ಮದ್ದಲೆ ಮೋಡಿಗಾರನ ಕುಂಚದಲ್ಲಿ ಅರಳಿದೆ ವಿಶಿಷ್ಟ ಗಣಪ

0

ಪರಮೇಶ್ವರ ಭಂಡಾರಿ ಕರ್ಕಿ. ಯಕ್ಷಗಾನ ಅಭಿಮಾನಿಗಳ ಪಾಲಿಗಿದು ಚಿರಪರಿಚಿತ ಹೆಸರು. ಮದ್ದಲೆಯ ಮೋಡಿಗಾರರಾಗಿ ಕಳೆದ ಮೂರು ದಶಕಗಳಿಂದಲೂ ಯಕ್ಷಾಭಿಮಾನಿಗಳನ್ನು ಸೆಳೆದಿರುವ ಪರಮೇಶ್ವರ ಭಂಡಾರಿ ಅವರೀಗ ವಿಶಿಷ್ಟ ಗಣೇಶಮೂರ್ತಿಗಳನ್ನು ನಿರ್ಮಿಸುವ ಮೂಲಕ ತಮ್ಮೊಳಗಿನ ಕಲಾವಿದನನ್ನು ಅನಾವರಣಗೊಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕರ್ಕಿಯವರಾಗಿರೋ ಪರಮೇಶ್ವರ ಭಂಡಾರಿ ಬಡಗುತಿಟ್ಟಿನ ಗಜಮೇಳವಾಗಿರುವ ಸಾಲಿಗ್ರಾಮ ಮೇಳದ ಪ್ರಧಾನ ಮದ್ದಲೆಗಾರರು. ಖ್ಯಾತ ಮದ್ದಲೆಗಾರರಾಗಿರುವ ಪ್ರಭಾಕರ ಭಂಡಾರಿ ಹಾಗೂ ಶಾರದಾ ದಂಪತಿಗಳ ಮಗನಾಗಿರುವ ಪರಮೇಶ್ವರ ಭಂಡಾರಿ ಅವರು ತಂದೆ ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಗುರುಗಳಾದ ಸುಬ್ರಾಯ ಹೆಗಡೆ ಕಪ್ಪೆಕೆರೆ ಅವರಿಂದ ಮದ್ದಲೆ ಕಲೆಯನ್ನು ಕರಗತ ಮಾಡಿಕೊಂಡಿರುವ ಪರಮೇಶ್ವರ ಭಂಡಾರಿ ಅವರು ಅದ್ಬುತ ಚಂಡೆ ವಾದಕರೂ ಹೌದು.

ಶಿರಸಿ, ಗುಂಡಬಾಳ ಮೇಳಗಳಲ್ಲಿ ಮದ್ದಲೆಗಾರರಾಗಿ ಸೇವೆ ಸಲ್ಲಿಸಿ ಇದೀಗ ಕಳೆದ 22 ವರ್ಷಗಳಿಂದಲೂ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಮದ್ದಲೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದುರ್ಗಪ್ಪ ಗುಡಿಗಾರ್, ಶಂಕರ ಭಾಗವತರಂತೆಯೇ ಪರಮೇಶ್ವರ ಭಂಡಾರಿ ಅವರು ತಮ್ಮ ಮದ್ದಲೆಯ ಮೋಡಿಯಿಂದಲೇ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ಅದ್ಬುತ ಕಲಾವಿದ.

ರಂಗನಾಯಕಿ, ಈಶ್ವರಿ ಪರಮೇಶ್ವರಿಯಂತಹ ಸೂಪರ್ ಹಿಟ್ ಪ್ರಸಂಗಗಳಲ್ಲಿ ಮದ್ದಲೆಯ ಮೋಡಿಯನ್ನು ಯಕ್ಷರಂಗಕ್ಕೆ ಪರಿಚಯಿಸಿದವರು. ಏಕ ಕಾಲದಲ್ಲಿ 7 ಮದ್ದಲೆಗಳನ್ನು ಬಾರಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.

ಸಾಮಾಜಿಕ, ಪೌರಾಣಿಕ ಪ್ರಸಂಗಗಳಲ್ಲಿಯೂ ಅಪಾರ ಅನುಭವವನ್ನು ಹೊಂದಿರುವ ಪರಮೇಶ್ವರ ಭಂಡಾರಿ ಅವರು ಸಾಂಪ್ರದಾಯಿಕತೆಗೆ ಧಕ್ಕೆ ಬಾರದಂತೆ ಪ್ರೇಕ್ಷಕರನ್ನು ರಂಜಿಸುವ ಕಲೆಯಲ್ಲಿ ಪರಿಣಿತರರು.

