ರಾಮ ಮಂದಿರ ದೇಣಿಗೆ ಹಗರಣದಲ್ಲಿ ಹೊಸ ತಿರುವು : ಆರೋಪಿ ನಿವಾಸದಲ್ಲೇ ಪತ್ತೆಯಾಗಿತ್ತು ದುಡ್ಡಿನ ಚೀಲ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಅಯೋಧ್ಯೆಯ ರಾಮ ಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ದುರುಪಯೋಗ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸತ್ಯಗಳು ಹೊರಬರುತ್ತಿವೆ.

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಅಯೋಧ್ಯೆಯ ರಾಮ ಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ದುರುಪಯೋಗ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಈ ಮಹಾ ಹಗರಣವು ಅಧಿಕೃತವಾಗಿ ಸಾರ್ವಜನಿಕವಾಗಿ ಬಯಲಾಗುವುದಕ್ಕಿಂತ ಮೊದಲೇ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖರಿಗೆ ಅಕ್ರಮದ ಸಂಪೂರ್ಣ ಮಾಹಿತಿ ಇತ್ತು ಎಂಬ ಗಂಭೀರ ವಿಚಾರ ಈಗ ತನಿಖೆಯಿಂದ ಬಹಿರಂಗವಾಗಿದೆ.

ಮೂಲಗಳ ಪ್ರಕಾರ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ನೇರ ಸೂಚನೆ ಮೇರೆಗೆ, ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಅವಿನಾಶ್ ಶುಕ್ಲಾ ನಿವಾಸದ ಮೇಲೆ ಜೂನ್ 5 ರಂದೇ ಅಧಿಕಾರಿಗಳು ಪೊಲೀಸರೊಂದಿಗೆ ತೆರಳಿ ಅನೌಪಚಾರಿಕ ಶೋಧ ನಡೆಸಿದ್ದರು. ಈ ವೇಳೆ ಪೊಲೀಸರ ಸಮ್ಮುಖದಲ್ಲೇ ನಗದು ತುಂಬಿದ್ದ ಕಪ್ಪು ಚೀಲ ಪತ್ತೆಯಾಗಿದ್ದರೂ, ಟ್ರಸ್ಟ್ ಅಧಿಕಾರಿಗಳು ಯಾವುದೇ ಅಧಿಕೃತ ದೂರು ಅಥವಾ ಎಫ್‌ಐಆರ್ ದಾಖಲಿಸದೆ ಇರುವುದು ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಕ್ಕೆ ಪೂರಕವಾಗಿ ಆರೋಪಿಯನ್ನು ಹಣದ ಚೀಲದೊಂದಿಗೆ ಪೊಲೀಸರು ವಾಹನದ ಕಡೆಗೆ ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಈಗ ಲೀಕ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ಗಂಭೀರತೆ ಅರಿತು ರಚನೆಯಾಗಿರುವ ವಿಶೇಷ ತನಿಖಾ ತಂಡವು ಈಗಾಗಲೇ ದೇಗುಲದ ಕಾಣಿಕೆ ನಿರ್ವಹಣೆ, ಸಿಸಿಟಿವಿ ಮೇಲ್ವಿಚಾರಣೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಖಾಸಗಿ ಸಂಸ್ಥೆಯ ಮೂಲಕ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿರುವುದರಲ್ಲಾದ ಭಾರಿ ಲೋಪಗಳನ್ನು ಪತ್ತೆಹಚ್ಚಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಎಂಟು ಆರೋಪಿಗಳ ನಿವಾಸಗಳ ಮೇಲೆ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಪೊಲೀಸರು ಭಾನುವಾರ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್‌ಐಟಿ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಕೆ ಮಾಡಿದೆ.

Also Read: ಕರ್ನಾಟಕದ ಅಡಿಕೆಗೆ ಕಲಬೆರಕೆ ಆತಂಕ : ಅಡಿಕೆ ಲಾರಿಗಳಿಗೆ ಮಹಾರಾಷ್ಟ್ರದಲ್ಲಿ ತಡೆ

ಇದೇ ವೇಳೆ, ಕೋಟ್ಯಂತರ ರೂಪಾಯಿ ದೇಣಿಗೆಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರ ವಾಗ್ದಾಳಿ ನಡೆಸಿದ್ದು, ಹಗರಣದ ಬಗ್ಗೆ ನ್ಯಾಯಾಲಯದ ಸ್ವಯಂಪ್ರೇರಿತ ಉಸ್ತುವಾರಿಯಲ್ಲಿ ಪಾರದರ್ಶಕ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತ ವಿಶ್ವ ಹಿಂದೂ ಪರಿಷತ್ , ವಿರೋಧ ಪಕ್ಷಗಳು ಮುಂಬರುವ ಚುನಾವಣೆಯ ಲಾಭಕ್ಕಾಗಿ ಈ ಸೂಕ್ಷ್ಮ ವಿಷಯವನ್ನು ರಾಜಕೀಕರಣಗೊಳಿಸುತ್ತಿವೆ ಎಂದು ತಿರುಗೇಟು ನೀಡಿದೆ.

New twist in Ram temple donation scam Bag of money found at accused residence

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories