ಕರ್ನಾಟಕಕ್ಕೆ ಅಮಿತ್‌ ಶಾ ಭೇಟಿ : ಹಿಂದುಳಿದ ವರ್ಗದ ನಾಯಕ ಸುನಿಲ್‌ ಕುಮಾರ್‌ಗೆ ರಾಜ್ಯಾಧ್ಯಕ್ಷ ಹುದ್ದೆ…!

ಬೆಂಗಳೂರು : ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಅಮಿತ್‌ ಶಾ ಭೇಟಿಯ ಬೆನ್ನಲ್ಲೇ ರಾಜ್ಯಾಧ್ಯಕ್ಷದ ಬದಲಾವಣೆಯ ಮಾತು ಕೇಳಿಬರುತ್ತಿದ್ದು, ಹಿಂದುಳಿದ ನಾಯಕ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಒಲಿಯುತ್ತೆ ಅನ್ನೋ ಮಾತುಗಳು ಕೇಳಿಬಂದಿದೆ.

ಮಾಜಿಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಆದರೆ ಬಿವೈ ವಿಜಯೇಂದ್ರ ವಿರುದ್ದ ಕೆಲ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಅದ್ರಲ್ಲೂ ವಿಜಯೇಂದ್ರ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಲಾಗಿದೆ.

ಇದರ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಅದ್ರಲ್ಲೂ ಬಿಜೆಪಿ ನಾಯಕರಾಗಿರುವ ರಮೇಶ್‌ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ್‌, ಕುಮಾರ ಬಂಗಾರಪ್ಪ ಹಾಗೂ ಬಿಪಿ ಹರೀಶ್‌ ಅವರು ಬಿವೈ ವಿಜಯೇಂದ್ರ ಅವರನ್ನು ಬದಲಾಯಿಸುವಂತೆ ಪಟ್ಟು ಹಿಡಿದಿದ್ದಾರೆ. ರೆಬೆಲ್‌ ನಾಯಕರ ಬೇಡಿಕೆಗೆ ಬಿಜೆಪಿ ಹೈಕಮಾಂಡ್‌ ಅಸ್ತು ಎಂದಿದೆ ಎನ್ನಲಾಗುತ್ತಿದೆ.

ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಾತಿ ಪೂರ್ಣಗೊಂಡಿದೆ. ಒಂದೊಮ್ಮೆ ಬಿವೈ ವಿಜಯೇಂದ್ರ ಅವರನ್ನು ಮುಂದುವರಿಕೆ ಮಾಡೋದೆ ಆಗಿದ್ರೆ, ಇಷ್ಟು ಹೊತ್ತಿಗೆ ಬಿಜೆಪಿ ಘೋಷಣೆ ಮಾಡುತ್ತಿತ್ತು. ಆದರೆ ಬಿಜೆಪಿ ಈ ಕುರಿತು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿರೋದನ್ನು ನೋಡಿದ್ರೆ ಬಿವೈ ವಿಜಯೇಂದ್ರ ಬದಲಾವಣೆ ಆಗೋದು ಖಚಿತ ಎನ್ನಲಾಗುತ್ತಿದೆ.

ಪಟ್ಟು ಬಿಡದ ರೆಬೆಲ್‌ ನಾಯಕರು..!

ಕರ್ನಾಟಕದಲ್ಲಿ ರೆಬೆಲ್‌ ನಾಯಕರು ರಾಜ್ಯಾಧ್ಯಕ್ಷರ ಬದಲಾವಣೆಗೆ ತೊಡೆ ತಟ್ಟಿದ ಬೆನ್ನಲ್ಲೇ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಪ್ರಹ್ಲಾದ್‌ ಜೋಷಿ ಅವರಿಗೆ ಭಿನ್ನಮತ ಶಮನದ ಜವಾಬ್ದಾರಿಯನ್ನು ನೀಡಲಾಗಿತ್ತು. ಹೀಗಾಗಿ ರೆಬೆಲ್‌ ನಾಯಕರಾಗಿರುವ ಮಾಜಿ ಕೇಂದ್ರ ಸಚಿವ, ಸಂಸದ ಜಿಎಂ ಸಿದ್ದೇಶ್ವರ್‌ ಹಾಗೂ ಶಾಸಕ ಬಿಪಿ ಹರೀಶ್‌ ಅವರ ಜೊತೆಗೆ ಕೇಂದ್ರ ಸಚಿವರಾಗಿರೋ ಪ್ರಹ್ಲಾದ್‌ ಜೋಷಿ, ವಿ. ಸೋಮಣ್ಣ, ಶಾಸಕ ಕಾರ್ಕಳ ಸುನಿಲ್‌ ಕುಮಾರ್‌ ಅವರು ಸಭೆ ನಡೆಸಿದ್ದರು.

