ಪೊಲೀಸ್​ ಠಾಣೆ ಮೆಟ್ಟಿಲೇರಿದ ಬೆಕ್ಕುಗಳ ಲವ್​ ಕಹಾನಿ..! ಸಂಧಾನ ನಡೆಸೋದ್ರೊಳ್ಗೆ ಖಾಕಿ ಸುಸ್ತೋ ಸುಸ್ತು..!

ರಾಜ್ಯದಲ್ಲಿ ಸದ್ಯ ಲವ್​ ಜಿಹಾದ್​ ಸದ್ದು ಮಾಡ್ತಿದೆ. ಸಾಕಷ್ಟು ಪ್ರೇಮ ಪ್ರಕರಣಗಳು ಪೊಲೀಸ್​ ಠಾಣೆ ಮೆಟ್ಟಿಲೇರಿವೆ. ಆದರೆ ಇದೇ ಮೊದಲ ಬಾರಿಗೆ ಬೆಂಗಳೂರಿನ ಶೇಷಾದ್ರಿಪುರಂ ಠಾಣಾ ಪೊಲೀಸರಿಗೆ ಬೆಕ್ಕುಗಳ ಲವ್​ ಸ್ಟೋರಿಯೊಂದು ತಲೆನೋವಾಗಿ ಪರಿಣಮಿಸಿದೆ. ಎರಡೂ ಮನೆಯವರ ನಡುವಿನ ದ್ವೇಷಕ್ಕೆ ಈ ಬೆಕ್ಕುಗಳ ಲವ್​ ಕಹಾನಿ ಕಾರಣವಾಗಿದ್ದು ಆ್ಯಸಿಡ್​ ಸುರಿಯುವ ಮಟ್ಟಿಗೆ ಈ ಪ್ರೀತಿ ಪ್ರಕರಣ ಹೋಗಿದೆ.

ಶೇಷಾದ್ರಿಪುರಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಮೊದಲೇ ಪರಸ್ಪರ ದ್ವೇಷ ಹೊಂದಿದ್ದ ಅಕ್ಕಪಕ್ಕದ ಮನೆಯವರಿಗೆ ಬೆಕ್ಕುಗಳ ಪ್ರೀತಿ ಮತ್ತಷ್ಟು ಆಕ್ರೋಶ ಹುಟ್ಟು ಹಾಕಿದೆ. ಒಬ್ಬರ ಮನೆಯಲ್ಲಿ ಗಂಡು ಬೆಕ್ಕು ಹಾಗೂ ಮತ್ತೊಬ್ಬರ ಮನೆಯಲ್ಲಿ ಹೆಣ್ಣು ಬೆಕ್ಕು ಸಾಕಲಾಗಿತ್ತು. ಆದರೆ ಮೂಖಪ್ರಾಣಿಗಳಿಗೆ ಇವರ ದ್ವೇಷದ ಅರಿವು ಇರಲು ಸಾಧ್ಯವೇ ? ಹೀಗಾಗಿ ಈ ಹೆಣ್ಣು ಬೆಕ್ಕು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಇದು ಹೆಣ್ಣು ಬೆಕ್ಕು ಸಾಕುತ್ತಿರುವವರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಕ್ಕಿನ ಮರಿ ಗಂಡು ಬೆಕ್ಕಿನ ಮನೆಯವರಿಗೂ ಸೇರಿದ್ದು ಎಂದು ಹೆಣ್ಣು ಬೆಕ್ಕಿನ ಮನೆಯವರು ಗಲಾಟೆ ಆರಂಭಿಸಿದ್ದಾರೆ. ಇತ್ತ ಗಂಡು ಬೆಕ್ಕಿನ ಮನೆಯವರು , ನಿಮ್ಮ ಮನೆ ಬೆಕ್ಕನ್ನು ಕಟ್ಟಿ ಹಾಕಬೇಕಿತ್ತು ಅಂತಾ ವಾದ ಶುರುಮಾಡಿದ್ದಾರೆ.ಈ ಗಲಾಟೆ ಎಷ್ಟರ ಮಟ್ಟಿಗೆ ತೀವ್ರತೆ ಪಡೆದುಕೊಂಡಿತ್ತು ಎಂದರೆ ಕೊನೆಗೆ ಇಬ್ಬರೂ ಆಸಿಡ್​ ಸುರಿಯುವ ಮಟ್ಟಿಗೆ ಗಲಾಟೆ ತಿರುವು ಪಡೆದುಕೊಂಡಿತ್ತು.

ಇದನ್ನೂ ಓದಿ: ಕಲ್ಚೆರ್ಪೆಯಲ್ಲಿ ಬಾವಿಗೆ ಬಿದ್ದಿದ್ದ ಕಾಡಾನೆ ಯಶಸ್ವಿ ರಕ್ಷಣೆ

ಕೊನೆಗೆ ಶೇಷಾದ್ರಿಪುರಂ ಪೊಲೀಸ್​ ಠಾಣೆ ಮೆಟ್ಟಿಲನ್ನೂ ಹತ್ತಿದೆ ಈ ಬೆಕ್ಕುಗಳ ಪ್ರಣಯ ಪ್ರಸಂಗ..! ಎರಡೂ ಮನೆಯವರಿಗೂ ಬುದ್ಧಿವಾದ ಹೇಳಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಸದ್ಯ ಬೆಕ್ಕಿನ ಮರಿಗಳನ್ನು ತಾಯಿ ಬೆಕ್ಕಿನಿಂದ ಬೇರ್ಪಡಿಸಿ ಬೇರೆಡೆ ಸ್ಥಳಾಂತರಿಸಲಾಗಿದೆ. ಆದರೆ ಭವಿಷ್ಯದಲ್ಲಿ ಈ ಬೆಕ್ಕುಗಳು ಮತ್ತದೇ ಕೆಲಸ ಮಾಡಿದ್ರೆ ಆಗ ಮನೆಯವರ ರಿಯಾಕ್ಷನ್​ ಹೇಗಿರಬಹುದು ಅನ್ನೋದೇ ಸದ್ಯದ ಮಿಲಿಯನ್​ ಡಾಲರ್ ಪ್ರಶ್ನೆಯಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories