ಶಿಕ್ಷೆ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಗೆ, ಖರ್ಚು ರವಿಕಾಂತೇಗೌಡರಿಗೆ! ನ್ಯಾಯಾಲಯದ ಆದೇಶಕ್ಕೆ ಕಾರಣವೇನು?
Power TV MD Rakesh Shetty: ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರ ವಿರುದ್ಧ ಹೂಡಿದ್ದ ಸಿವಿಲ್ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಕಾರಣಕ್ಕೆ ರಾಕೇಶ್ ಶೆಟ್ಟಿ ಅವರಿಗೆ 3 ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ರಾಕೇಶ್ ಶೆಟ್ಟಿ ಅವರ ಜೈಲು ಭತ್ಯೆಯನ್ನು (Subsistence Allowance) ದೂರುದಾರರಾದ ರವಿಕಾಂತೇಗೌಡ ಅವರೇ ಭರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದಕ್ಕೆ ಕಾರಣವೇನು ಎಂಬುದರ ವಿವರ ಇಲ್ಲಿದೆ.
ಜೈಲು ಭತ್ಯೆ ಪಾವತಿಸಲು ಕಾರಣವೇನು?
ನಮ್ಮ ದೇಶದ ಕಾನೂನಿನಲ್ಲಿ ಕ್ರಿಮಿನಲ್ ಜೈಲು ಮತ್ತು ಸಿವಿಲ್ ಜೈಲು ಎಂಬ ವ್ಯತ್ಯಾಸವಿದೆ. ರಾಕೇಶ್ ಶೆಟ್ಟಿ ಅವರಿಗೆ ವಿಧಿಸಿರುವುದು ‘ಸಿವಿಲ್ ಜೈಲು’ ಶಿಕ್ಷೆ. ಈ ಬಗ್ಗೆ ಕಾನೂನಿನ ನಿಯಮಗಳು ಹೀಗಿವೆ:
ಸಿವಿಲ್ ಪ್ರಕ್ರಿಯಾ ಸಂಹಿತೆ (CPC):
ಸಿವಿಲ್ ಪ್ರಕರಣಗಳಲ್ಲಿ (ಉದಾಹರಣೆಗೆ ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘನೆ) ವ್ಯಕ್ತಿಯನ್ನು ಜೈಲಿಗೆ ಕಳುಹಿಸಿದಾಗ, ಆ ವ್ಯಕ್ತಿಯ ಜೈಲಿನ ಖರ್ಚು-ವೆಚ್ಚಗಳನ್ನು (ಊಟ, ವಸತಿ ಇತ್ಯಾದಿ) ದೂರು ನೀಡಿದವರೇ ಭರಿಸಬೇಕು ಎಂದು ಸಿವಿಲ್ ಪ್ರಕ್ರಿಯಾ ಸಂಹಿತೆಯ ನಿಯಮಗಳು ಹೇಳುತ್ತವೆ.
ರಾಕೇಶ್ ಶೆಟ್ಟಿ ಜೈಲು ಶಿಕ್ಷೆ: ‘ಸೌಜನ್ಯ ಶಾಪ’ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ
ನಿರ್ವಹಣಾ ಭತ್ಯೆ (Subsistence Allowance):
ನ್ಯಾಯಾಲಯವು ವ್ಯಕ್ತಿಯನ್ನು ಸಿವಿಲ್ ಜೈಲಿಗೆ ಕಳುಹಿಸುವಂತೆ ಆದೇಶಿಸಿದಾಗ, ಆ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸಲು ತಗಲುವ ದಿನನಿತ್ಯದ ವೆಚ್ಚವನ್ನು ದೂರುದಾರರು ಸರ್ಕಾರಕ್ಕೆ ಠೇವಣಿ ಮಾಡಬೇಕಾಗುತ್ತದೆ.
ಈ ಪ್ರಕರಣದ ವಿವರ:
ರವಿಕಾಂತೇಗೌಡ ಅವರು ರಾಕೇಶ್ ಶೆಟ್ಟಿ ಅವರ ವಿರುದ್ಧ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತಂದಿದ್ದರು. ಆದರೆ ಆ ತಡೆಯಾಜ್ಞೆಯನ್ನು ಉಲ್ಲಂಘಿಸಿ ರಾಕೇಶ್ ಶೆಟ್ಟಿ ಅವರು ಸುದ್ದಿ ಪ್ರಸಾರ ಮಾಡಿದ್ದರಿಂದ ಇದು ನ್ಯಾಯಾಂಗ ನಿಂದನೆಯಾಯಿತು. ಹೀಗಾಗಿ ಅವರನ್ನು ಸಿವಿಲ್ ಜೈಲಿಗೆ ಕಳುಹಿಸಲಾಗಿದೆ. ನಿಯಮದಂತೆ, ದೂರುದಾರರಾದ ರವಿಕಾಂತೇಗೌಡ ಅವರು ನಿಗದಿಪಡಿಸಿದ ಭತ್ಯೆಯನ್ನು ಜನವರಿ 31, 2026ರೊಳಗೆ ಜಮಾ ಮಾಡಬೇಕೆಂದು ನ್ಯಾಯಾಧೀಶರಾದ ಅಬ್ದುಲ್ ಸಲೀಂ ಅವರು ಆದೇಶಿಸಿದ್ದಾರೆ.