ಆದರೆ ಈ ಸಭೆಯಲ್ಲಿ ರೆಬೆಲ್‌ ನಾಯಕರು ತಮ್ಮ ಪಟ್ಟನ್ನು ಸಡಿಲಿಸಿಲ್ಲ. ಶತಾಯಗತಾಯ ಬಿವೈ ವಿಜಯೇಂದ್ರ ಅವರನ್ನು ಬದಲಾವಣೆ ಮಾಡಲೇ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಇದೀಗ ರಾಜ್ಯಕ್ಕೆ ಅಮಿತ್‌ ಶಾ ಅವರು ಭೇಟಿ ನೀಡಿದ ಬೆನ್ನಲ್ಲೇ ರೆಬೆಲ್‌ ನಾಯಕರು ಸಭೆಯನ್ನು ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ತಮ್ಮ ಪಟ್ಟು ಸಡಿಲಿಸೋದಿಲ್ಲಾ ಅನ್ನೋ ಸೂಚನೆ ಕೊಟ್ಟಿದ್ದಾರೆ.

ಹಿಂದುಳಿದ ನಾಯಕ ಸುನಿಲ್‌ ಕುಮಾರ್‌ ಬಿಜೆಪಿ ರಾಜ್ಯಾಧ್ಯಕ್ಷ ..?

ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಶತಾಯಗತಾಯ ಕರ್ನಾಟಕದ ಕಾಂಗ್ರೆಸ್‌ ಸರಕಾರವನ್ನು ಪತನಗೊಳಿಸಿ, ಬಿಜೆಪಿಯ ಆಧಿಪತ್ಯ ಆರಂಭಿಸೋದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ರಣತಂತ್ರ ಹೂಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿನ ಭಿನ್ನಮತ ಮುಂಬರುವ ಚುನಾವಣೆಗೆ ತೊಡಕಾಗುವ ಸಾಧ್ಯತೆಯಿದೆ. ಇದೇ ಕಾರಣದಿಂದಲೇ ಅಳೆದು ತೂಗಿ ಬಿಜೆಪಿ ರಾಜ್ಯಾಧ್ಯಕ್ಷ ನೇಮಕಾತಿಯನ್ನು ಮಾಡುತ್ತಿದೆ.

ಒಂದೊಮ್ಮೆ ಬಿಜೆಪಿ ರಾಜ್ಯಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರನ್ನು ಮುಂದಿನ ಅವಧಿಗೆ ಮುಂದುವರಿಕೆ ಮಾಡದೇ ಇದ್ದಲ್ಲಿ, ಮುಂದಿನ ರಾಜ್ಯಾಧ್ಯಕ್ಷ ಯಾರು ಆಗ್ತಾರೆ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸದ್ಯ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಮೂರು ಹೆಸರುಗಳು ಕೇಳಿಬಂದಿದೆ. ಒಂದು ಲಿಂಗಾಯಿತ ಮುಖಂಡ, ಕೇಂದ್ರ ಸಚಿವ ವಿ.ಸೋಮಣ್ಣ, ಒಕ್ಕಲಿಗರ ನಾಯಕ, ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಹಾಗೂ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ, ಕಾರ್ಕಳ ಶಾಸಕರಾಗಿರುವ ವಿ. ಸುನಿಲ್‌ ಕುಮಾರ್.‌

ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯಾಧ್ಯಕ್ಷ ಹುದ್ದೆಯ ಮೇಳೆ ಕಣ್ಣಿಟ್ಟಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ದ ವಿ.ಸೋಮಣ್ಣ ಮುನಿಸು ಹೊಂದಿದ್ದಾರೆ. ತಮ್ಮ ಅಸಮಾಧಾನವನ್ನು ಈಗಾಗಲೇ ಸೋಮಣ್ಣ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಅವರನ್ನು ಕೆಳಗೆ ಇಳಿಸಿ ಸೋಮಣ್ಣ ಅವರಿಗೆ ಪಕ್ಷದ ವರಿಷ್ಠರು ಮುಂದಾದ್ರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ. ಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರು ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸೋಮಣ್ಣ ಕೂಡ ಅದೇ ಸಮುದಾಯದವರೇ ಆಗಿರೋ ಕಾರಣಕ್ಕೆ ಅವರಿಗೆ ಹುದ್ದೆ ಸಿಗುವುದು ಅನುಮಾನ.

