8ನೇ ವೇತನ ಆಯೋಗ: ವೇತನ ಹೆಚ್ಚಳ, ಬಾಕಿ ಹಣ ಯಾವಾಗ ಸಿಗಲಿದೆ? ಇಲ್ಲಿದೆ ಸಂಪೂರ್ಣ ವಿವರ
8th Pay Commission salary hike: ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಬಹುನಿರೀಕ್ಷೆಯಿಂದ ಕಾಯುತ್ತಿರುವ 8ನೇ ವೇತನ ಆಯೋಗದ ಪ್ರಕ್ರಿಯೆಗಳು ಈಗಾಗಲೇ ಚುರುಕುಗೊಂಡಿವೆ. ನವೆಂಬರ್ 2025 ರಲ್ಲಿ ಆಯೋಗದ ರಚನೆಗೆ ಅನುಮೋದನೆ ಸಿಕ್ಕಿದ್ದು, ಈಗ ನೌಕರರ ಮನದಲ್ಲಿರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಜಾರಿಯಾಗುವುದು ಯಾವಾಗ?
ಕೇಂದ್ರ ಸರ್ಕಾರವು ಇನ್ನೂ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ. ಆದರೂ, ಹಿಂದಿನ ಸಂಪ್ರದಾಯದಂತೆ ಜನವರಿ 1, 2026 ರಿಂದ ಹೊಸ ವೇತನ ಶ್ರೇಣಿ ಜಾರಿಗೆ ಬರುವ ಸಾಧ್ಯತೆಯಿದೆ. ಏಕೆಂದರೆ 7ನೇ ವೇತನ ಆಯೋಗದ ಅವಧಿಯು ಡಿಸೆಂಬರ್ 31, 2025ಕ್ಕೆ ಮುಕ್ತಾಯಗೊಳ್ಳಲಿದೆ.
ಬಾಕಿ ಹಣ (Arrears) ಯಾವಾಗ ಸಿಗಬಹುದು?
ಆಯೋಗವು ತನ್ನ ವರದಿಯನ್ನು ಸಲ್ಲಿಸಲು 18 ತಿಂಗಳ ಕಾಲಾವಕಾಶ ಪಡೆದಿದೆ. ವರದಿ ಸಲ್ಲಿಕೆಯಾದ ನಂತರ ಸರ್ಕಾರ ಅದನ್ನು ಪರಿಶೀಲಿಸಿ ಜಾರಿಗೆ ತರಲು ಇನ್ನು ಸ್ವಲ್ಪ ಸಮಯ ಬೇಕಾಗಬಹುದು. ಆದರೆ, ವರದಿ ಯಾವಾಗ ಜಾರಿಯಾದರೂ, ಬಾಕಿ ಹಣವನ್ನು (Arrears) ಮಾತ್ರ ಜನವರಿ 1, 2026 ರಿಂದಲೇ ಲೆಕ್ಕಹಾಕಿ ನೀಡಲಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವೇತನದಲ್ಲಿ ಎಷ್ಟು ಹೆಚ್ಚಳ ನಿರೀಕ್ಷಿಸಬಹುದು?
ತಜ್ಞರ ಅಂದಾಜಿನ ಪ್ರಕಾರ, 8ನೇ ವೇತನ ಆಯೋಗದಲ್ಲಿ ನೌಕರರ ವೇತನವು ಶೇ. 20 ರಿಂದ 35 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಫಿಟ್‌ಮೆಂಟ್ ಫ್ಯಾಕ್ಟರ್ (Fitment Factor): ಇದು 2.4 ರಿಂದ 3.0 ರ ವ್ಯಾಪ್ತಿಯಲ್ಲಿರುವ ಸಾಧ್ಯತೆಯಿದೆ. (ಗಮನಿಸಿ: ಇವು ಕೇವಲ ಅಂದಾಜುಗಳಾಗಿದ್ದು, ಅಂತಿಮ ನಿರ್ಧಾರ ಹಣದುಬ್ಬರ ಮತ್ತು ಸರ್ಕಾರದ ಆರ್ಥಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ.)
ಕರ್ನಾಟಕಕ್ಕಿಂತ ಉತ್ತರ ಪ್ರದೇಶವೇ ಹೆಚ್ಚು ಶ್ರೀಮಂತ! ದೇಶದ ಟಾಪ್ 10 ಶ್ರೀಮಂತ ರಾಜ್ಯಗಳ ಪಟ್ಟಿ ಇಲ್ಲಿದೆ
ಅಧಿಕೃತ ವೆಬ್‌ಸೈಟ್ ಲಾಂಚ್ ಮತ್ತು ಸಲಹೆಗಳ ಆಹ್ವಾನ
ಸರ್ಕಾರವು ಈಗಾಗಲೇ 8ನೇ ವೇತನ ಆಯೋಗದ ಅಧಿಕೃತ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ವಿವಿಧ ಇಲಾಖೆಗಳು ಮತ್ತು ನೌಕರರ ಸಂಘಟನೆಗಳಿಂದ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಪ್ರತಿಕ್ರಿಯೆ ಸಲ್ಲಿಸಲು ಮಾರ್ಚ್ 16, 2026 ಕೊನೆಯ ದಿನವಾಗಿದೆ. ಈ ವೇತನ ಆಯೋಗದ ನಿರ್ಧಾರವು ದೇಶದ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಮೇಲೆ ನೇರ ಪರಿಣಾಮ ಬೀರಲಿದೆ.



