ಬೆಂಗಳೂರು: ʻನನಗೆ ಜೀವನ ಸಾಕಾಗಿದೆʼ- ಪ್ರಿಯಕರನಿಗೆ ಕೊನೆ ಸಂದೇಶ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!

ಮೃತ ಯುವತಿಯನ್ನು ಬೆಂಗಳೂರಿನ ಚಿಕ್ಕಬಾಣವಾರ ಮೂಲದ ತೇಜು (20) ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಸದಾಶಿವನಗರದಲ್ಲಿರುವ ಪ್ರಸಿದ್ಧ ಸ್ಯಾಂಕಿ ಕೆರೆಗೆ ಹಾರಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆ ಸೋಮವಾರ (ಜುಲೈ 6) ರಾತ್ರಿ ನಡೆದಿದ್ದು, ಮೃತ ಯುವತಿಯನ್ನು ಬೆಂಗಳೂರಿನ ಚಿಕ್ಕಬಾಣವಾರ ಮೂಲದ ತೇಜು (20) ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ತೇಜು ಸೋಮವಾರ ರಾತ್ರಿ ಸ್ಯಾಂಕಿ ಕೆರೆ ಬಳಿ ಒಬ್ಬಳೇ ಬಂದಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಕೆ ತನ್ನ ಪ್ರಿಯಕರನಿಗೆ ಮೊಬೈಲ್‌ನಲ್ಲಿ ʻನನಗೆ ಜೀವನ ಸಾಕಾಗಿದೆ, ನಾನು ಸಾಯುತ್ತಿದ್ದೇನೆʼ ಎಂದು ಕೊನೆಯ ಸಂದೇಶ (Message) ಕಳುಹಿಸಿದ್ದಾಳೆ. ಸಂದೇಶ ಕಳುಹಿಸಿದ ತಕ್ಷಣವೇ ತನ್ನ ಮೊಬೈಲ್ ಫೋನ್‌ ಅನ್ನು ಸ್ವಿಚ್‌ಆಫ್ ಮಾಡಿಕೊಂಡಿದ್ದಾಳೆ.

Student-Suicide-Teju

ಮೆಸೇಜ್ ನೋಡಿ ಆತಂಕಗೊಂಡ ಪ್ರಿಯಕರ, ತಕ್ಷಣವೇ ಆ ಸಂದೇಶವನ್ನು ಯುವತಿಯ ತಾಯಿಗೆ ಫಾರ್ವರ್ಡ್ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ ಪೋಷಕರು ಆಕೆಯನ್ನು ಹುಡುಕುವಷ್ಟರಲ್ಲೇ ತೇಜು ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.

ಸೋಮವಾರ ರಾತ್ರಿ ಯಾರೂ ಇಲ್ಲದ ಸಂದರ್ಭ ನೋಡಿ ಕೆರೆಗೆ ಹಾರಿದ್ದ ಯುವತಿಯ ಶವ ಮಂಗಳವಾರ (ಜುಲೈ 7) ಬೆಳಗ್ಗೆ ನೀರಿನಲ್ಲಿ ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಸದಾಶಿವನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸದಾಶಿವನಗರ ಠಾಣೆಯ ಪೊಲೀಸರು ಮತ್ತು ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನು ಕೆರೆಯಿಂದ ಹೊರಗೆ ತೆಗೆದಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಯುವತಿಯ ಪೋಷಕರಿಗೆ ಮಾಹಿತಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.