ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು..! ಹುಚ್ಚು ಹಿಡಿದ ಬೀದಿನಾಯಿಗಳಿಗೆ ದಯಾಮರಣಕ್ಕೆ ಅನುಮತಿ!
ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಹತ್ವದ ತೀರ್ಪೋಂದನ್ನು ನೀಡಿದೆ.

ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಹತ್ವದ ತೀರ್ಪೋಂದನ್ನು ನೀಡಿದೆ. ಈ ತೀರ್ಪಿನ ಅನ್ವಯ ಗುಣವಾಗದಷ್ಟು ರೋಗಗ್ರಸ್ತವಾಗಿರುವ, ಅತ್ಯಂತ ವ್ಯಗ್ರವಾಗಿ ವರ್ತಿಸುವ ಹಾಗೂ ಹುಚ್ಚು ಹಿಡಿದ ಬೀದಿ ನಾಯಿಗಳಿಗೆ ದಯಾಮರಣ ನೀಡಲು ಸರ್ವೋಚ್ಚ ನ್ಯಾಯಾಲಯ ಹಸಿರು ನಿಶಾನೆ ನೀಡಿದೆ.
ಕಳೆದ ವರ್ಷ ದೇಶದ ವಿವಿಧೆಡೆ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಪ್ರಾಣಹಾನಿ ಉಂಟುಮಾಡಿದ್ದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಜುಲೈ 28ರಂದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ರಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠವು ಈ ಮಹತ್ವದ ಆದೇಶ ನೀಡಿದೆ.
ಇದನ್ನೂ ಓದಿ : ಧೂಮಪಾನಿಗಳಿಗೆ ಬಿಗ್ ಶಾಕ್: ಕೇಂದ್ರದ ಸುಂಕದ ಎಫೆಕ್ಟ್, ಸಿಗರೇಟ್ ಬೆಲೆ ಶೇ. 21ರಷ್ಟು ಭಾರಿ ಏರಿಕೆ!
ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವ ಮತ್ತು ನಾಯಿ ಕಡಿತದ ಪ್ರಕರಣಗಳು ಸರಣಿಯಾಗಿ ನಡೆಯುತ್ತಿರುವ ಪ್ರದೇಶಗಳಲ್ಲಿ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಅರ್ಹ ಪಶುವೈದ್ಯ ತಜ್ಞರ ತಂಡದಿಂದ ಮೌಲ್ಯಮಾಪನ ನಡೆಸಬೇಕು. ಪಶುವೈದ್ಯರ ಮೌಲ್ಯಮಾಪನದಲ್ಲಿ ಕ್ರೋಧೋನ್ಮತ್ತ, ಗುಣಪಡಿಸಲಾಗದಷ್ಟು ಅನಾರೋಗ್ಯ ಪೀಡಿತ ಹಾಗೂ ಹುಚ್ಚು ಹಿಡಿದ ನಾಯಿಗಳು ಇರುವುದು ನಿಯಮಾನುಸಾರ ಖಚಿತಪಟ್ಟರೆ ಮಾತ್ರ ದಯಾಮರಣ ನೀಡಲು ಕ್ರಮ ಕೈಗೊಳ್ಳಬಹುದು. ಹಾಗೂ ದಯಾಮರಣ ಪ್ರಕ್ರಿಯೆಯನ್ನು ಕೊನೆಯ ಆಯ್ಕೆಯಾಗಿ ಮಾತ್ರ ಬಳಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ವೈದ್ಯರ ಕಡ್ಡಾಯ ಪರಿಶೀಲನೆ ಹಾಗೂ ನಿಯಮಾವಳಿಗಳ ಪ್ರಕಾರವೇ ಈ ಪ್ರಕ್ರಿಯೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.ಅಲ್ಲದೇ, ಈ ಇಡೀ ಪ್ರಕ್ರಿಯೆಯು 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಹಾಗೂ 2023ರ ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳ ನಿಬಂಧನೆಗಳಿಗೆ ಒಳಪಟ್ಟಿರಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯ ಪೀಠ ಸೂಚಿಸಿದೆ. ಸಾರ್ವಜನಿಕರಿಗೆ ಮತ್ತು ಮನುಷ್ಯರಿಗೆ ಇಂತಹ ಆಕ್ರಮಣಕಾರಿ ನಾಯಿಗಳಿಂದ ಆಗಬಹುದಾದ ಪ್ರಾಣಾಪಾಯ ಹಾಗೂ ಹಾನಿಯನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಈ ನಿರ್ದೇಶನ ನೀಡಲಾಗುತ್ತಿದೆ ಎಂದು ಹೇಳಿರುವ ನ್ಯಾಯಪೀಠವು ಶ್ವಾನಗಳ ದಯಾಮರಣ ಕೊನೆಯ ಆಯ್ಕೆಯಾಗಿರಲಿ ಎಂದು ಸ್ಪಷ್ಟಪಡಿಸಿದೆ.



