ಬೆಂಗಳೂರು ಟ್ರಾಫಿಕ್ಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ – ಮೆಟ್ರೋ ಬಳಸುವ ಬಯೋಕಾನ್ ಸಿಬ್ಬಂದಿಗೆ ಬೋನಸ್
ಬೆಂಗಳೂರಿನಲ್ಲಿ ಇರುವ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪ್ರತಿಷ್ಠಿತ ಬಯೋಕಾನ್ ಸಂಸ್ಥೆಯು ಹೊಸ ಮಾಸ್ಟರ್ ಪ್ಲಾನ್ ಕಂಡುಹಿಡಿದಿದೆ. ಅದೇನು? ಇಲ್ಲಿದೆ ಓದಿ.
ರಾಜಧಾನಿ ಬೆಂಗಳೂರಿನಲ್ಲಿ ಇರುವ ಟ್ರಾಫಿಕ್ ಸಮಸ್ಯೆ ಇಂದು ನೆನ್ನೆಯದಲ್ಲ. ವಾಹನ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಟ್ರಾಫಿಕ್ ಸಮಸ್ಯೆ ಎನ್ನುವುದು ದೊಡ್ಡ ತಲೆನೋವಾಗಿಯೇ ಸಂಭವಿಸಿದೆ. ವಿಶ್ವದಲ್ಲೇ ಅತೀ ಹೆಚ್ಚು ಸಂಚಾರ ದಟ್ಟಣೆಯ ನಗರ ಎನಿಸಿರುವ ಬೆಂಗಳೂರು, ಟ್ರಾಫಿಕ್ ಜಾಂ ಸಮಸ್ಯೆಗೆ ಎತ್ತಿದ ಕೈ ಎನಿಸಿದೆ. ಈ ಸಮಸ್ಯೆ ಪರಿಹಾರಕ್ಕೆ ಪ್ರತಿಷ್ಠಿತ ಬಯೋಕಾನ್ ಸಂಸ್ಥೆಯು ಹೊಸ ಮಾಸ್ಟರ್ ಪ್ಲಾನ್ ಕಂಡುಹಿಡಿದಿದೆ.
ಹೌದು..! ಬಯೋಕಾನ್ ಕಂಪನಿಯು ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಾರ್ವಜನಿಕ ಸಾರಿಗೆ ಬಳಕೆ ಮಾಡುವಂತೆ ಕರೆ ನೀಡಿದೆ. ವಾರದಲ್ಲಿ ಕನಿಷ್ಠ 2 ದಿನ ಸಾರ್ವಜನಿಕ ಸಾರಿಗೆ ಬಳಕೆ ಮಾಡುವ ಈ ಕಂಪನಿಯ ಸಿಬ್ಬಂದಿಗೆ ಸಂಬಳದ ಜೊತೆ ಪ್ರೋತ್ಸಾಹ ಧನವನ್ನೂ ಈ ಕಂಪನಿ ನೀಡಿಲಿದೆಯಂತೆ. ಮೊದಲ ಹಂತದಲ್ಲಿ ಒಂದು ಸಾವಿರ ಉದ್ಯೋಗಿಗಳಿಗೆ ಪ್ರತಿ ತಿಂಗಳು 2,000 ರೂಪಾಯಿಗಳ ಮೆಟ್ರೋ ಪಾಸ್ ಅಥವಾ ಇನ್ಸೆಂಟಿವ್ ನೀಡಲು ಸಂಸ್ಥೆ ನಿರ್ಧರಿಸಿದೆ.
ಇದನ್ನೂ ಓದಿ: ಬಡರೋಗಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ನ್ಯೂಸ್ : ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ
ಈ ಕುರಿತು ಮಾತನಾಡಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು, ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗ ದಲ್ಲಿ ಮೆಟ್ರೋ ಸಂಚಾರವನ್ನು ಆಯ್ಕೆ ಮಾಡಿಕೊಂಡಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಮ್ಮ ಈ ಸಂಸ್ಥೆಯ ನಿರ್ಧಾರದಂತೆ ಇತರೆ ಕಂಪನಿಗಳೂ ಇದನ್ನು ಪಾಲಿಸಿದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ಸಾರಿಗೆ ಬಳಕೆ ಮಾಡುವವರಿಗೆ ಇನ್ಸೆಂಟಿವ್ ನೀಡುವುದು ಒಂದೆಡೆಯಾದರೆ ಕಚೇರಿಗೆ ಸ್ವಂತ ಕಾರು ಅಥವಾ ಬೈಕಿನಲ್ಲಿ ಬರುವವರಿಗೆ ಪಾರ್ಕಿಂಗ್ ಶುಲ್ಕ ವಿಧಿಸಲು ಬಯೋಕಾನ್ ಕಂಪನಿ ನಿರ್ಧರಿಸಿದೆ. ಹೀಗಾಗಿ ಪಾರ್ಕಿಂಗ್ ಶುಲ್ಕ ಪಾವತಿ ತಪ್ಪಿಸಲು ಈಗಾಗಲೇ ಸಿಬ್ಬಂದಿ ಮೆಟ್ರೋ ಹಾಗೂ ಬಿಎಂಟಿಸಿ ಬಳಕೆ ಮಾಡುತ್ತಿದ್ದಾರೆ ಎಂದು ಕಿರಣ್ ಮಜುಂದಾರ್ ಹೇಳಿದರು.



