ಕರಾವಳಿಯಲ್ಲಿ ಮತ್ತೆ ಅಬ್ಬರಿಸುತ್ತಾ ಯಕ್ಷಗಾನ : ಮಳೆಗಾಲದಲ್ಲಿ ನಡೆಯುತ್ತೆ ಪ್ರಾಯೋಗಿಕ ಪ್ರದರ್ಶನ !

0

ಉಡುಪಿ : ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಕೊರೊನಾ ಕೊಡಲಿಯೇಟುಕೊಟ್ಟಿದೆ. ಯಕ್ಷಗಾನವನ್ನೇ ನಂಬಿಕೊಂಡಿದ್ದ ಕಲಾವಿದರು ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಳೆಗಾಲದ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಯಕ್ಷಗಾನ ಕಲಾವಿದರು ಆಗ್ರಹಿಸುತ್ತಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು 5,000ಕ್ಕೂ ಮಿಕ್ಕಿದ ಯಕ್ಷಗಾನ ಕಲಾವಿದರಿದ್ದಾರೆ. ಕರಾವಳಿಯ ಯಕ್ಷಗಾನ ಕಲೆ ಇಂದು ದೇಶ ವಿದೇಶಗಳಲ್ಲಿಯೂ ತನ್ನ ಖ್ಯಾತಿಯನ್ನು ಪಡೆದುಕೊಂಡಿದೆ. ಆದರೆ ಕೊರೊನಾ ಅನ್ನೋ ಹೆಮ್ಮಾರಿ ಯಕ್ಷಗಾನ ಕಲಾವಿದರ ಬದುಕಿಗೆ ಕೊಳ್ಳಿಯಿಟ್ಟಿದೆ. ಹೊತ್ತಿನ ತುತ್ತಿಗಾಗಿ ಬದಲಿ ಕಾಯಕವನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟು ಉಡುಪಿ ಜಿಲ್ಲೆಯಲ್ಲಿ ಮಂದಾರ್ತಿ, ಅಮೃತೇಶ್ವರಿ, ಮಾರಣಕಟ್ಟೆ ಹಾಗೂ ಕಮಲಶಿಲೆ ಮೇಳಗಳು ಯಕ್ಷಗಾನ ಪ್ರದರ್ಶನವನ್ನು ನೀಡುತ್ತಿವೆ. ಅದ್ರಲ್ಲೂ ಮಂದಾರ್ತಿ ಮೇಳ ಮಳೆಗಾಲದಲ್ಲಿಯೂ ಯಕ್ಷಗಾನ ಪ್ರದರ್ಶನವನ್ನು ನೀಡುವ ಮೂಲಕ ಭಕ್ತರ ಬೆಳಕಿನ ಸೇವೆಯ ಹರಿಕೆಯನ್ನು ತೀರಿಸಲಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 3 ತಿಂಗಳ ಯಕ್ಷಗಾನ ಪ್ರದರ್ಶನ ಸ್ಥಗಿತಗೊಂಡಿದೆ. ಅಲ್ಲದೇ ಮಳೆಗಾಲದಲ್ಲಿ ನಡೆಯುತ್ತಿದ್ದ ಆಟಕ್ಕೂ ಬ್ರೇಕ್ ಬಿದ್ದಿದೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಯಕ್ಷಗಾನ ಮೇಳಗಳು ಕಲಾವಿದರಿಗೆ ವರ್ಷಂಪ್ರತಿ ನೀಡಲಾಗುತ್ತಿದ್ದ ಮುಂಗಡ ಹಣವನ್ನೂ ಪಾವತಿ ಮಾಡಿಲ್ಲ. ಹೀಗಾಗಿಯೇ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನವನ್ನು ಆರಂಭಿಸಿರುವ ಮಂದಾರ್ತಿಯಲ್ಲಿ ಈ ಬಾರಿಯೂ ಮಳೆಗಾಲದ ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸಬೇಕೆಂಬ ಮಾತುಗಳು ಕೇಳಿಬಂದಿದೆ. ಅಲ್ಲದೇ ಈ ಕುರಿತು ಮಂದಾರ್ತಿ ದೇವಾಲಯದ ವತಿಯಿಂದಲೂ ಜಿಲ್ಲಾಡಳಿತಕ್ಕೆ ಮನವಿಯನ್ನು ಮಾಡಲಾಗಿದೆ. ಯಾವುದೇ ದುಡಿಮೆಯಿಲ್ಲದೇ ಕಂಗಾಲಾಗಿರುವ ಯಕ್ಷಗಾನ ಕಲಾವಿದರ ಪರವಾಗಿ ಯಕ್ಷಗಾನ ಭಾಗವತರಾದ ಸದಾಶಿವ ಅಮೀನ್, ಕಲಾವಿದರಾದ ಹೆನ್ನಾಬೈಲು ವಿಶ್ವನಾಥ ಪೂಜಾರಿ, ದಿನಕರ ಕುಂದರ್, ಪ್ರದೀಪ್ ಶೆಟ್ಟಿ, ರಾಘವೇಂದ್ರ ಪೇತ್ರಿ ಮುಂತಾದವರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ವಿನಂತಿಸಿಕೊಂಡಿದ್ದಾರೆ

