ಬುದ್ಧಿ ವರ್ಧಕ ಬಾದಾಮಿ : ಪ್ರತಿದಿನ 4 ರಿಂದ 5 ಬಾದಾಮಿ ತಿನ್ನುವುದರಿಂದ ಏನೆಲ್ಲಾ ಲಾಭ?
ಬಾದಾಮಿ ಚಿಕ್ಕ ಬೀಜವಾಗಿದ್ದರೂ, ಭಾರಿ ಪ್ರಯೋಜನಕಾರಿಯಾಗಿದೆ. ಆರೋಗ್ಯಕರ ಜೀವನಶೈಲಿಯಲ್ಲಿ ಬಾದಾಮಿಯನ್ನು ಅಳವಡಿಸಿಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ? ಇಲ್ಲಿದೆ ಓದಿ.
ಇಂದಿನ ಧಾವಂತದ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡದಿಂದಾಗಿ ಜನರು ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯದ ಕಡೆ ಗಮನ ಹರಿಸುವಂತಾಗಿದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವುದು, ಉತ್ತಮ ಆಹಾರ ಸೇವನೆ, ವ್ಯಾಯಾಮ ಮುಂತಾದವುಗಳ ಬಗ್ಗೆ ಒತ್ತು ನೀಡಲಾಗುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನವರು ಆರೋಗ್ಯ ಕಾಳಜಿಗೆ ಆದ್ಯತೆ ನೀಡುವುದು ಬಹಳ ಮುಖ್ಯವಾಗಿದೆ. ಇಂತಹ ಸಮಯದಲ್ಲಿ ಒಣ ಹಣ್ಣು ಮತ್ತು ಬೀಜಗಳು ದಿನವೊಂದಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ಕಾರ್ಯ ಮಾಡುತ್ತವೆ. ಒಣ ಬೀಜಗಳು ಪೋಷಕಾಂಶಗಳ ನಿಧಿ. ಅವುಗಳನ್ನು ಶತಮಾನಗಳಿಂದ ಆರೋಗ್ಯಕರ ಆಹಾರದ ಭಾಗವಾಗಿ ಸೇವಿಸಲಾಗುತ್ತದೆ. ಅಂತಹವುಗಳಲ್ಲಿ ಬಾದಾಮಿಯೂ ಒಂದು. ಬುದ್ಧಿಯನ್ನು ಚುರುಕುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾದ ಈ ಬಾದಾಮಿಯಲ್ಲಿ ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಇ ಮತ್ತು ಹಲವಾರು ಅಗತ್ಯ ಖನಿಜಗಳು ಹೇರಳವಾಗಿದೆ. ಅವು ದೇಹದ ವಿವಿಧ ಭಾಗಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇಂತಹ ಬಾದಾಮಿಯನ್ನು ಪ್ರತಿದಿನ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂದು ನೋಡೋಣ.
ಪ್ರತಿದಿನ 4–5 ಬಾದಾಮಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ?
ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ
ಬಾದಾಮಿಯಲ್ಲಿರುವ ನಾರಿನಂಶವು ಜೀರ್ಣಾಂಗ ವ್ಯವಸ್ಥೆಗೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಪೋಷಿಸಿ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
ಹೃದಯದ ಕಾಳಜಿ ವಹಿಸುತ್ತದೆ
ಬಾದಾಮಿ ಹೃದಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅದರಲ್ಲಿರುವ ಪೋಷಕಾಂಶಗಳು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ ಸ್ಥಿರತೆಯನ್ನು ಕಾಯ್ದುಕೊಳ್ಳುವುದರ ಮೂಲಕ ದೀರ್ಘಾವಧಿಯಲ್ಲಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ
ಬಾದಾಮಿಯಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪ್ರಮುಖ ಖನಿಜಗಳಿವೆ. ಈ ಪೋಷಕಾಂಶಗಳು ಬಲವಾದ ಮೂಳೆಗಳು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸರಿಯಾದ ಸ್ನಾಯು ಕಾರ್ಯ, ನರಮಂಡಲದ ಆರೋಗ್ಯ ಮತ್ತು ಸಾಮಾನ್ಯ ಹೃದಯ ಬಡಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಇದನ್ನೂ ಓದಿ : ತೂಕ ಇಳಿಕೆಗೆ ರಾಮಬಾಣ ಜೇನುತುಪ್ಪ : ಸೇವಿಸುವ ಸರಿಯಾದ ವಿಧಾನ ತಿಳಿಯಿರಿ
ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ
ಬಾದಾಮಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿದೆ. ಅದರಿಂದ ಹೆಚ್ಚು ಸಮಯ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಅತಿಯಾದ ತಿನ್ನುವ ಬಯಕೆ ಹಾಗು ಅನಾರೋಗ್ಯಕರ ಕರಿದ ತಿಂಡಿಗಳ ಸೇವನೆಗೆ ಕಡಿವಾಣ ಹಾಕುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ಬಾದಾಮಿ ಸಮತೋಲಿತ ಆಹಾರದ ಭಾಗವಾಗಿದೆ. ಹಾಗಾಗಿ ಇದು ತೂಕ ನಿಯಂತ್ರಣಕ್ಕೆ ಸಹಾಯಕವಾಗಿದೆ.
ನೆನಪಿನ ಶಕ್ತಿ ಹೆಚ್ಚಿಸುತ್ತದೆ
ಬಾದಾಮಿಯಲ್ಲಿ ರಿಬೋಫ್ಲಾವಿನ್ ಮತ್ತು ಎಲ್-ಕಾರ್ನಿಟೈನ್ ನಂತಹ ಪೋಷಕಾಂಶಗಳಿದ್ದು, ಇವು ಸ್ಮರಣಶಕ್ತಿ, ಏಕಾಗ್ರತೆ ಮತ್ತು ಅರಿವಿನ ಕಾರ್ಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿಯೇ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಅವುಗಳನ್ನು ಹೆಚ್ಚಾಗಿ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯವಾಗಿದೆ.



