ಪುತ್ತೂರು : ಕೃಷ್ಣ ಜೆ.ರಾವ್​ನಿಂದ ಯುವತಿಗೆ ವಂಚನೆ ಪ್ರಕರಣ : ಸಂಧಾನ ವಿಫಲ, ಕಾನೂನು ಹೋರಾಟಕ್ಕೆ ಸಂತ್ರಸ್ತೆ ನಿರ್ಧಾರ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರ ಶ್ರೀ ಕೃಷ್ಣ ಎಂಬಾತನಿಂದ ಯುವತಿಗೆ ವಂಚನೆ ಪ್ರಕರಣ ಇಂದಿಗೂ ಸುಖಾಂತ್ಯ ಕಂಡಿಲ್ಲ.

ಹಿಂದೂಗಳ ಭದ್ರಕೋಟೆ ಎಂದೇ ಕರೆಯಿಸಿಕೊಳ್ಳುವ ಕರಾವಳಿ ಜಿಲ್ಲೆಯಲ್ಲಿಯೇ ಹಿಂದೂ ಯುವತಿ ನ್ಯಾಯ ಒದಗಿಸಿಕೊಡುವಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ವಿಫಲರಾಗಿದ್ದಾರೆ.

ಕಳೆದ ಮೂರು ತಿಂಗಳಿನಿಂದ ರಾಜಿ ಸಂಧಾನದ ಯತ್ನ ನಡೆದರೂ ಫಲಿತಾಂಶ ಮಾತ್ರ ಶೂನ್ಯ ಎಂಬಂತಾಗಿದೆ.

ಯುವತಿಯನ್ನು ವಂಚಿಸಿ ಜೈಲುಪಾಲಾದ ಜಗನ್ನಿವಾಸನ್​ ಪುತ್ರ ಕೃಷ್ಣ ಜೆ.ರಾವ್​ ಜಾಮೀನು ಪಡೆದು ಹೊರಗೆ ಆರಾಮಾಗಿ ಓಡಾಡಿಕೊಂಡಿದ್ದಾನೆ. ಪುತ್ರ ಮಾಡಿದ ತಪ್ಪಿಗೆ ಬಿಜೆಪಿ ತಂದೆಯನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದೆ.

ಇತ್ತ ಈತನ ಪ್ರೀತಿಯನ್ನು ನಂಬಿ ಮಗುವನ್ನು ಪಡೆದ ಸಂತ್ರಸ್ತೆ ಈತ ಕಾಲೇಜು ಶಿಕ್ಷಣವೂ ಇಲ್ಲದೇ, ಅತ್ತ ಮದುವೆಯೂ ಇಲ್ಲದೇ ಸಂಕಷ್ಟದಲ್ಲಿದ್ದಾಳೆ.

ಆರ್​ಎಸ್​ಎಸ್​ ಮುಖಂಡರ ಕಲ್ಲಡ್ಕ ಪ್ರಭಾಕರ್ ಭಟ್​ ಕೂಡ ಸಂಧಾನಕ್ಕೆ ಯತ್ನಿಸಿದರೂ ಸಹ ಆರೋಪಿಯ ಕುಟುಂಬಸ್ಥರು ಮದುವೆ ಮಾಡಿಕೊಂಡು ಮಗುವನ್ನು ಒಪ್ಪಿಕೊಳ್ಳಲು ಸುತಾರಾಂ ತಯಾರಿಲ್ಲ ಎನ್ನಲಾಗಿದೆ.

ಹೀಗಾಗಿ ಸಂಧಾನ ಸೂತ್ರವನ್ನು ಮೊಟಕುಗೊಳಿಸಲು ನಿರ್ಧರಿಸಿರುವ ಸಂತ್ರಸ್ತೆಯ ಕುಟುಂಬಸ್ಥರು ಇದೀಗ ನ್ಯಾಯಕ್ಕಾಗಿ ಕಾನೂನು ಹೋರಾಟವನ್ನೇ ಆಧರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನು ಈ ವಿಚಾರವಾಗಿ ಸ್ವತಃ ಸಂತ್ರಸ್ತ ಯುವತಿ ಮಾತನಾಡಿದ್ದು. ಆತ ಅರಂಭದಲ್ಲಿ ನನ್ನೊಂದಿಗೆ ಚೆನ್ನಾಗಿಯೇ ಇದ್ದ. ಆತ ಇಷ್ಟು ಬದಲಾಗುತ್ತಾನೆ ಎಂದು ನಾನು ಊಹಿಸಿಯೂ ಇರಲಿಲ್ಲ.

ಆತ ಈ ರೀತಿ ಕ್ರೂರಿ ಆಗಿರಲಿಲ್ಲ. ಇಷ್ಟೆಲ್ಲಾ ಆದಮೇಲೆ ಮದುವೆಯಾಗಿ ಸಂಸಾರ ಮಾಡುತ್ತಾನೆ ಎಂಬ ನಂಬಿಕೆ ನನಗೂ ಇರಲಿಲ್ಲ. ಮದುವೆ ಆದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನಿರೀಕ್ಷಿಸಿದ್ದೆ.

