“ಬ್ಯಾಟ್ನಲ್ಲಿ ಚಿಪ್ ಇದೆ ಅಂದವರಿಗೆ ಬ್ಯಾಟ್ನಲ್ಲೇ ಉತ್ತರ ಕೊಟ್ಟ ವೈಭವ್ ಸೂರ್ಯವಂಶಿ !
ಪಾಕ್ನ ಕ್ರಿಕೇಟ್ ವಿಶ್ಲೇಷಕನೊಬ್ಬ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಅಬ್ಬರದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಅಬ್ಬರದ ಪ್ರದರ್ಶನ ತೋರುತ್ತಿರುವ ವೈಭವ್ ಸೂರ್ಯವಂಶಿ ಬೌಲರ್ಗಳ ಬೆಂಡೆತ್ತುವ ಸಣ್ಣ ಅವಕಾಶವನ್ನೂ ಬಿಡುತ್ತಿಲ್ಲ. ಆದರೆ ಈ ಎಲ್ಲದರ ನಡುವೆ ಪಾಕ್ನ ಕ್ರಿಕೇಟ್ ವಿಶ್ಲೇಷಕನೊಬ್ಬ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ವೈಭವ್ ಸೂರ್ಯವಂಶಿ ತಮ್ಮ ಸ್ವಂತ ಬಲದಿಂದ ಕ್ರಿಕೇಟ್ ಲೋಕದಲ್ಲಿ ಅಮೋಘ ಪ್ರದರ್ಶನ ನೀಡುತ್ತಿಲ್ಲ. ಬದಲಾಗಿ ಅವರ ಬ್ಯಾಟ್ನಲ್ಲಿ ಎಐ ಚಿಪ್ ಇದೆ ಎಂದು ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕ ನೌಮನ್ ಗಂಭೀರ ಆರೋಪ ಮಾಡಿದ್ದರು. ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನೌಮನ್, ಕ್ರಿಕೆಟ್ ಆಟಗಾರರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸುವಂತೆ ವೈಭವ್ ಸೂರ್ಯವಂಶಿಯ ಬ್ಯಾಟ್ನ್ನೂ ಪರೀಕ್ಷೆಗೆ ಒಳಪಡಿಸಬೇಕು. ಏಕೆಂದರೆ ಅವರ ಬ್ಯಾಟ್ನಲ್ಲಿ ಕೃತಕ ಬುದ್ಧಿಮತ್ತೆಯ ಚಿಪ್ ಇದೆ ಎಂಬ ಅನುಮಾನ ನನಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ವೈಭವ್ ಸೂರ್ಯವಂಶಿ, ಪಾಕ್ ಕ್ರಿಕೇಟ್ ವಿಶ್ಲೇಷಕನ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟ್ನಲ್ಲಿ ಎಐ ಚಿಪ್ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ಚಿಪ್ನ್ನು ಸ್ವತಃ ಆ ದೇವರೇ ನನ್ನ ಬ್ಯಾಟ್ನಲ್ಲಿ ಇರಿಸಿದ್ದಾರೆ ಎಂದು ಹೇಳುವ ಮೂಲಕ ಪಾಕ್ ಕ್ರಿಕೆಟ್ ವಿಶ್ಲೇಷಕನ ಬಾಯಿ ಮುಚ್ಚಿಸಿದ್ದಾರೆ.



