ತಂದೆ ಸತ್ತ ಮೇಲೆ, ಮಾಡಿದ ಸಾಲ ಮಕ್ಕಳೇ ಕಟ್ಟಬೇಕಾ? ಕಾನೂನು ಹೇಳೋ ಸತ್ಯ ಬೇರೆ!
ಮನೆಯ ಹಿರಿಯರು ಸಾವನ್ನಪ್ಪಿದ ಬಳಿಕ ಬ್ಯಾಂಕ್ ಸಾಲಗಳ ಬಗ್ಗೆ ಕುಟುಂಬಗಳು ಆತಂಕಕ್ಕೊಳಗಾಗುತ್ತವೆ. ಯಾವ ಸಾಲವನ್ನು ಯಾರು ಕಟ್ಟಬೇಕು, ಯಾವ ಸಂದರ್ಭಗಳಲ್ಲಿ ಹೊಣೆಗಾರಿಕೆ ಬರುತ್ತದೆ ಎಂಬುದರ ಕುರಿತು ಇಲ್ಲಿದೆ ಪ್ರಮುಖ ಮಾಹಿತಿ.

ಕುಟುಂಬದ ಆರ್ಥಿಕ ಹೊಣೆ ಹೊತ್ತಿದ್ದ ವ್ಯಕ್ತಿ ಇಲ್ಲವಾದಾಗ ಮನೆ ಸದಸ್ಯರು ಭಾವನಾತ್ಮಕ ಸಂಕಷ್ಟದ ಜೊತೆಗೆ ಸಾಲದ ಒತ್ತಡಕ್ಕೂ ಸಿಲುಕುತ್ತಾರೆ. ವಿಶೇಷವಾಗಿ ಬ್ಯಾಂಕ್‌ನಿಂದ ಕರೆಗಳು ಬಂದಾಗ ಹಲವರು ಗಾಬರಿಗೊಳ್ಳುತ್ತಾರೆ. ಆದರೆ ಪ್ರತಿಯೊಂದು ಸಾಲಕ್ಕೂ ಕುಟುಂಬವೇ ಹಣ ಕಟ್ಟಬೇಕೆಂಬುದು ತಪ್ಪು ಕಲ್ಪನೆ.
ಗೃಹ ಸಾಲ ಮತ್ತು ವಾಹನ ಸಾಲಗಳನ್ನು ಸುರಕ್ಷಿತ ಸಾಲಗಳೆಂದು ಪರಿಗಣಿಸಲಾಗುತ್ತದೆ. ಅಂದರೆ ಮನೆ ಅಥವಾ ವಾಹನವನ್ನು ತಾಕತ್ತು ಇಟ್ಟು ಬ್ಯಾಂಕ್ ಹಣ ನೀಡಿರುತ್ತದೆ. ಸಾಲ ಪಡೆದ ವ್ಯಕ್ತಿ ಸಾವನ್ನಪ್ಪಿದರೆ ಬ್ಯಾಂಕ್ ಆ ಆಸ್ತಿಯನ್ನು ಮಾರಾಟ ಮಾಡಿ ತನ್ನ ಹಣ ವಾಪಸ್ ಪಡೆಯಬಹುದು.
ಆದರೆ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿಗಳು ಬೇರೆ ರೀತಿಯಲ್ಲಿ ಪರಿಗಣಿಸಲಾಗುತ್ತವೆ. ಇವುಗಳಿಗೆ ತಾಕತ್ತು ಇಲ್ಲದ ಕಾರಣ ಬ್ಯಾಂಕ್ ನೇರವಾಗಿ ಮಕ್ಕಳಿಂದ ಹಣ ವಸೂಲಿ ಮಾಡಲು ಸಾಧ್ಯವಿಲ್ಲ. ಮೃತ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಗಳಿಂದ ಮಾತ್ರ ಹಣ ವಸೂಲಿ ಮಾಡಬಹುದು.
ಒಬ್ಬರು ಜಂಟಿ ಸಾಲ ಪಡೆದಿದ್ದರೆ ಉಳಿದ ಸಹ-ಸಾಲಗಾರರ ಮೇಲೆ ಸಂಪೂರ್ಣ ಹೊಣೆ ಬರುತ್ತದೆ. ಇದೇ ರೀತಿ ಗ್ಯಾರಂಟರ್ ಆಗಿ ಸಹಿ ಹಾಕಿದವರು ಕಾನೂನುಬದ್ಧವಾಗಿ ಸಾಲ ತೀರಿಸಬೇಕಾಗುತ್ತದೆ. ಆದ್ದರಿಂದ ಗ್ಯಾರಂಟರ್ ಸಹಿ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಅಗತ್ಯ.
ಶಿಕ್ಷಣ ಸಾಲಗಳಲ್ಲಿಯೂ ಕೆಲವು ಬ್ಯಾಂಕ್‌ಗಳು ವಿದ್ಯಾರ್ಥಿಯ ಮರಣದ ನಂತರ ಮಾನವೀಯ ಆಧಾರದ ಮೇಲೆ ಸಾಲ ಮನ್ನಾ ಮಾಡುವುದಿದೆ. ಆದರೆ ಪೋಷಕರು ಸಹ-ಅರ್ಜಿದಾರರಾಗಿದ್ದರೆ ಅವರಿಗೆ ಹೊಣೆಗಾರಿಕೆ ಬರುತ್ತದೆ.
ತಜ್ಞರ ಪ್ರಕಾರ, ಸಾಲದ ಮೊತ್ತಕ್ಕಿಂತ ಆಸ್ತಿ ಮೌಲ್ಯ ಕಡಿಮೆ ಇದ್ದರೆ ವಾರಸುದಾರರು ಆಸ್ತಿಯನ್ನು ಸ್ವೀಕರಿಸದೇ ಕಾನೂನುಬದ್ಧವಾಗಿ ತ್ಯಜಿಸುವ ಆಯ್ಕೆಯೂ ಇದೆ. ಹೀಗೆ ಮಾಡಿದರೆ ಸಾಲದ ಹೊಣೆಗಾರಿಕೆಯಿಂದ ದೂರ ಉಳಿಯಬಹುದು.
ಕುಟುಂಬ ಸದಸ್ಯರು ಮೊದಲು ಮರಣ ಪ್ರಮಾಣಪತ್ರದ ಪ್ರತಿಗಳನ್ನು ಸಿದ್ಧಪಡಿಸಿ ಬ್ಯಾಂಕ್‌ಗೆ ಅಧಿಕೃತ ಮಾಹಿತಿ ನೀಡಬೇಕು. ಸಾಲದ ಮೇಲೆ ವಿಮೆ ಇದ್ದರೆ ಅದರ ವಿವರ ಪರಿಶೀಲಿಸುವುದು ಬಹಳ ಮುಖ್ಯ. ದೊಡ್ಡ ಮೊತ್ತದ ಸಾಲಗಳಿಗೆ ಟರ್ಮ್ ಇನ್ಸೂರೆನ್ಸ್ ಇರುವುದರಿಂದ ಕುಟುಂಬದ ಆರ್ಥಿಕ ಭದ್ರತೆ ಹೆಚ್ಚಾಗುತ್ತದೆ.
ಬ್ಯಾಂಕ್ ರಿಕವರಿ ಏಜೆಂಟ್‌ಗಳು ಮನೆಗೆ ಬಂದು ಒತ್ತಡ ಹಾಕುವುದು ಅಥವಾ ಬೆದರಿಕೆ ನೀಡುವುದು ಕಾನೂನು ವಿರುದ್ಧ. ಇಂತಹ ಸಂದರ್ಭದಲ್ಲಿ RBI ಪೋರ್ಟಲ್ ಅಥವಾ ಪೊಲೀಸರಿಗೆ ದೂರು ನೀಡಬಹುದು.



