ ಇವರೊಂದಿಗೆ ಸ್ತ್ರೀ ವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಹೊಸ ಸೇರ್ಪಡೆ ಸುಧೀರ್ ಉಪ್ಪೂರು, ನಾಗರಾಜ್ ಕುಂಕಿಪಾಲ್ ಹಾಗೂ ನಾಗರಾಜ್ ದೇವಲ್ಕುಂದ ಇದ್ದರೆ ಹಾಸ್ಯಕ್ಕೆ ರಮೇಶ್ ಭಂಡಾರಿ, ರವೀಂದ್ರ ದೇವಾಡಿಗ ಹಾಗೂ ಪುರಂದರ ಮೂಡ್ಕಣಿಯವರೊಂದಿಗೆ ಸಮರ್ಥ ಮುಮ್ಮೇಳದ ಸಾಂಗತ್ಯ ಮೇಳಕ್ಕಿದೆ.

ಇದೇ ಬರುವ 14ರಂದು ಪೆರ್ಡೂರು ಶ್ರೀ ಅನಂತಪದ್ಮನಾಭನ ಕೃಪೆಯಿಂದ ತಿರುಗಾಟ ಪ್ರಾರಂಭಿಸುವ ಪೆರ್ಡೂರು ಮೇಳ 15ನೇ ಜನವರಿ 2021ರಂದು ಹೊಸ ಪ್ರಸಂಗದ ಮೊದಲ ಪ್ರದರ್ಶನವನ್ನು ಮಾಡಲಿದೆ. ದೊಂಬೆ ಕಾಡಿಕಾಂಬ ಹಾಲುಹಬ್ಬದ ಪ್ರಯುಕ್ತ ‘ಕಾಡಿಕಾಂಬ ಯಕ್ಷಸೇವಾಮಿತ್ರರು’ ಇವರ ಸಂಯೋಜನೆಯಲ್ಲಿ ಮೊದಲ ಪ್ರದರ್ಶನ ಹಾಗೂ ಪ್ರಸಂಗ ಬಿಡುಗಡೆ. ಪ್ರಸಂಗ, ಮೇಳ, ಕಲಾವಿದ ಹೀಗೆ ಎಲ್ಲರ ಯಶಸ್ಸು ಅವಲಂಭಿತವಾಗಿರುವುದು ನಿಮ್ಮ ಮೇಲೆಯೆ. ಕಲಾಭಿಮಾನಿಗಳ ಪ್ರೀತಿ & ಪ್ರೋತ್ಸಾಹ ಏನನ್ನೂ ಸಾಧಿಸಿಬಿಡಬಲ್ಲುದು. ನಿಮ್ಮ ಆಶಿರ್ವಾದ ಹಾರೈಕೆ ಸದಾ ನಮ್ಮೊಡನಿರಲಿ ಎಂಬುದಷ್ಟೇ ಕೋರಿಕೆ.

Comments are closed.