ರಾಜ್ಯದಲ್ಲಿ ಮಿತಿಮೀರಿದ ವರುಣನ ಅಬ್ಬರ : ಕರಾವಳಿ, ಮಲೆನಾಡು ಭಾಗದಲ್ಲಿ ವಿಪರೀತ ಮಳೆ ಮುನ್ಸೂಚನೆ
ಕರ್ನಾಟಕದ ಕರಾವಳಿ ತೀರ ಹಾಗೂ ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಮತ್ತೆ ತೀವ್ರಗೊಂಡಿದ್ದು, ಮುಂಗಾರು ಮಾರುತಗಳು ಭಾರಿ ಪ್ರಮಾಣದಲ್ಲಿ ಸಕ್ರಿಯವಾಗಿವೆ. ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದಾಗಿ ನದಿ, ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದೂ ಸಹ ರಜೆ ಮುಂದುವರಿಸಲಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಆಯಾ ಜಿಲ್ಲಾಡಳಿತಗಳು ಕಂಟ್ರೋಲ್ ರೂಮ್ಗಳನ್ನು ತೆರೆದಿದ್ದು, ಪ್ರವಾಸಿಗರು ನದಿ ತೀರ ಮತ್ತು ಅಪಾಯಕಾರಿ ಜಲಪಾತಗಳ ಕಡೆಗೆ ತೆರಳದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿರುವುದರಿಂದ ಕಡಲು ತೀವ್ರವಾಗಿ ಕ್ಷೋಭೆಗೊಂಡಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ಬೋಟ್ಗಳನ್ನು ಕಡಲಿಗೆ ಇಳಿಸಬಾರದು ಎಂದು ಹವಾಮಾನ ಇಲಾಖೆ ತಖೀತು ಮಾಡಿದೆ. ಇತ್ತ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಭಾಗಗಳಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಸಂಜೆ ವೇಳೆಗೆ ಸಾಧಾರಣ ಮಳೆಯಾಗಲಿದೆ. ರೈತರು ತಮ್ಮ ಜಮೀನುಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಲು ಕೃಷಿ ಇಲಾಖೆ ಸೂಚಿಸಿದೆ.