ಹಿಂದೂ ದೇಗುಲದ ಎದುರು ದಫ್ ಪ್ರದರ್ಶನಕ್ಕೆ ಭಾರೀ ವಿರೋಧ : ಕಾರ್ಯಕ್ರಮ ರದ್ದುಗೊಳಿಸಿದ ಆಯೋಜಕರು
ಹಿಂದೂಪರ ಸಂಘಟನೆಗಳಿಂದ ಭಾರೀ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಚನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ದಫ್ ಪ್ರದರ್ಶನವನ್ನು ಕೈ ಬಿಡಲಾಗಿದೆ. ದೇಗುಲದ ಎದುರು ದಫ್ ಪ್ರದರ್ಶನಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಹೇರಿದ ತೀವ್ರ ಒತ್ತಡಕ್ಕೆ ಕಾರ್ಯಕ್ರಮ ಆಯೋಜಕರು ಮಣಿದಿದ್ದಾರೆ.
ಕೆಜಿವಿ ಸುಳ್ಯ ಹಬ್ಬ ಸಮಾಜ ಸಂಘದ ವತಿಯಿಂದ ಸುಳ್ಯ ತಾಲೂಕಿನ ಚನ್ನಕೇಶವ ದೇವಸ್ಥಾನದ ಎದುರು ಡಿಸೆಂಬರ್ 25 ಹಾಗೂ 26ರಂದು ಕೆವಿಜಿ ಸುಳ್ಯ ಹಬ್ಬ – 2025ನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಂಗಳೂರು ಇವರಿಂದ ದಫ್ ಪ್ರದರ್ಶನ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳಲ್ಲಿ ಚನ್ನಕೇಶವ ದೇಗುಲದ ಮುಂಭಾಗದಲ್ಲಿ ದಫ್ ಪ್ರದರ್ಶನದ ಬಗ್ಗೆ ನಮೂದಿಸಲಾಗಿತ್ತು. ಇದು ವಿಎಚ್ಪಿ ಹಾಗೂ ಬಜರಂಗಳದಳ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿತ್ತು.
ಇದನ್ನೂ ಓದಿ: ಬೆಂಗಳೂರಿಗರ ಹೊಸ ವರ್ಷಾಚರಣೆ ಸಂಭ್ರಮದ ಮೇಲೆ ಆರ್ ಸಿಬಿ ದುರಂತ ಕರಿನೆರಳು : ಎಂಜಿರೋಡ್‌ನಲ್ಲಿ ಸೆಬೇಷನ್‌ಗೆ ಬೀಳುತ್ತಾ ಬ್ರೇಕ್!
ಈ ಹಿನ್ನೆಲೆಯಲ್ಲಿ ಆಕ್ರೋಶ ಹೊರ ಹಾಕಿದ ಹಿಂದೂಪರ ಸಂಘಟನೆ ಕಾರ್ಯಕರ್ತರು, ಹಿಂದೂ ದೇವಾಲಯದ ಎದುರು ದಫ್ ಪ್ರದರ್ಶನ ನಡೆಸಿದರೆ , ಮಸೀದಿಯ ಎದುರು ಹನುಮಾನ ಚಾಲೀಸಾ ಆಯೋಜಿಸುವುದಾಗಿ ಎಚ್ಚರಿಕೆ ನೀಡಿದ್ದರು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆ ನಡೆಯಬಾರದು ಎಂದು ಕಾರ್ಯಕ್ರಮ ಆಯೋಜಕರಿಗೆ ತಾಕೀತು ಮಾಡಿದ್ದರು . ಈ ಹಿನ್ನೆಲೆಯಲ್ಲಿ ದಫ್ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ.



