ಲವ್ ಯೂ ಬಂಗಾರಿ, ನಿನ್ನ ನೋಡಿದ್ಮೇಲೆ ನಿದ್ರೆ ಬರ್ತಿಲ್ಲ; ರಾಮಚಂದ್ರ ರಾವ್ ರೊಮ್ಯಾಂಟಿಕ್ ಆಡಿಯೋ ವೈರಲ್!
DGP Ramachandra Rao romantic audio viral: ಬೆಂಗಳೂರು: ಲೈಂಗಿಕ ಹಗರಣದ ಸುಳಿಯಲ್ಲಿ ಸಿಲುಕಿರುವ ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ವಿವಾದ ಈಗ ಮತ್ತಷ್ಟು ಹದಗೆಟ್ಟಿದೆ. ಈಗಾಗಲೇ ವೀಡಿಯೋ ವೈರಲ್ ಆಗಿ ಮುಜುಗರ ಅನುಭವಿಸುತ್ತಿದ್ದ ಅಧಿಕಾರಿಗೆ, ಈಗ ಮಹಿಳೆಯೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾದ ‘ಅತಿರಸದ ಸಂಭಾಷಣೆ’ಯ ಆಡಿಯೊ ಭಾರೀ ಸಂಕಷ್ಟ ತಂದೊಡ್ಡಿದೆ.
ರೊಮ್ಯಾಂಟಿಕ್ ಸಂಭಾಷಣೆ ವೈರಲ್!
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಆಡಿಯೊದಲ್ಲಿ, “ಲವ್ ಯೂ ಬಂಗಾರಿ”, “ನಿನ್ನ ನೋಡಿದ ಮೇಲೆ ನಿದ್ರೆ ಬರುತ್ತಿಲ್ಲ”, “ನಿನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಚಿನ್ನ” ಎಂಬಂತಹ ಅತಿರೇಕದ ಮತ್ತು ಶೃಂಗಾರಭರಿತ ಪದಗಳನ್ನು ಬಳಸಲಾಗಿದೆ.
‘ಎಐ ತಂತ್ರಜ್ಞಾನ’ದ ವಾದಕ್ಕೆ ಹಿನ್ನಡೆ?
ಈ ಮೊದಲು ವೀಡಿಯೋ ವೈರಲ್ ಆದಾಗ ಪ್ರತಿಕ್ರಿಯಿಸಿದ್ದ ರಾಮಚಂದ್ರ ರಾವ್ ಅವರು, “ಇದು ನನ್ನ ತೇಜೋವಧೆ ಮಾಡಲು ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ವೀಡಿಯೋ” ಎಂದು ಸಮರ್ಥಿಸಿಕೊಂಡಿದ್ದರು. ಆದರೆ, ಈಗ ವೈರಲ್ ಆಗಿರುವ ಸುದೀರ್ಘ ಆಡಿಯೊ ಸಂಭಾಷಣೆಯು ಅವರ ವಾದದ ಮೇಲೆ ಅನುಮಾನದ ನೆರಳು ಮೂಡಿಸಿದೆ.
ಸಚಿವರು ಮತ್ತು ಸಿಎಂ ಕಠಿಣ ನಿಲುವು:
ಗೃಹ ಸಚಿವರ ಭೇಟಿಗೆ ನಿರಾಕರಣೆ: ಈ ಹಗರಣದ ಬಗ್ಗೆ ಸ್ಪಷ್ಟನೆ ನೀಡಲು ರಾಮಚಂದ್ರ ರಾವ್ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರ ಮನೆಗೆ ತೆರಳಿದ್ದರಾದರೂ, ಸಚಿವರು ಅವರನ್ನು ಭೇಟಿಯಾಗಲು ನಿರಾಕರಿಸುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ.
ಸಿಎಂ ಸೂಚನೆ: ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹಿರಿಯ ಅಧಿಕಾರಿಯೇ ಆದರೂ ತಪ್ಪು ಸಾಬೀತಾದರೆ ಶಿಸ್ತು ಕ್ರಮ ಅನಿವಾರ್ಯ” ಎಂದು ಎಚ್ಚರಿಸಿ, ಪ್ರಾಥಮಿಕ ತನಿಖೆಗೆ ಆದೇಶಿಸಿದ್ದಾರೆ.
ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ 8 ವರ್ಷಗಳ ಹಿಂದಿನ ಹಳೆ ದೃಶ್ಯವೇ?
ದಿನೇಶ್ ಕಲ್ಲಳ್ಳಿ ದೂರು:
ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಳ್ಳಿ ಅವರು ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದು, “ಸಮವಸ್ತ್ರದಲ್ಲಿರುವ ಅಧಿಕಾರಿಯೊಬ್ಬರು ಸರ್ಕಾರಿ ಕಚೇರಿಯಲ್ಲೇ ಇಂತಹ ಅಸಭ್ಯ ವರ್ತನೆ ತೋರಿರುವುದು ಇಲಾಖೆಗೆ ಅವಮಾನ” ಎಂದು ದೂರಿದ್ದಾರೆ. ಅಲ್ಲದೆ, ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ನಿವೃತ್ತಿಯ ಹೊಸ್ತಿಲಲ್ಲಿ ಕಪ್ಪುಚುಕ್ಕೆ:
ಬರುವ ಮೇ 31ಕ್ಕೆ ನಿವೃತ್ತಿಯಾಗಲಿರುವ ರಾಮಚಂದ್ರ ರಾವ್ ಅವರು ಸದ್ಯ 10 ದಿನಗಳ ರಜೆಯ ಮೇಲೆ ತೆರಳಿದ್ದಾರೆ. ಸುದೀರ್ಘ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ಅಂಚಿನಲ್ಲಿರುವಾಗ ಇಂತಹ ಲೈಂಗಿಕ ಹಗರಣಗಳು ಹೊರಬರುತ್ತಿರುವುದು ಇಡೀ ಇಲಾಖೆಯ ಘನತೆಗೆ ಧಕ್ಕೆ ತಂದಿದೆ.



