ಪ್ರೇಯಸಿ ಕೊಂದ ಬಳಿಕ ಶವ ತಬ್ಬಿ ಸತ್ತಂತೆ ನಟಿಸಿದ ಕಿರಾತಕ: ಬ್ಯಾಡರಹಳ್ಳಿ ಹತ್ಯೆ ಕೇಸ್ನ ರೋಚಕ ಟ್ವಿಸ್ಟ್ ಬಿಚ್ಚಿಟ್ಟ ಪೊಲೀಸರು!
ಮದುವೆಯಾಗಿದ್ದರೂ ಭವಾನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಚಂದ್ರು, ಆಕೆಯನ್ನು ಕೊಲೆ ಮಾಡಿ ತಾನೂ ಸತ್ತಂತೆ ನಟಿಸಿ ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು: ರಾಜಧಾನಿಯ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಯುವತಿ ಭವಾನಿ ಹತ್ಯೆ ಪ್ರಕರಣ ಇದೀಗ ಸಿನಿಮೀಯ ಶೈಲಿಯಲ್ಲಿ ತಿರುವು ಪಡೆದುಕೊಂಡಿದೆ. ಪೊಲೀಸರ ತನಿಖೆ ವೇಳೆ ಆರೋಪಿ ಚಂದ್ರಶೇಖರ್ (ಚಂದ್ರು) ಆಡಿದ್ದ ಹೈಡ್ರಾಮಾ ಈಗ ಬಯಲಾಗಿದೆ. ಮದುವೆಯಾಗಿದ್ದರೂ ಭವಾನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಚಂದ್ರು, ಆಕೆಯನ್ನು ಕೊಲೆ ಮಾಡಿ ತಾನೂ ಸತ್ತಂತೆ ನಟಿಸಿ ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ಬ್ಯಾಡರಹಳ್ಳಿಯ ಬಾಡಿಗೆ ಮನೆಯಲ್ಲಿ ಭವಾನಿ ಹತ್ಯೆ ನಡೆದ ಬಳಿಕ, ಮನೆ ಮಾಲೀಕ ರೂಮ್ ಬಳಿ ಬಂದು ನೋಡಿದಾಗ ಇಬ್ಬರೂ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಭವಾನಿ ಶವವನ್ನು ತಬ್ಬಿಕೊಂಡು ಚಂದ್ರು ಕೂಡ ಅಲುಗಾಡದೆ ಮಲಗಿದ್ದನು. ಇಬ್ಬರ ಪಕ್ಕದಲ್ಲೂ ವಿಷದ ಬಾಟಲಿ ಇರುವುದನ್ನು ಗಮನಿಸಿದ ಮನೆ ಮಾಲೀಕ, ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾವಿಸಿ ತಕ್ಷಣ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : ಲಿವ್-ಇನ್ ರಿಲೇಷನ್ಶಿಪ್ ದುರಂತ: ಕ್ಷಣಿಕ ಕೋಪಕ್ಕೆ ಯುವತಿಯನ್ನು ಉಸಿರುಗಟ್ಟಿಸಿ ಕೊಂದ ಪ್ರೇಮಿ!
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಜರು ಪ್ರಕ್ರಿಯೆ ಮುಗಿಸಿ, ಇಬ್ಬರನ್ನೂ ಆಂಬುಲೆನ್ಸ್ಗೆ ಶಿಫ್ಟ್ ಮಾಡಲು ಮುಂದಾದಾಗ ಪೊಲೀಸರಿಗೇ ದೊಡ್ಡ ಶಾಕ್ ಕಾದಿತ್ತು. ಇದ್ದಕ್ಕಿದ್ದಂತೆ ಚಂದ್ರು ಕೈ-ಕಾಲು ಅಲುಗಾಡಿಸಲು ಆರಂಭಿಸಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಚಂದ್ರು ಬಾಯಿಬಿಟ್ಟ ಸತ್ಯ ಕೇಳಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ತಾನು ಭವಾನಿಯನ್ನು ಕೊಲೆ ಮಾಡಿದ ಬಳಿಕ ಪೊಲೀಸರು ಹಾಗೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಯ ನಾಟಕವಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಭವಾನಿ ಶವದ ಪಕ್ಕದಲ್ಲೇ ವಿಷದ ಬಾಟಲಿ ಇಟ್ಟು, ಸುಮಾರು ಒಂದೂವರೆ ಗಂಟೆಯ ಕಾಲ ಆಕೆಯ ಶವವನ್ನು ತಬ್ಬಿಕೊಂಡು ತಾನೂ ವಿಷ ಕುಡಿದು ಸತ್ತವನಂತೆ ನಟಿಸಿರುವುದಾಗಿ ಆತ ಸತ್ಯ ಕಕ್ಕಿದ್ದಾನೆ. ಸದ್ಯ ಆರೋಪಿ ಚಂದ್ರಶೇಖರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹತ್ಯೆಗೆ ನಿಖರ ಕಾರಣ ಏನೆಂಬುದರ ಕುರಿತು ಬ್ಯಾಡರಹಳ್ಳಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



