ಕೇರಳದ ಎರಡು ಜಿಲ್ಲೆಗಳಲ್ಲಿ ಹಕ್ಕಿಜ್ವರ : ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ…!

ಕೇರಳ : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೇರಳದ ಆಲಪುಪಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ (ಏವಿಯನ್ ಇನ್​ಫ್ಲುಂಜ- ಎಚ್5ಎನ್8 ) ಕಾಣಿಸಿಕೊಂಡಿರುವುದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಟ್ಟೆಚ್ಚರವಹಿಸಲಾಗುತ್ತಿದೆ.

ಈ ಪ್ರದೇಶಗಳಲ್ಲಿ ಮೃತಪಟ್ಟ 8 ಹಕ್ಕಿಗಳ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಿಕೊಡಲಾಗಿದ್ದು, ಈ ಪೈಕಿ ಮೂರು ಹಕ್ಕಿಗಳಲ್ಲಿ ಜ್ವರದ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹಕ್ಕಿಜ್ವರ ಕಾಣಿಸಿಕೊಂಡಿರುವ 1 ಕಿ. ಮೀ ಪ್ರದೇಶವನ್ನು ಸೋಂಕು ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಹಕ್ಕಿಜ್ವರದ ಸೋಂಕು ತೀವ್ರವಾಗಿ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ನಿಯಂತ್ರಣ ಕೇಂದ್ರ ಆರಂಭಿಸುವುದರ ಜೊತೆಗೆ ತ್ವರಿತ ಸ್ಪಂದನಾ ತಂಡಗಳನ್ನು ಆಲಪುಪಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ನಿಯೋಜನೆ ಮಾಡಲಾಗಿದೆ.

ಕಳೆದ ಹಲವು ದಿನಗಳಿಂದಲೂ ಕೇರಳದ ಹಲವು ಜಿಲ್ಲೆಗಳಲ್ಲಿ 12 ಸಾವಿರಕ್ಕೂ ಅಧಿಕ ಬಾತುಕೋಳಿಗಳು ಸಾವನ್ನಪ್ಪಿದ್ದು, 36 ಸಾವಿರಕ್ಕೂ ಅಧಿಕ ಹಕ್ಕಿಗಳಿಗೆ ಜ್ವರ ಸೋಂಕು ತಗುಲಿರಬಹುದೆಂದು ಅಂದಾಜಿಸಲಾಗಿದೆ. ಕೇರಳ ಮಾತ್ರವಲ್ಲದೇ ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿಯೂ ಹಕ್ಕಿಜ್ವರ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತೀವ್ರ ಕಟ್ಟೆಚ್ಚರವನ್ನು ವಹಿಸಲಾಗುತ್ತಿದೆ.

Comments are closed.