ಬಿಜೆಪಿ ಮತ್ತೆ ಲಿಂಗಾಯಿತ ಸಮುದಾಯದ ನಾಯಕರನ್ನೇ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸೋದಕ್ಕೂ ಸಿದ್ದವಿಲ್ಲ ಎನ್ನಲಾಗುತ್ತಿದೆ. ವಿಧಾನ ಪರಿಷತ್‌ ಸದಸ್ಯ, ಚಿಕ್ಕಮಗಳೂರಿನ ಸಿಟಿ ರವಿ ಕೂಡ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಸಿ.ಟಿ. ರವಿ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಆಗಿದ್ದರೂ ಕೂಡ ಸಿಟಿ ರವಿ ಅವರನ್ನು ನೇಮಕ ಮಾಡೋದಕ್ಕೂ ಯಡಿಯೂರಪ್ಪ ಬಣದ ವಿರೋಧವಿದೆ.

ಈ ಹಿಂದೆ ಸಿಟಿ ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದರು. ಆದರೆ ಸಿಟಿ ರವಿ ಅವರ ಕಾರ್ಯವೈಖರಿ ಕೇಂದ್ರದ ಬಿಜೆಪಿ ನಾಯಕರಿಗೆ ಇಷ್ಟವಾದಂತಿಲ್ಲ. ಹೀಗಾಗಿಯೇ ಅವರನ್ನು ಕೇಂದ್ರ ಬಿಜೆಪಿ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಅಲ್ಲದೇ ಕಳೆದ ಚುನಾವಣೆಯಲ್ಲಿ ಸಿಟಿ ರವಿ ಸೋಲು ಕಂಡಿದ್ದು, ರಾಜ್ಯದಲ್ಲಿ ಅವರ ವರ್ಚಸ್ಸು ಕುಂದಿದೆ ಎನ್ನಲಾಗುತ್ತಿದೆ.

Also Read : PM-SYM Yojana: ಈ ಯೋಜನೆಯಡಿ ಪ್ರತೀ ತಿಂಗಳು 3000 ರೂ.. : ಪುರುಷರಿಗೂ ಸಿಗುತ್ತೆ ಹಣ

ರಾಜ್ಯ ಬಿಜೆಪಿಯನ್ನು ಹಾಗಾದ್ರೆ ಯಾರು ಮುನ್ನೆಡೆಸುತ್ತಾರೆ ಅಂದ್ರೆ ಅದಕ್ಕೆ ಉತ್ತರವಾಗಿರೋದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್.‌ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ರೆ, ವಿ.ಸುನಿಲ್‌ ಕುಮಾರ್‌ ಅವರು ಪ್ರಧಾನ ಕಾರ್ಯದರ್ಶಿ ಆಗಿದ್ರು. ಈ ಹಿಂದೆ ಸುನಿಲ್‌ ಕುಮಾರ್‌ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವಿಧಾನಸಭೆಯ ಮುಖ್ಯ ಸಚೇತಕರಾಗಿಯೂ ಪಕ್ಷವನ್ನು ಮುನ್ನೆಡೆಸಿದ್ದರು.

ಸಚಿವರಾಗಿ ಸೇವೆ ಸಲ್ಲಿಸಿದ್ದು, ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ವಿ.ಸುನಿಲ್‌ ಕುಮಾರ್‌ ಅವರು ಈಡಿಗ ಸಮುದಾಯ (ಬಿಲ್ಲವ)ದ ಪ್ರಭಾವಿ ನಾಯಕರೂ ಹೌದು. ಅಷ್ಟೇ ಅಲ್ಲಾ, ಬಿಜೆಪಿ ಹಿಂದುಳಿದ ವರ್ಗಕ್ಕೆ ಸ್ಥಾನಮಾನ ನೀಡುತ್ತಿಲ್ಲ ಅನ್ನೋ ಆರೋಪ ಕೇಳಿಬರುತ್ತಿದ್ದು, ಈ ಬಾರಿ ಹಿಂದುಳಿದ ವರ್ಗಗಳ ನಾಯಕರಾಗಿರುವ ವಿ. ಸುನಿಲ್‌ ಕುಮಾರ್‌ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲು ಬಿಜೆಪಿ ಹೈಕಮಾಂಡ್‌ ಮನಸ್ಸು ಮಾಡಿದೆ ಎನ್ನಲಾಗುತ್ತಿದೆ.

