ಕಾಪು: ಹೆಂಡತಿಯನ್ನು ರೂಮಿನಲ್ಲಿ ಕೂಡಿ ಹಾಕಿ ನಾದಿನಿಯಿಂದ ಚೂರಿ ಇರಿತ ! ಗಂಡನಿಂದಲೂ ಕ್ರೌರ್ಯ
ಮದುವೆಯಾದ ದಿನದಂದಲೂ ಪತ್ನಿಯನ್ನು ಕೂಡಿ ಹಾಕಿ ಕ್ರೌರ್ಯ ಮೆರೆದ ಆರೋಪದ ಹಿನ್ನೆಲೆಯಲ್ಲಿ ಪತಿ ಹಾಗೂ ನಾದಿನಿಯ ವಿರುದ್ದ ಪ್ರಕರಣ ದಾಖಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ನಡೆದಿದೆ.

ಕಾಪು: ಮದುವೆಯಾದ ದಿನದಂದಲೂ ಪತ್ನಿಯನ್ನು ಕೂಡಿ ಹಾಕಿ ಕ್ರೌರ್ಯ ಮೆರೆದ ಆರೋಪದ ಹಿನ್ನೆಲೆಯಲ್ಲಿ ಪತಿ ಹಾಗೂ ನಾದಿನಿಯ ವಿರುದ್ದ ಪ್ರಕರಣ ದಾಖಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಫಿರ್ದೋಸ್ ಬಾನು ಎಂಬಾಕೆಯೇ ಅನ್ಯಾಯಕ್ಕೆ ಒಳಗಾದವರು. ಪತಿ ಮೊಹಮ್ಮದ್ ಆದಿಲ್ ಹಾಗೂ ನಾದಿನಿ ಪೌಜಿಯಾ ಬೇಗಂ ವಿರುದ್ದ ಫಿರ್ದೋಸ್ ಬಾನು ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆ ದಿನದಿಂದಲೇ ಶುರುವಾಗಿತ್ತು ದೈಹಿಕ ಹಲ್ಲೆ
ಉದ್ಯಾವರದ ಫಿರ್ದೋಸ್ ಬಾನು ಅವರ ವಿವಾಹವು 2000ನೇ ಜೂನ್ 25ರಂದು ಉಚ್ಚಿಲ ಬಿರಿಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮೊಹಮ್ಮದ್ ಆದಿಲ್ ಎಂಬಾತನೊಂದಿಗೆ ನಡೆದಿತ್ತು. ಮದುವೆಯಾದ ಆರಂಭದಲ್ಲಿ ವಿದೇಶದಲ್ಲಿ ಎಸಿ ಮೆಕಾನಿಕ್ ಆಗಿದ್ದ ಗಂಡ, ತಾನು ದುಡಿದ ಹಣವನ್ನೆಲ್ಲಾ ತಾಯಿಯ ಖಾತೆಗೆ ಹಾಕುತ್ತಿದ್ದನೇ ಹೊರತು ಹೆಂಡತಿಯ ಖರ್ಚಿಗೆ ನಯಾಪೈಸೆ ನೀಡುತ್ತಿರಲಿಲ್ಲ. ಮನೆಯಲ್ಲಿದ್ದ ಅತ್ತೆ ಶಹನಾಝ್ ಬೇಗಂ ಹಾಗೂ ನಾದಿನಿ ಪೌಜಿಯಾ ಬೇಗಂ ಸಣ್ಣ ಕಾರಣಗಳಿಗೂ ಫಿರ್ದೋಸ್ ಬಾನು ಅವರಿಗೆ ಹೊಡೆಯುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಮೂವರು ಬಲಿ! ಎರಡು ಕಾರುಗಳು ಮುಖಾಮುಖಿ ಡಿಕ್ಕಿ
ಚೂರಿಯಿಂದ ಇರಿದ ನಾದಿನಿ, ರೂಮಿನಲ್ಲಿ ಕೂಡಿ ಹಾಕಿದ ಗಂಡ
ಅತ್ತೆಯ ನಿಧನದ ನಂತರ ಮನೆಯ ಸಂಪೂರ್ಣ ಜವಾಬ್ದಾರಿ ನಾದಿನಿ ಪೌಜಿಯಾ ಬೇಗಂ ಕೈಗೆ ಬಂದಿತ್ತು. ಇದೇ ವರ್ಷದ ಫೆಬ್ರವರಿ 18ರಂದು ನಾದಿನಿ ಫೌಜಿಯಾ ಬೇಗಂ ಪಿರ್ಯಾದಿದಾರರ ಜೊತೆ ಜಗಳ ತೆಗೆದು, ಚೂರಿಯಿಂದ ತಿವಿದಿದ್ದಾಳೆ. ಇದರಿಂದಾಗಿ ಫಿರ್ದೋಸ್ ಅವರ ಎಡಗೈ ಬೆರಳಿಗೆ ತೀವ್ರ ರಕ್ತಗಾಯವಾಗಿದೆ. ಅಷ್ಟಕ್ಕೇ ನಿಲ್ಲದ ಗಂಡ ಮತ್ತು ನಾದಿನಿ ಸೇರಿಕೊಂಡು, ಗಾಯಾಳು ಮಹಿಳೆಯನ್ನು ಅಕ್ರಮವಾಗಿ ಕೋಣೆಯಲ್ಲಿ ಬಂಧನದಲ್ಲಿಟ್ಟು ಹಿಂಸಿಸಿದ್ದಾರೆ. ಬಳಿಕ ಮನೆಗೆ ಬೀಗ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಕುಂದಾಪುರ: ಸತ್ತವರು ಬಂದು ಸಹಿ ಹಾಕಿದ್ರಾ ? ನಕಲಿ ಪಾನ್ ಕಾರ್ಡ್ ಸೃಷ್ಟಿಸಿ GPA ವಂಚನೆ; 6 ಮಂದಿ ವಿರುದ್ದ ಕ್ರಿಮಿನಲ್ ಪ್ರಕರಣ
ಮೊಬೈಲ್ ಡೇಟಾ ಅಳಿಸಿ ಜೀವ ಬೆದರಿಕೆ, ಚಿನ್ನಾಭರಣ ಮಾರಾಟ
ಇಷ್ಟಕ್ಕೆ ಸುಮ್ಮನಾಗದೆ ಮನೆಯಲ್ಲಿ ಜಗಳ ನಿರಂತರವಾಗಿ ನಡೆಯುತ್ತಲೇ ಇತ್ತು. ನಾದಿನಿ ಮತ್ತು ಗಂಡ, ಫಿರ್ದೋಸ್ ಅವರ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ಎಲ್ಲಾ ಡೇಟಾವನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ತೀವ್ರವಾಗಿ ಥಳಿಸಿ, ಮನೆ ಬಿಟ್ಟು ತೊಲಗಬೇಕು ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಮದುವೆ ಸಮಯದಲ್ಲಿ ಹೆತ್ತವರು ನೀಡಿದ್ದ 40 ಪವನ್ ಚಿನ್ನಾಭರಣವನ್ನು ಗಂಡ ಮತ್ತು ಆತನ ಮನೆಯವರು ಮಾರಿ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಇದೀಗ ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಾಪು ಠಾಣೆಯ ಪೊಲೀಸರು ಮೊಹಮ್ಮದ್ ಆದಿಲ್ ಮತ್ತು ನಾದಿನಿ ಪೌಜಿಯಾ ಬೇಗಂ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
kaup udupi domestic violence case crime news



