ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ: ವಿಜಯ್ ಪ್ರಮಾಣವಚನಕ್ಕೆ ರಾಜ್ಯಪಾಲರ ಬ್ರೇಕ್; ಸಂಕಷ್ಟದಲ್ಲಿ ದಳಪತಿ!

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ವಿಜಯ್​ ಬಳಿ ಬಹುಮತ ಇಲ್ಲ ಎಂದು ಅರ್ಲೇಕರ್​ ಅಭಿಪ್ರಾಯ ಪಟ್ಟಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ: ಭಾರೀ ಸಂಖ್ಯೆಯೊಂದಿಗೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಕೂಡ ನಟ ವಿಜಯ್​ಗೆ ಮುಖ್ಯಮಂತ್ರಿಯಾಗುವ ಭಾಗ್ಯ ಕೂಡಿ ಬರುತ್ತಿಲ್ಲ. ತಮಿಳುನಾಡಿನಲ್ಲಿ 108 ಸ್ಥಾನಗಳನ್ನು ಗೆದ್ದಿರುವ ನಟ ವಿಜಯ್​ ಇಂದು ಪ್ರಮಾಣ ವಚನ ಸ್ವೀಕಾರ ಮಾಡುವುದಾಗಿ ರಾಜ್ಯಪಾಲರಿಗೆ ಸಲ್ಲಿಸಿದ್ದ ಮನವಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ತಡೆ ನೀಡಿದ್ದಾರೆ. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ವಿಜಯ್​ ಬಳಿ ಬಹುಮತ ಇಲ್ಲ ಎಂದು ಅರ್ಲೇಕರ್​ ಅಭಿಪ್ರಾಯ ಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡಲು ಮ್ಯಾಜಿಕ್​ ನಂಬರ್​ 118 ಆಗಬೇಕು. ಸದ್ಯ ವಿಜಯ್​ 108 ಸ್ಥಾನಗಳ ಸಂಖ್ಯಾಬಲ ಹೊಂದಿದ್ದಾರೆ. ಅಲ್ಲದೇ ಕಾಂಗ್ರೆಸ್​ ಕೂಡ ಟಿವಿಕೆಗೆ ಬೆಂಬಲ ಸೂಚಿಸಿದ್ದು , 5 ಶಾಸಕ ಸ್ಥಾನ ಕಾಂಗ್ರೆಸ್​ ಬಳಿ ಇದೆ. ಇದರಿಂದ ಟಿವಿಕೆ ಬಲ 112ಕ್ಕೆ ಏರಿಕೆ ಕಂಡಿದೆ. ಆದರೆ ವಿಜಯ್​ಗೆ ಇನ್ನೂ ಆರು ಶಾಸಕರು ಬೆಂಬಲ ಸೂಚಿಸಿದಲ್ಲಿ ಮಾತ್ರ ಮುಖ್ಯಮಂತ್ರಿ ಪದವಿ ಗಳಿಸಲು ಸಾಧ್ಯವಿದೆ.

ಇದನ್ನೂ ಓದಿ : ರಾಜ್ಯದಲ್ಲಿ ‘ಇವ ನಮ್ಮವ’ ಕಾಯ್ದೆ ಸದ್ದು: ಮರ್ಯಾದಾ ಹತ್ಯೆಗೆ ಬ್ರೇಕ್ ಹಾಕಲು ಸರ್ಕಾರ ಮಾಸ್ಟರ್ ಪ್ಲಾನ್!

ಸದ್ಯಕ್ಕೆ ಎಐಡಿಎಂಕೆ 47 ಶಾಸಕರ ಪೈಕಿ 30 ಶಾಸಕರು ವಿಜಯ್​ ಜೊತೆ ಮೈತ್ರಿ ಮಾಡಿಕೊಳ್ಳುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ಎಐಡಿಎಂಕೆ ವಿಜಯ್​ ಜೊತೆ ಮೈತ್ರಿ ಮಾಡಿಕೊಂಡಲ್ಲಿ ವಿಜಯ್​ ಹಾದಿ ಸುಗಮವಾಗಲಿದೆ. ವಿಸಿಪಿ ಹಾಗೂ ಎಡಪಕ್ಷಗಳು ಮೇ 8ರವರೆಗೆ ಸಮಯಾವಕಾಶ ಕೇಳಿದ್ದು, ಹೀಗಾಗಿ ವಿಜಯ್​ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಇನ್ನೊಂದು ದಿನ ಕಾಯುವ ಅನಿವಾರ್ಯತೆ ಎದುರಾಗಿದೆ.

ಇನ್ನು ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್​,ಬಳಿಕ ಡಿಎಂಕೆ ಜೊತೆ ಮೈತ್ರಿ ಮುರಿದುಕೊಂಡು ಟಿವಿಕೆ ಜೊತೆ ಕೈ ಜೋಡಿಸಿರುವುದು ಡಿಎಂಕೆ ಕಣ್ಣು ಕೆಂಪಗಾಗಿಸಿದೆ. ಕೇವಲ 2 ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​ ತನ್ನ ಅಸ್ತಿತ್ವ ಕಳೆದುಕೊಳ್ಳಲು ಸಿದ್ಧವಿದೆ. ಕಾಂಗ್ರೆಸ್​ನ ಈ ನಿರ್ಧಾರ ತಮಿಳುನಾಡು ಜನತೆಗೆ ಮಾಡಿರುವ ದ್ರೋಹ ಎಂದು ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ ಆಕ್ರೋಶ ಹೊರಹಾಕಿದ್ದಾರೆ .

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories