ರೆನಾಲ್ಟ್ನಿಂದ ಸ್ಕೋಡಾವರೆಗೆ : ವೆಂಟಿಲೇಟೆಡ್ ಸೀಟುಗಳಿರುವ ಅಗ್ಗದ ಟಾಪ್ 5 ಕಾರುಗಳು
ಇತ್ತೀಚಿನ ದಿನಗಳಲ್ಲಿ ಕಾರು ಖರೀದಿಯೆಂಬುದು ಬಹಳಷ್ಟು ಆಯ್ಕೆಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ದಿನೇದಿನೇ ಹೊಸ ಹೊಸ ವಾಹನಗಳು ಸೇರ್ಪಡೆಯಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣವೆನ್ನಬಹುದು. ಈಗಿನ ಬಹಳಷ್ಟು ಕಾರುಗಳಲ್ಲಿ ಹೊರಾಂಗಣದಲ್ಲಿ ವಿವಿಧ ವಿನ್ಯಾಸಗಳಿರುವಂತೆ ಒಳಾಂಗಣದಲ್ಲು ಹೊಸ ಹೊಸ ವೈಶಿಷ್ಟ್ಯ, ಅನುಕೂಲತೆಯನ್ನು ಕಾಣಬಹುದು. ಬೇಸಿಗೆಯಲ್ಲಿ ಕಾರಿನ ಒಳಭಾಗವನ್ನು ತಂಪಾಗಿರಿಸಲು ಇರುವ ವೈಶಿಷ್ಟ್ಯಗಳಿಂದ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಭಾರತದಲ್ಲಿ ಈ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಬಜೆಟ್ ಫ್ರೆಂಡ್ಲಿ ಕಾರುಗಳಿವೆ. ವೆಂಟಿಲೇಷನ್ ಇರುವ ಸೀಟ್ಗಳು ಅತ್ಯಂತ ಐಷಾರಾಮಿ ಅನುಭವ ನೀಡುವುದರ ಜೊತೆಗೆ ಆರಾಮದಾಯಕ ಪ್ರಯಾಣವನ್ನು ಮಾಡಬಹುದಾಗಿದೆ. ದೂರದ ಪ್ರಯಾಣಗಳಿಗೆ ವೆಂಟಿಲೇಟೆಡ್ ಸೀಟ್ ಕಾರುಗಳು ಅತ್ಯಂತ ಪ್ರಯೋಜನಕಾರಿಯಾಗಿದೆ. ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುವ ವೆಂಟಿಲೇಟೆಡ್ ಸೀಟುಗಳಿರುವ ಕಾರುಗಳು ಯಾವುವು? ಇಲ್ಲಿದೆ ಓದಿ.
ರೆನಾಲ್ಟ್ ಕಿಗಾರ್
ಭಾರತದಲ್ಲಿ ಮುಂಭಾಗದ ಸೀಟುಗಳಿಗೆ ವೆಂಟಿಲೇಷನ್ ಇರುವ ಅತ್ಯಂತ ಅಗ್ಗದ ಕಾರೆಂದರೆ ಅದು ರೆನಾಲ್ಟ್ನ ಕಿಗರ್. ಈ ವೈಶಿಷ್ಟ್ಯ ಕಿಗರ್ನ ಟಾಪ್ ಎಂಡ್ ಕಾರಿನಲ್ಲಿ ಲಭ್ಯವಿದೆ. ಇದರ ಬೆಲೆ 8.42 ಲಕ್ಷ ರೂ.(ಎಕ್ಸ್ ಶೋ ರೂಂ).
ಕಿಯಾ ಸೋನೆಟ್
ಕಿಯಾದ ಮಿನಿ ಎಸ್ಯುವಿ ಗಳಾದ HTX, GTX+ ಮತ್ತು X-ಲೈನ್ ಮಾದರಿಗಳಲ್ಲಿ ಸೀಟುಗಳ ಮುಂಭಾಗದಲ್ಲಿ ವೆಂಟಿಲೇಷನ್ ಇದೆ. ಈ ವೈಶಿಷ್ಟ್ಯವು 7-ಸ್ಪೀಡ್ ಸ್ವಯಂಚಾಲಿತ ಗೇರ್ಬಾಕ್ಸ್ ಹೊಂದಿರುವ 1.0-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಮಾತ್ರ ಲಭ್ಯವಿದೆ. ಇದರ ಬೆಲೆ 11.65 ಲಕ್ಷ ರೂ. (ಎಕ್ಸ್ ಶೋ ರೂಂ).
ಹುಂಡೈ ವೆನ್ಯೂ
ಹುಂಡೈನ ಸೆಕೆಂಡ್ ಜನರೇನಷನ್ ವೆನ್ಯೂ HX8 ಮತ್ತು HX10 ಮಾದರಿಗಳಲ್ಲಿ ವೆಂಟಿಲೇಟೆಡ್ ಸೀಟುಗಳಿವೆ. ಸ್ಪೋರ್ಟಿಯರ್ ವೆನ್ಯೂ N ಲೈನ್ N10 ಟ್ರಿಮ್ನಲ್ಲಿಯೂ ಈ ವೈಶಿಷ್ಟ್ಯವಿದೆ. ಈ ಕಾರುಗಳ ಆರಂಭಿಕ ಬೆಲೆ 11.91 ಲಕ್ಷ ರೂ. (ಎಕ್ಸ್ ಶೋ ರೂಂ).
ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಅಬ್ಬರ: ವ್ಯಾಗನ್-ಆರ್, ಬಲೆನೊ ಹಿಂದಿಕ್ಕಿ ‘ನಂಬರ್ 1’ ಪಟ್ಟಕ್ಕೇರಿದ ಫೇವರೆಟ್ ಕಾರ್
ಕಿಯಾ ಸೈರೋಸ್
ವೆಂಟಿಲೇಟೆಡ್ ಸೀಟುಗಳಿರುವ ಕಿಯಾದ ಮತ್ತೊಂದು ಕಾರು ಸೈರೋಸ್. ಈ ಕಾರಿನಲ್ಲಿ ಮುಂಭಾಗದ ಮತ್ತು ಹಿಂಭಾಗದ ಸೀಟುಗಳಿಗೆ ವೆಂಟಿಲೇಷನ್ ಇದೆ. ಈ ವೈಶಿಷ್ಟ್ಯವು HTX ಮಾದರಿಯಿಂದ ಲಭ್ಯವಿದೆ. ಇದರ ಬೆಲೆ 12.10 ಲಕ್ಷ ರೂ. (ಎಕ್ಸ್-ಶೋರೂಂ).
ಸ್ಕೋಡಾ ಕೈಲಾಕ್
ಸ್ಕೋಡಾದ ಹೊಸ ಸಣ್ಣ ಎಸ್ಯುವಿ ಕಾರು ಕೈಲಾಕ್ ಸಹ ಸೀಟು ವೆಂಟಿಲೇಷನ್ ಹೊಂದಿರುವ ಕಾರಾಗಿದೆ. ಈ ವೈಶಿಷ್ಟ್ಯವು ಅದರ ಸ್ಟೀಜ್ ಮತ್ತು ಪ್ರೆಸ್ಟೀಜ್+ ನಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 11.75 ಲಕ್ಷ ರೂ.ಗಳು. (ಎಕ್ಸ್-ಶೋರೂಂ).



