ಮೊಟ್ಟೆಯ ದರದಲ್ಲಿ ಸಾರ್ವಕಾಲಿಕ ಏರಿಕೆ : ಗ್ರಾಹಕರಿಗೆ ಆಘಾತ
ದಿನದಿಂದ ದಿನಕ್ಕೆ ದಿನಬಳಕೆಯ ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ಇದೀಗ ಈ ಸಾಲಿಗೆ ಮೊಟ್ಟೆ ಅಗ್ರಗಣ್ಯ ಸ್ಥಾನ ಪಡೆದಿದೆ. ಪ್ರಸ್ತುತ ರಾಜ್ಯದಲ್ಲಿ ಮೊಟ್ಟೆ ದರವು ಬರೋಬ್ಬರಿ 8 ರೂಪಾಯಿ ಆಗಿದೆ. ರಖಂ ಬೆಲೆಯಲ್ಲಿ ಒಂದು ಮೊಟ್ಟೆಯು 7.20 ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.
ಸರಿಯಾಗಿ ಒಂದು ವಾರದ ಹಿಂದೆ ಒಂದು ಮೊಟ್ಟೆಯ ರಖಂ ಬೆಲೆ 6.80 ರೂಪಾಯಿಗಳಾಗಿತ್ತು. ಮಂಗಳವಾರ 7 ರೂಪಾಯಿಗೆ ಏರಿಕೆ ಕಂಡ ಮೊಟ್ಟೆಯ ರಖಂ ದರವು ಇದೀಗ 7.20 ರೂಪಾಯಿಗಳಾಗಿದೆ. ಮೊಟ್ಟೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಈ ಏರಿಕೆ ಕಂಡು ಬಂದಿದೆ ಎನ್ನಲಾಗಿದೆ. ಇಲ್ಲಿಯವರೆಗೆ ಮೊಟ್ಟೆಯ ರಖಂ ದರ 6.90 ರೂಪಾಯಿಗಳವರೆಗೆ ಏರಿಕೆ ಕಂಡಿತ್ತು.
ಇದನ್ನೂ ಓದಿ: Home Rent: ಮನೆ ಬಾಡಿಗೆದಾರರು ಮತ್ತು ಮಾಲೀಕರಿಬ್ಬರಿಗೂ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ!
ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕೇಕ್ಗಳಿಗೆ ಬೇಡಿಕೆ ಹೆಚ್ಚುವ ಕಾರಣ ಮೊಟ್ಟೆಯ ದರ ಏರಿಕೆಯಾಗುತ್ತದೆ. ಇದರ ಜೊತೆಯಲ್ಲಿ ಅಂಗನವಾಡಿ ಹಾಗೂ ಶಾಲೆಗಳಲ್ಲಿಯೂ ಮೊಟ್ಟೆಯ ಬೇಡಿಕೆ ಹೆಚ್ಚಿದೆ. ಇದರ ಜೊತೆಯಲ್ಲಿ ಕೋಳಿಗೆ ತಿನ್ನಲು ನೀಡುವ ಜೋಳದ ದರ ಕೂಡ ಏರಿಕೆ ಕಂಡಿದ್ದು ಇದು ಕೂಡ ಮೊಟ್ಟೆ ದರ ಏರಿಕೆಗೆ ಪ್ರಬಲ ಕಾರಣವಾಗಿದೆ. ಅಲ್ಲದೇ ಮೊಟ್ಟೆಯ ಉತ್ಪಾದನೆ ಕೂಡ ಕಡಿಮೆಯಾಗಿದ್ದು ಮೈಸೂರು ಹಾಗೂ ದಾವಣಗೆರೆಯಿಂದ ಮೊಟ್ಟೆಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ವರ್ತಕರು ಮಾಹಿತಿ ನೀಡಿದ್ದಾರೆ.