ಕೊರೊನಾ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಪ್ರತಿದಿನ ಕೇವಲ 30 ಕಲಾವಿದರು ಹಾಗೂ ಯಕ್ಷಗಾನದ ಹರಿಕೆ ಸಲ್ಲಿಸುವವರ ಪೈಕಿ 20 ಜನರಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸುವುದು. ಮಂದಾರ್ತಿ ದೇವಾಲಯದ ಹಾಲ್ ನಲ್ಲಿ ಭದ್ರತೆಯನ್ನು ಕೈಗೊಂಡ ಯಕ್ಷಗಾನವನ್ನು ನಡೆಸಬಹುದಾಗಿದೆ. ಕಲಾವಿದರು, ಪ್ರೇಕ್ಷಕರು ಸೇರಿದಂತೆ ಎಲ್ಲರೂ ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಯಕ್ಷಗಾನ ಪ್ರದರ್ಶನ ನೀಡಲು ಅವಕಾಶವನ್ನು ಕಲ್ಪಿಸಿದ್ರೆ ಸುಮಾರು 200ಕ್ಕೂ ಅಧಿಕ ಕಲಾವಿದರಿಗೆ ಸಹಾಯವಾಗುತ್ತದೆ ಅಂತಾ ಮನವಿ ಮಾಡಲಾಗಿದೆ.

ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾಯೋಗಿಕವಾಗಿ ಮಳೆಗಾಲದಲ್ಲಿ ಯಕ್ಷಗಾನ ಸೇವೆಯನ್ನು ಆರಂಭಿಸುವ ಸಾಧ್ಯತೆಯೂ ಇದೆ.
ಪ್ರತೀ ಮೇಳದಲ್ಲಿ ಕಲಾವಿದರು ಹಾಗೂ ಸಿಬ್ಬಂದಿಗಳು ಸೇರಿದಂತೆ ಒಟ್ಟು 40 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂದಾರ್ತಿಯಲ್ಲಿ ಒಟ್ಟು 5 ಮೇಳಗಳಿದ್ದು 200 ಜನರಿಗೆ ಉದ್ಯೋಗ ಲಭಿಸಿದಂತಾಗುತ್ತದೆ.

ಮಂದಾರ್ತಿ ಮೇಳದ ಪ್ರಾಯೋಗಿಕ ಯಕ್ಷಗಾನ ಯಶಸ್ವಿಯಾದ್ರೆ ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ನಡೆಸುವ ಅಮೃತೇಶ್ವರಿ, ಕಮಲಶಿಲೆ ಹಾಗೂ ಮಾರಣಕಟ್ಟೆಯ ಮೇಳಗಳಿಗೂ ಯಕ್ಷಗಾನ ಸೇವೆಯನ್ನು ಸಲ್ಲಿಸಬಹುದಾಗಿದೆ. ಇನ್ನು ಉಳಿದ ಮೇಳಗಳು ಕೂಡ ಹಂತ ಹಂತವಾಗಿ ಹರಿಕೆ ಬಯಲಾಟ ಸೇವೆಯನ್ನು ಒದಗಿಸಲು ಸಹಕಾರಿಯಾಗಲಿದೆ ಅನ್ನುವುದು ಸದ್ಯದ ಲೆಕ್ಕಾಚಾರ. ಇನ್ನು ಹವ್ಯಾಸಿ ಯಕ್ಷಗಾನ ಕಲಾವಿದರ ಪರಿಸ್ಥಿತಿಯೂ ಸಂಕಷ್ಟದಲ್ಲಿದೆ. ಯಕ್ಷಗಾನ ಕಲಾವಿದರು ಇದುವರೆಗೂ ಸರಕಾರಗಳ ಮುಂದೆ ಎಂದೂ ಬೇಡಿಕೆಯನ್ನು ಇಟ್ಟವರಲ್ಲ. ಯಕ್ಷ ಸೇವೆಯಲ್ಲಿ ಸಿಗುತ್ತಿದ್ದ ಅಷ್ಟೋ ಇಷ್ಟೋ ಹಣದಲ್ಲಿಯೇ ಬದುಕನ್ನು ಕಟ್ಟಿಕೊಂಡು, ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ರು. ಆದ್ರೆ ಕೊರೊನಾ ವೈರಸ್ ಸೋಂಕಿನಿಂದ ಹೇರಿಕೆಯಾಗಿರುವ ಲಾಕ್ ಡೌನ್ ಯಕ್ಷಗಾನ ಕಲಾವಿದರನ್ನು ತತ್ತರಿಸುವಂತೆ ಮಾಡಿದೆ.

ರಾಜ್ಯ ಸರಕಾರ ಕೆಲವೇ ಕಲವು ಕಲಾವಿದರಿಗೆ ಮಾತ್ರವೇ ಸಹಾಯಧನ ವಿತರಿಸುವ ಭರವಸೆಯನ್ನು ಕೊಟ್ಟಿದೆ. ಆದರೆ ಯಕ್ಷಗಾನವನ್ನೇ ಉಸಿರಾಗಿಸಿಕೊಂಡಿರುವ ಯಕ್ಷಗಾನ ಕಲಾವಿದರ ಉಳಿವಿಗಾಗಿ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಜೊತೆಗೆ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕೊಟ್ರೆ ಕಲಾಮಾತೆಯ ಸೇವೆಯ ಜೊತೆಗೆ ಜೀವನ ನಿರ್ವಹಣೆಗೂ ಸಹಕಾರಿಯಾಗಲಿದೆ ಅನ್ನುವುದು ಯಕ್ಷಗಾನ ಕಲಾವಿದರ ಮನವಿ.

Leave A Reply

Your email address will not be published.