ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೊಸ ದಿಕ್ಸೂಚಿ: ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆ ಓದು ಕಡ್ಡಾಯ!
ವಿದ್ಯಾರ್ಥಿಗಳಿಂದ ದೆ ಪ್ರತಿನಿತ್ಯ ಬೆಳಗ್ಗೆ 10 ನಿಮಿಷಗಳ ಕಾಲ ಕನ್ನಡ ಪತ್ರಿಕೆಯನ್ನು ಕಡ್ಡಾಯವಾಗಿ ಓದಿಸುವಂತೆ ಸುತ್ತೋಲೆ ಹೊರಡಿಸಿದೆ.

ಡಿಜಿಟಲ್ ಜಮಾನವೇ ತುಂಬಿ ಹೋಗಿರುವ ಈ ಕಾಲದಲ್ಲಿ ಶಾಲಾ ಮಕ್ಕಳು ಸದಾ ಮೊಬೈಲ್, ಸೋಶಿಯಲ್ ಮೀಡಿಯಾಗಳಲ್ಲಿಯೇ ಇರುತ್ತಾರೆ. ಇದರಿಂದ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹಾಗೂ ಭಾಷೆಯ ಮೇಲಿನ ಹಿಡಿತದಲ್ಲಿ ಹಿನ್ನಡೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಹೊಸದೊಂದು ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಇನ್ಮುಂದೆ ಪ್ರತಿನಿತ್ಯ ಬೆಳಗ್ಗೆ ಪ್ರಾರ್ಥನಾ ಸಮಯದ ಬಳಿಕ ವಿದ್ಯಾರ್ಥಿಗಳಿಂದ 10 ನಿಮಿಷಗಳ ಕಾಲ ಕನ್ನಡ ಪತ್ರಿಕೆಯನ್ನು ಕಡ್ಡಾಯವಾಗಿ ಓದಿಸುವಂತೆ ಸುತ್ತೋಲೆ ಹೊರಡಿಸಿದೆ.
ಮಕ್ಕಳಿಂದ ಮೊಬೈಲ್ ಚಟವನ್ನು ಬಿಡಿಸುವುದು, ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಕಂಡುಬರುತ್ತಿರುವ ಸಾಮಾನ್ಯ ಜ್ಞಾನದ ಕೊರತೆ, ಶ್ರವಣ ದೋಷ, ಮಾನಸಿಕ ಆರೋಗ್ಯದಲ್ಲಿ ಏರುಪೇರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಅಸೆಂಬ್ಲಿಯಲ್ಲಿ 10 ನಿಮಿಷಗಳ ಕಾಲ ಧೈರ್ಯವಾಗಿ ವಿದ್ಯಾರ್ಥಿಗಳು ಪತ್ರಿಕೆ ಓದುವುದರಿಂದ ಸಾರ್ವಜನಿಕವಾಗಿ ಮಾತನಾಡುವ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಹಾಗೂ ಭಾಷೆಯ ಮೇಲಿನ ಹಿಡಿತ ಮತ್ತು ಬರವಣಿಗೆ ಶೈಲಿಯಲ್ಲಿಯೂ ಸುಧಾರಣೆ ಕಂಡುಬರಲಿದೆ.
ಇದನ್ನೂ ಓದಿ : ಡಿಕೆ ಶಿವಕುಮಾರ್ ಜನ್ಮದಿನ: ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಸಂಚಲನ?
ಹೀಗಾಗಿ ದಿನಕ್ಕೆ 10 ನಿಮಿಷಗಳ ಸಮಯವನ್ನು ಪತ್ರಿಕೆಗೆ ಮೀಸಲಿಡುವುದರಿಂದ ವಿದ್ಯಾರ್ಥಿಗಳು ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಭಾಷೆಯ ಮೇಲಿನ ಹಿಡಿತ ಕೂಡ ಹೆಚ್ಚಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಸಿದ್ಧತೆ ಕೂಡ ಮಾಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಲ್ಲಿ ಮನವಿ ಮಾಡಿತ್ತು.ಈ ಸಂಬಂಧ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸುದ್ದಿವಾಚನ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಲ್ಲಿ ಜ್ಞಾನದ ಭಂಡಾರ ಹೆಚ್ಚಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡತಾಗಿದೆ.



