ಹೊನ್ನಾವರ : ಹಾಡುಹಗಲೇ 14.28 ಲಕ್ಷ ಮೌಲ್ಯದ ಸೊತ್ತು ಕಳವು, 24 ಗಂಟೆಯಲ್ಲೇ ಆರೋಪಿ ಅಂದರ್

Honnavar : ಹೊನ್ನಾವರ : ಹಾಡುಹಗಲಲ್ಲೇ ಮನೆಯ ಹಿಂಬಾಗಿಲಿನಿಂದ ನುಗ್ಗಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು 24 ಗಂಟೆಯಲ್ಲಿ ಬಂಧಿಸಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಅಗ್ರಹಾರ ಗ್ರಾಮದ ಮಣ್ಣಗದ್ದೆಯಲ್ಲಿ ಮನೆಯೊಂದರ ಹಿಂಬಾಗಿಲ ಮೂಲಕ ಒಳನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದ. ಬಂಧಿತ ಆರೋಪಿಯನ್ನು ಹಳದೀಪುರ ಈರಪ್ಪನ ಹಿತ್ತಲ ಮೂಲದ, ಪ್ರಸ್ತುತ ಅಗ್ರಹಾರದ ಮಣ್ಣಗದ್ದೆಯಲ್ಲಿ ವಾಸವಿದ್ದ ವಿಶ್ವೇಶ್ವರ ಗಣಪು ಹರಿಕಾಂತ (30 ವರ್ಷ) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಮೀನುಗಾರನಾದ ಈತ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ನವೆಂಬರ್ 20 ರಂದು ಸಂಜೆ 4:15 ರಿಂದ 5:30 ರ ನಡುವಿನ ಅವಧಿಯಲ್ಲಿ ಅಗ್ರಹಾರದ ಮನೆಯೊಂದರ ಹಿಂಬಾಗಿಲ ಮೂಲಕ ಒಳನುಗ್ಗಿದ್ದ ಕಳ್ಳರು, ಬೆಡ್ ರೂಂನ ಕಪಾಟಿನಲ್ಲಿದ್ದ 125 ಗ್ರಾಂ ತೂಕದ ಚಿನ್ನಾಭರಣ ಹಾಗೂ 10,000 ರೂ. ನಗದು ಹಣವನ್ನು ದೋಚಿದ್ದರು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ಪತ್ತೆ ತಂಡವನ್ನು ರಚಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ನವೆಂಬರ್ 21 ರಂದು ಆರೋಪಿ ವಿಶ್ವೇಶ್ವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸತ್ಯಾಂಶ ಬಯಲಿಗೆ ಬಂದಿದೆ.
ಆರೋಪಿಯಿಂದ ಒಟ್ಟು 14,28,000 ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್.ಪಿಗಳಾದ ಜಿ. ಕೃಷ್ಣಮೂರ್ತಿ, ಎಮ್. ಜಗದೀಶ್ ಹಾಗೂ ಭಟ್ಕಳ ಡಿವೈಎಸ್ಪಿ ಮಹೇಶ ಕೆ. ಅವರ ಮಾರ್ಗದರ್ಶನದಲ್ಲಿ, ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ತಂಡದಲ್ಲಿ ಎ.ಎಸ್.ಐ ಗಿರೀಶ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಗಜಾನನ ನಾಯ್ಕ, ವಿಠಲ ಗೌಡ, ಮನೋಜ ಡಿ., ರವಿ ನಾಯ್ಕ ಮತ್ತು ಚಂದ್ರಶೇಖರ ನಾಯ್ಕ ಪಾಲ್ಗೊಂಡಿದ್ದರು. ಆರೋಪಿಯನ್ನು ತ್ವರಿತವಾಗಿ ಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Honnavar House theft accused nabbed within 24 hours Kannada News