ವಂಶಪಾರಂಪರ್ಯವಾಗಿ ಬೆಳೆದುಬಂದಿರುವ ವಾದನ ಕಲೆಯಲ್ಲಿ ಅಪಾರ ಜ್ಞಾನವನ್ನು ರೂಢಿಸಿಕೊಂಡಿರುವ ಪರಮೇಶ್ವರ ಭಂಡಾರಿ ಅವರು ಕರಾವಳಿಯ ಯಕ್ಷಗಾನದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಯಕ್ಷಗಾನದ ಜೊತೆ ಜೊತೆಗೆ ಅವರ ಕುಂಚದಲ್ಲಿ ಮೂಡಿಬಂದಿರುವ ಗಣಪನ ಮೂರ್ತಿಗಳು ಇದೀಗ ಕಣ್ಮನ ಸೆಳೆಯುತ್ತಿದೆ.

ಹಲವು ವರ್ಷಗಳಿಂದಲೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನ ಮೂರ್ತಿಯನ್ನು ತಯಾರಿಸುತ್ತಿರುವ ಪರಮೇಶ್ವರ ಭಂಡಾರಿ ಅವರು ಈ ಬಾರಿ ವಿಶಿಷ್ಟ ಗಣಪನ ಮೂರ್ತಿಗಳನ್ನು ನಿರ್ಮಿಸಿದ್ದಾರೆ.

ಮಳೆಗಾಲದಲ್ಲಿ ಯಕ್ಷಗಾನಕ್ಕೆ ಬಿಡುವು ಸಿಗುವುದರಿಂದ ಮಂಜುನಾಥ ಭಂಡಾರಿ ಹಾಗೂ ಮನೆಯವರೊಂದಿಗೆ ಸೇರಿ ಬಗೆ ಬಗೆ ಗಣೇಶ ಮೂರ್ತಿಗಳನ್ನು ಸಿದ್ದಪಡಿಸುತ್ತಾರೆ.

ಅದ್ರಲ್ಲೂ ಗಣೇಶನ ಮೂರ್ತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ನೂರಾರು ಗಣೇಶ ಮೂರ್ತಿಗಳನ್ನು ನಿರ್ಮಿಸಿರುವ ಪರಮೇಶ್ವರ ಭಂಡಾರಿ ಅವರ ತಾಳ್ಮೆ, ಕೈಚಳಕಕ್ಕೆ ಹಿಡಿದ ಕೈಗನ್ನಡಿಯಂತೆ ಮೂಡಿಬಂದಿದೆ.

ಮೇಳದಲ್ಲಿ ಬದ್ದತೆ, ಕೆಲಸದಲ್ಲಿ ನಿಷ್ಠೆಯನ್ನು ರೂಢಿಸಿಕೊಂಡವರು. ಮೇಳದ ರಂಗಸ್ಥಳ ಹಾಗೂ ಚೌಕಿಯಲ್ಲಿ ಶಿಸ್ತನ್ನು ರೂಢಿಸಿಕೊಂಡಿರುವ ಕಲಾವಿದರೆಂಬ ಖ್ಯಾತಿಗೆ ಪಾತ್ರರಾಗಿರುವ ಪರಮೇಶ್ವರ ಭಂಡಾರಿ ಅವರ ಶಾಂತ ಸ್ವಭಾವ, ಕಲೆಯ ಮೇಲೆ ಅವರಿಗಿರುವ ಪ್ರೀತಿ ಗಣೇಶ ಮೂರ್ತಿಗಳಿಂದಲೇ ಸಾಬೀತಾಗಿದೆ.

ಪತ್ನಿ ಭಾರತಿ ಮಗ ಪುನೀತ್ ಹಾಗೂ ಮಗಳು ಪ್ರಜ್ಞಾರೊಂದಿಗೆ ಸುಂದರ ಸಂಸಾರವನ್ನು ನಡೆಸುತ್ತಿರುವ ಪರಮೇಶ್ವರ ಭಂಡಾರಿ ಅವರ ಕಲಾ ಬದುಕು ಇನ್ನಷ್ಟು ಉತ್ತುಂಗಕ್ಕೆ ಏರಲಿ.

ಮದ್ದಲೆಯ ಮೋಡಿಗಾರರಾಗಿ ಪ್ರಖ್ಯಾತಿಯನ್ನು ಪಡೆದಿದ್ದು, ಇದೀಗ ತಾನೊಬ್ಬ ಅದ್ಬುತ ಕಲಾವಿದ ಅನ್ನೋದನ್ನು ಸಾಬೀತು ಪಡಿಸಿದ್ದಾರೆ.

ಸಿಂಹಾಸನಾರೂಢ ಗಣಪ

ಪರಮೇಶ್ವರ ಭಂಡಾರಿ ಅವರ ಮನೆಯಲ್ಲಿ ಸಿದ್ದಗೊಳ್ಳುತ್ತಿರುವ ಹಲಸಿನ ಗಣಪನಿಗೆ ಅಂತಿಮ ರೂಪ ನೀಡುತ್ತಿರುವುದು

ಕಪ್ಪುಗಣಪ

Leave A Reply

Your email address will not be published.