ಮಂಗಳೂರು ಮೂಲದ ಉದ್ಯಮಿಯಿಂದ ಹೊಸ ವಿಮಾನಯಾನ ಸಂಸ್ಥೆ ‘ಸ್ಕ್ಯಾನ್ಜೆಟ್’: ಮೈಸೂರಿನಿಂದ ಹಾರಾಟ ಆರಂಭ
Skan Jet New Airlines:: ಮೈಸೂರು/ಮಂಗಳೂರು: ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೈಸೂರು ಮೂಲದ ‘ಸ್ಕ್ಯಾನ್ರೇ ಟೆಕ್ನಾಲಜೀಸ್’ (Skanray Technologies) ಸಂಸ್ಥೆಯು ಈಗ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸುವುದಾಗಿ ಘೋಷಿಸಿದೆ. ಮಂಗಳೂರು ಮೂಲದವರಾದ ಉದ್ಯಮಿ ಮತ್ತು ಸ್ಕ್ಯಾನ್ರೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್ ಆಳ್ವ ಅವರು ‘ಸ್ಕ್ಯಾನ್ಜೆಟ್ ಏವಿಯೇಷನ್’ (Skanjet Aviation) ಎಂಬ ಹೊಸ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸುತ್ತಿದ್ದಾರೆ.
ಏಪ್ರಿಲ್ನಲ್ಲಿ ಕಾರ್ಯಾಚರಣೆ ಆರಂಭದ ಗುರಿ:
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ನಾಗರಿಕ ವಿಮಾನಯಾನ ಸಚಿವಾಲಯದಿಂದ ಅಗತ್ಯ ಅನುಮತಿಗಳು ದೊರೆತ ನಂತರ, ಮುಂಬರುವ ಏಪ್ರಿಲ್ ತಿಂಗಳಿನಿಂದ ಮೈಸೂರಿನಿಂದ ವಿಮಾನಯಾನ ಸೇವೆ ಆರಂಭಿಸಲು ಸಂಸ್ಥೆ ಸಜ್ಜಾಗಿದೆ. ಕೇಂದ್ರ ಸರ್ಕಾರದ ‘ಉಡಾನ್’ (UDAN) ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಈ ಸೇವೆ ಲಭ್ಯವಾಗಲಿದೆ.
ಪ್ರಮುಖ ನಗರಗಳಿಗೆ ಸಂಪರ್ಕ:
ಆರಂಭಿಕ ಹಂತದಲ್ಲಿ ಮೂರು ATR 72 ವಿಮಾನಗಳ ಮೂಲಕ ಮೈಸೂರಿನಿಂದ ಕೆಳಗಿನ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದೆ:
- ಮೈಸೂರು – ಚೆನ್ನೈ
- ಮೈಸೂರು – ಹೈದರಾಬಾದ್
- ಮೈಸೂರು – ಮಂಗಳೂರು ಮಾರ್ಗವಾಗಿ ಕೊಚ್ಚಿ
- ಮೈಸೂರು – ಹುಬ್ಬಳ್ಳಿ ಮಾರ್ಗವಾಗಿ ಮುಂಬೈ
- ಮೈಸೂರು – ಬೆಂಗಳೂರು ಮಾರ್ಗವಾಗಿ ಗೋವಾ
- ಮೈಸೂರು – ವಿಶಾಖಪಟ್ಟಣ ಮಾರ್ಗವಾಗಿ ತಿರುಪತಿ
ಮುಂದಿನ ಒಂದು ವರ್ಷದಲ್ಲಿ ವಿಮಾನಗಳ ಸಂಖ್ಯೆಯನ್ನು ಆರಕ್ಕೆ ಏರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ಮೈಸೂರಿನ ಬೆಳವಣಿಗೆಗೆ ಪೂರಕ:
ಈ ಕುರಿತು ಮಾತನಾಡಿದ ವಿಶ್ವಪ್ರಸಾದ್ ಆಳ್ವ ಅವರು, “ಬೆಂಗಳೂರಿನಂತೆ ಮೈಸೂರು ಅವೈಜ್ಞಾನಿಕವಾಗಿ ಬೆಳೆಯಬಾರದು. ಮೈಸೂರನ್ನು ಅಂತರಾಷ್ಟ್ರೀಯ ಎಕ್ಸ್ಪೋ ತಾಣವಾಗಿ, ಆರೋಗ್ಯ ಮತ್ತು ಶಿಕ್ಷಣದ ಕೇಂದ್ರವಾಗಿ ಹಾಗೂ ಕೃಷಿ ತಂತ್ರಜ್ಞಾನದ ನೆಲೆಯಾಗಿ ಅಭಿವೃದ್ಧಿಪಡಿಸುವ ಅವಕಾಶವಿದೆ. ಉತ್ತಮ ವಿಮಾನ ಸಂಪರ್ಕದಿಂದ ಕೊಡಗು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೂ ಅನುಕೂಲವಾಗಲಿದ್ದು, ಪ್ರವಾಸೋದ್ಯಮ ಮತ್ತು ವ್ಯಾಪಾರ ವಹಿವಾಟು ವೃದ್ಧಿಸಲಿದೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಳಪೆ ನೆಟ್ವರ್ಕ್ನಿಂದ ಬೇಸತ್ತು ಹೋಗಿದ್ದೀರಾ? ಹೊಸ ವರ್ಷಕ್ಕೆ ಬಿಎಸ್ಎನ್ಎಲ್ನಿಂದ ಹೊಸ ಸೇವೆ ಪ್ರಾರಂಭ
150-200 ಕೋಟಿ ರೂ. ಹೂಡಿಕೆ: ಈ ಹೊಸ ಸಾಹಸಕ್ಕೆ ಸುಮಾರು 150 ರಿಂದ 200 ಕೋಟಿ ರೂಪಾಯಿಗಳ ಆರಂಭಿಕ ಹೂಡಿಕೆ ಮಾಡಲಾಗುತ್ತಿದೆ. ಸರ್ಕಾರಗಳ ನೀತಿಗಳು ಪೂರಕವಾಗಿದ್ದರೆ ಎರಡು ವರ್ಷಗಳಲ್ಲಿ ಈ ಸಂಸ್ಥೆಯು ಲಾಭದಾಯಕ ಹಂತಕ್ಕೆ ತಲುಪಲಿದೆ ಎಂದು ಆಳ್ವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ತಂತ್ರಜ್ಞಾನದಂತೆ ವಿಮಾನಯಾನ ಕ್ಷೇತ್ರವೂ ಸವಾಲಿನದ್ದಾಗಿದ್ದರೂ, ಸುಸ್ಥಿರ ಬೆಳವಣಿಗೆಯ ಗುರಿಯೊಂದಿಗೆ ಮುನ್ನಡೆಯುವುದಾಗಿ ಅವರು ಹೇಳಿದ್ದಾರೆ.
ಈಗಾಗಲೇ ಜಾಗತಿಕ ಮಟ್ಟದಲ್ಲಿ ಮೆಡ್ಟೆಕ್ (MedTech) ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕರಾವಳಿ ಮೂಲದ ಉದ್ಯಮಿ ವಿಶ್ವಪ್ರಸಾದ್ ಆಳ್ವ ಅವರ ಈ ಹೊಸ ಹೆಜ್ಜೆ ಕರ್ನಾಟಕದ ಪ್ರಾದೇಶಿಕ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.