ಬಿಜೆಪಿಯ ಹಿರಿಯ ಶಾಸಕ ಆರ್.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ವಿಧಾನಸಭಾ ಕಲಾಪದಲ್ಲಿ ಇದ್ದರೂ ಕೂಡ, ಕಾಂಗ್ರೆಸ್‌ ಸರಕಾರದ ವಿರುದ್ದ ಹರಿಹಾಯ್ದು, ಬಿಜೆಪಿಯನ್ನು ಸಮರ್ಥಿಸಿ ಕೊಂಡಿದ್ದು ಇದೇ ಸುನಿಲ್‌ ಕುಮಾರ್.‌ ವಿಧಾನಸಭೆಯಲ್ಲಿ ಸುನಿಲ್‌ ಕುಮಾರ್‌ ಅವರು ವೀರಾವೇಷದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಸೂಕ್ತ ವ್ಯಕ್ತಿ ಅನ್ನೋ ಅಭಿಪ್ರಾಯ ಬಿಜೆಪಿ ಕಾರ್ಯಕರ್ತರ ವಲಯದಿಂದ ಕೇಳಿಬಂದಿತ್ತು.

ರಾಜ್ಯಾಧ್ಯಕ್ಷರ ಬದಲಾವಣೆಗೆ ಓಕೆ ಅಂತಾರಾ ಬಿಎಸ್‌ವೈ ?

ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬುಗಿಲೆದ್ದಿರುವ ಅಸಮಾಧಾನದ ಹೊಗೆಯನ್ನು ನಂದಿಸೋದಕ್ಕೆ ಸದ್ಯ ಉಳಿದಿರೋದು ರಾಜ್ಯಾಧ್ಯಕ್ಷರ ಬದಲಾವಣೆ ಅನಿವಾರ್ಯ. ಆದರೆ ಬಿವೈ ವಿಜಯೇಂದ್ರ ಅವರ ಬದಲಾವಣೆ ಬಿಜೆಪಿಗೆ ಅಷ್ಟು ಸುಲಭವಲ್ಲ. ರೆಬೆಲ್‌ ನಾಯಕರ ಒತ್ತಡಕ್ಕೆ ಮಣಿದು ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ, ಯಡಿಯೂರಪ್ಪ ಅವರ ವಿರೋಧವನ್ನು ಬಿಜೆಪಿ ಕಟ್ಟಿಕೊಳ್ಳಲಿದೆ.

ಬಲವಂತವಾಗಿ ಬಿ.ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕಳೆಗೆ ಇಳಿಸಿದ್ರೆ, ಬಿಎಸ್‌ ಯಡಿಯೂರಪ್ಪ ತನ್ನ ಆಪ್ತ ನಾಯಕರಿಗೆ ಪಟ್ಟ ಕಟ್ಟೋದಕ್ಕೆ ಹೇಳುವ ಸಾಧ್ಯತೆಯಿದೆ. ಯಡಿಯೂರಪ್ಪ ಹಾಗೂ ರೆಬೆಲ್‌ ನಾಯಕರಿಗೂ ಒಪ್ಪಿಗೆ ಆಗುವ ನಾಯಕರು ಬಿಜೆಪಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಪ್ರಹ್ಲಾದ್‌ ಜೋಷಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡೋದಕ್ಕೆ ಬಿಜೆಪಿ ಸಿದ್ದವಿಲ್ಲ, ಅನಂತ ಕುಮಾರ್‌ ಬಳಿಕ ರಾಜ್ಯ ಹಾಗೂ ರಾಷ್ಟ್ರ ನಾಯಕರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿರೋದು ಪ್ರಹ್ಲಾದ್‌ ಜೋಷಿ.

Also Read : ಉಡುಪಿ : ಶಾಲಾ ಮಕ್ಕಳ ವಾಹನಗಳ ವಿರುದ್ದ ಪೊಲೀಸರ ವಾರ್ನಿಂಗ್‌, ಬಾರೀ ದಂಡ

ವಿ.ಸೋಮಣ್ಣ, ಸಿ.ಟಿ.ರವಿ ಅವರಿಗೆ ಪಟ್ಟ ಕಟ್ಟೋದಕ್ಕೆ ಬಿ.ಎಸ್.ಯಡಿಯೂರಪ್ಪ ವಿರೋಧ ವ್ಯಕ್ತಪಡಿಸ ಬಹುದು. ಆದರೆ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ರೆ ಬಿಎಸ್‌ ಯಡಿಯೂರಪ್ಪ ಬಣ ಕೂಡ ಸೈಲೆಂಟ್‌ ಆಗಬಹುದು. ಈ ಹಿಂದೆ ಕರಾವಳಿ ಭಾಗದ ಡಿ.ವಿ.ಸದಾನಂದ ಗೌಡ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇದೀಗ ಕರಾವಳಿಯ ಮತ್ತೋರ್ವ ಪ್ರಭಾವಿ ನಾಯಕನಿಗೆ ಮಹತ್ವದ ಹುದ್ದೆ ಹೆಗಲೇರುವ ಸಾಧ್ಯತೆಯಿದೆ.

Amith Sha visit Bangalore, Karnataka Next BJP State President Karkala MLA V Sunil Kumar

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories