ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ದಾವಣಗೆರೆ ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೋಲ್
BJP Leader Chandrashekhar Sankol suicide: ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಪ್ರಭಾವಿ ಬಿಜೆಪಿ ಮುಖಂಡರಾಗಿದ್ದ ಚಂದ್ರಶೇಖರ್ ಸಂಕೋಲ್ (55) ಅವರು ಭಾನುವಾರ ತಮ್ಮದೇ ಜಮೀನಿನಲ್ಲಿ ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿರುವ ಈ ಘಟನೆಯು ಕೌಟುಂಬಿಕ ಕಲಹ ಮತ್ತು ಸಾಲದ ಸುಳಿಗೆ ಬಲಿಯಾಗಿದೆ ಎಂದು ಶಂಕಿಸಲಾಗಿದೆ.
ದಾವಣಗೆರೆ ತಾಲೂಕಿನ ನಾಗನೂರು ಗ್ರಾಮದ ಹೊರವಲಯದಲ್ಲಿರುವ ತಮ್ಮ ಅಡಿಕೆ ತೋಟಕ್ಕೆ ಬಂದ ಚಂದ್ರಶೇಖರ್, ಅಲ್ಲಿ ತಮ್ಮ ಕಾರಿನೊಳಗೆ ಮೂರ್ನಾಲ್ಕು ಟಯರ್‌ಗಳನ್ನು ಇಟ್ಟುಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಪೆಟ್ರೋಲ್ ಮತ್ತು ಟಯರ್ ಎರಡೂ ತೀವ್ರವಾಗಿ ಉರಿದ ಪರಿಣಾಮ ಚಂದ್ರಶೇಖರ್ ಅವರ ದೇಹ ಮತ್ತು ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕೇವಲ ಅಸ್ಥಿಪಂಜರದಂತಾಗಿದೆ.
ಆತ್ಮಹತ್ಯೆಗೆ ಮುನ್ನ ಮಕ್ಕಳ ಹತ್ಯೆ ಯತ್ನ:
ದಾರುಣವೆಂದರೆ, ಚಂದ್ರಶೇಖರ್ ಅವರು ಈ ಕೃತ್ಯ ಎಸಗುವ ಮುನ್ನ ಅವರ ಮನೆಯಲ್ಲಿ ಗಂಭೀರ ಘಟನೆಯೊಂದು ನಡೆದಿತ್ತು. ಸಾಲದ ವಿಚಾರವಾಗಿ ನಿನ್ನೆ ಮನೆಯಲ್ಲಿ ದೊಡ್ಡ ಮಟ್ಟದ ಜಗಳ ನಡೆದಿದ್ದು, ಇದರಿಂದ ಮನನೊಂದಿದ್ದ ಇವರ ಮಕ್ಕಳಾದ ಮಗಳು ಪವಿತ್ರಾ (23) ಹಾಗೂ ಮಗ ನರೇಶ್ (20) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅಕ್ಕಪಕ್ಕದವರು ಅವರನ್ನು ರಕ್ಷಿಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳ ಈ ದುಡುಕಿನ ನಿರ್ಧಾರದಿಂದ ಕಂಗೆಟ್ಟಿದ್ದ ಚಂದ್ರಶೇಖರ್, ತೋಟಕ್ಕೆ ತೆರಳಿ ಈ ತೀವ್ರ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚಿಂತೆ ಬೇಡ, ನಾನು ನಿನ್ನ ಹಿಂದಿದ್ದೇನೆ; ರಕ್ಷಿತ್ ಶೆಟ್ಟಿಗೆ ಸಿಕ್ತು ದೈವದ ಅಭಯ
ಜಿಲ್ಲೆಯ ಪ್ರಮುಖ ಮುಖಂಡ:
ಶಾಮನೂರು ಗ್ರಾಮದಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ವ್ಯವಹಾರ ನಡೆಸುತ್ತಿದ್ದ ಚಂದ್ರಶೇಖರ್ ಸಂಕೋಲ್, ಉದ್ಯಮಿಯಾಗಿಯೂ ಚಿರಪರಿಚಿತರಾಗಿದ್ದರು. ರಾಜಕೀಯವಾಗಿ ಸಕ್ರಿಯರಾಗಿದ್ದ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಇವರು ಅಡಿಕೆ ತೋಟ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿದ್ದರೂ, ದೊಡ್ಡ ಮಟ್ಟದ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಭೇಟಿ ನೀಡಿ ಕಣ್ಣೀರಿಟ್ಟರು. ಹದಡಿ ಠಾಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರ ತಂಡ (ಸೊಕೊ ಟೀಮ್) ಸ್ಥಳ ಪರಿಶೀಲನೆ ನಡೆಸಿದ್ದು, ಘಟನೆಯ ಸ್ಥಳದಲ್ಲಿ ಮೃತದೇಹದ ಪರೀಕ್ಷೆ ನಡೆಸಲಾಗಿದೆ. ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