ಏನಾದರಾಗಲಿ ಆತ ಮೊದಲು ನನ್ನನ್ನು ಮದುವೆಯಾಗಲಿ ಎಂದುಕೊಂಡಿದ್ದೆ. ಆದರೆ ಈಗ ಅದಕ್ಕೂ ಒಪ್ಪುತ್ತಿಲ್ಲ. ಹೀಗಾಗಿ ಸಂಧಾನ ಸೂತ್ರ ಕೈಬಿಟ್ಟಿದ್ದೇವೆ. ಮಾಧ್ಯಮಗಳ ಎದುರು ಬಾರದಂತೆ ನನ್ನ ತಾಯಿಗೆ ನಿತ್ಯ ಬೆದರಿಕೆ ಕರೆಗಳು ಬರುತ್ತಿವೆ.

ಆತ ಮದುವೆಯಾಗುತ್ತಾನೆ ಎಂದರೆ ನನಗೆ ಈಗಲೂ ಒಪ್ಪಿಗೆ ಇದೆ. ನನ್ನ ಮಗುವಿಗೆ ಒಬ್ಬ ತಂದೆ, ನನಗೊಂದು ಗಂಡ ಬೇಕು. ನಾನು ಡಿಗ್ರಿ ಮುಗಿಸಿದ್ದೇನೆ. ನನಗೂ ಶಿಕ್ಷಣ ಮುಂದುವರಿಸಬೇಕು, ಉದ್ಯೋಗ ಮಾಡಬೇಕೆಂಬ ಆಸೆಯಿದೆ. ಆದರೆ ಮಗುವಿನಿಂದಾಗಿ, ಈ ಪ್ರಕರಣದಿಂದಾಗಿ ಯಾವುದೂ ಸಾಧ್ಯವಾಗ್ತಿಲ್ಲ ಎಂದು ಹೇಳಿದ್ದಾಳೆ.

ಯುವತಿಯ ತಾಯಿ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಮೂರು ತಿಂಗಳಿನಿಂದ ಸಂಧಾನ ಆಗುತ್ತೆ ಎಂದು ಕಾದಿದ್ದೆವು. ಆದರೆ ಹಣದ ಆಮಿಷ ನೀಡುವ ಅವರು ಮದುವೆಗೆ ಒಪ್ಪುತ್ತಿಲ್ಲ.

ನನ್ನ ಮಗನ ಕೈಗೆ ಬೇಡಿ ಹಾಕಿದಾಗ ಹೊಟ್ಟೆ ಉರಿಯಿತು ಎಂದು ಆತನ ಪೋಷಕರು ಹೇಳ್ತಾರೆ. ನನ್ನ ಮಗಳು ಗರ್ಭಿಣಿಯಾಗಿದ್ದಾಗ ನನ್ನ ಹೊಟ್ಟೆ ಎಷ್ಟು ಉರಿದಿದ್ದರಬಹುದು ? ಅದ್ಯಾಕೆ ಅವರಿಗೆ ಅರ್ಥ ಆಗೋದಿಲ್ಲ ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಉಡುಪಿ : ಓದಿನ ಕಡೆ ಗಮನಕೊಡು ಎಂದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಸಂತ್ರಸ್ತ ಯುವತಿ ಪರ ಹೋರಾಟಕ್ಕೆ ಇಳಿದಿರುವ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ ನಂಜುಂಡಿ, ಕೋರ್ಟ್ ಮೂಲಕ ಶಿಕ್ಷೆಯಾಗಬಾರದು, ಎರಡು ಕುಟುಂಬಗಳು ಒಂದಾಗಬೇಕೆಂದು ಸಂಧಾನ ಮಾಡಿದ್ದೆವು.

ಆದರೆ ಯುವಕನ ಮನೆಯವರ ಡಿಮ್ಯಾಂಡ್​ ವಿಚಿತ್ರವಾಗಿದೆ. ಕಾನೂನಿನ ಮೊರೆ ಹೋಗುವ ತೀರ್ಮಾನ ಮಾಡಿದ್ದೇವೆ. ಹಿಂದುತ್ವದ ಶಕ್ತಿಯಂತಿರುವ ಪುತ್ತೂರಿನಲ್ಲಿ ಬಡ ಹೆಣ್ಣುಮಗಳಿಗೊಂದು ನ್ಯಾಯ ಸಿಕ್ಕಿಲ್ಲ.

ಇದೇ ಬೇರೆ ಧರ್ಮದವರು ಆಗಿದ್ದರೆ ಮಂಗಳೂರು ಹೊತ್ತಿ ಉರಿಯುತ್ತಿತ್ತು. ಆರು ತಿಂಗಳಾದರೂ ಮಗುವಿಗೊಂದು ನಾಮಕರಣವಾಗಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್,ನಳಿನ್ ಕುಮಾರ್ ಕಟೀಲ್,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿ ಎಲ್ಲರೂ ಸಂಧಾನ ನಡೆಸಿದ್ರು.

ಆದರೆ ಈ ಸಂಧಾನದಲ್ಲಿ ನಾವು ಸೋತಿದ್ದೇವೆ. ಇನ್ನೇನಿದ್ರೂ ಕಾನೂನು ಹೋರಾಟ ಎಂದು ಹೇಳಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories