ಫ್ಲೆಕ್ಸ್‌ ಫ್ಯೂಯಲ್‌ ಕಾರು ಎಂದರೇನು? ವಾಹನ ಜಗತ್ತಿನಲ್ಲಿ ಎಥೆನಾಲ್‌ ಅಳವಡಿಕೆ ಒಂದು ಕ್ರಾಂತಿ ಹೇಗೆ?

ಭಾರತದಲ್ಲಿ ಎಥೆನಾಲ್‌ ಇಂಧನ ಬಳಕೆ ಮಾಡುವ ಬಗ್ಗೆ ದಿನೇ ದಿನೇ ಮಾತು ಕೇಳಿಬರುತ್ತಿರುವ ಈ ಸಮಯದಲ್ಲಿ ಮಾರುತಿ ವ್ಯಾಗನ್‌ಆರ್‌ ಫ್ಲೆಕ್ಸ್‌ ಫ್ಯೂಯಲ್‌ ಕಾರ್‌ ಅನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಫ್ಲೆಕ್ಸ್‌ ಫ್ಯೂಯಲ್‌ ಕಾರ್‌ ಎಂದರೇನು? ಅದರ ಅಳವಡಿಕೆಯಿಂದ ಆಗುವ ಲಾಭವೇನು? ಇಲ್ಲಿದೆ ಓದಿ.

ದಿನೇ ದಿನೇ ಹೆಚ್ಚುತ್ತಿರುವ ಮಾಲಿನ್ಯ ಮತ್ತು ದುಬಾರಿ ಕಚ್ಚಾ ತೈಲ ಆಮದಿಗೆ ಕಡಿವಾಣ ಹಾಕಲು ಭಾರತವು ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿದೆ. ವಾಹನಗಳಲ್ಲಿ ಎಥೆನಾಲ್‌ ಇಂಧನ ಬಳಕೆ ಇದು ಬಹಳ ದಿನಗಳಿಂದ ಕೇಳಿಬರುತ್ತಿರುವ ವಿಷಯ. ಇದಕ್ಕೆ ಈಗ ಭಾರತದ ದೇಶಿ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ದೇಶದ ಪ್ರಪ್ರಥಮ ಎಥೆನಾಲ್‌ ಕಾರನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂಡಿಯಾ ಗ್ಯಾಸ್‌ ಫ್ಲೆಕ್ಸ್‌ ಕಾರ್ಯಕ್ರಮದಲ್ಲಿ ಮಾರುತಿ ಸುಜುಕಿಯ ವ್ಯಾಗನ್‌ಆರ್ ನ ಫ್ಲೆಕ್ಸ್‌ ಫ್ಯೂಯಲ್‌ ಕಾರನ್ನು ಅನಾವರಣಗೊಳಿಸಿದರು. ಈ ಹೊಸ ತಂತ್ರಜ್ಞಾನವು ಪರಿಸರ ಸ್ನೇಹಿ ಆಗಿರುವುದರ ಜೊತೆಗೆ ಇಂಧನ ವೆಚ್ಚವನ್ನು ಕಡಿಮೆ ಮಾಡಬಲ್ಲದಾದ ದೇಶದ ಮೊದಲ ಕಾರು ಎಂಬ ಹೆಗ್ಗಳಿಕೆ ಇದು ಪಾತ್ರವಾಗಲಿದೆ.

ಫ್ಲೆಕ್ಸ್‌ ಫ್ಯೂಯಲ್‌ ಕಾರು ಎಂದರೇನು?

ಎಥೆನಾಲ್‌ ಮತ್ತು ಪೆಟ್ರೋಲ್‌ ಮಿಶ್ರಣದಿಂದ ಚಲಿಸುವ ಕಾರನ್ನು ಫ್ಲೆಕ್ಸ್‌ ಫ್ಯೂಯಲ್‌ ಕಾರು ಎಂದು ಕರೆಯಲಾಗಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿ, ಕಾರಿನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ. ಸದ್ಯದ ಜಾಗತಿಕ ಪರಿಸ್ಥಿತಿಯಲ್ಲಿ ಇದೊಂದು ಸ್ಮಾರ್ಟ್‌ ಆಯ್ಕೆಯಾಗಿದೆ.

ಹೇಗಿದೆ ವ್ಯಾಗನ್‌ಆರ್‌ ಫ್ಲೆಕ್ಸ್‌ ಫ್ಯೂಯಲ್‌ ಕಾರು?

ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಮೊದಲ ಫ್ಲೆಕ್ಸ್‌ ಇಂಧನ ಪ್ರಯಾಣಿಕ ಕಾರು ವ್ಯಾಗನ್‌ಆರ್‌ ಫ್ಲೆಕ್ಸ್‌ ಫ್ಯೂಯಲ್‌ (E100) ಸಂಪೂರ್ಣವಾಗಿ 100% ಎಥೆನಾಲ್‌ (Bio Ethanol) ಮೇಲೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದ ಆಟೋಮೊಬೈಲ್‌ ವಲಯದಲ್ಲೇ ಒಂದು ಐತಿಹಾಸಿಕ ಹೆಜ್ಜೆಯಾದ ಈ ಕಾರು ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅತ್ಯುತ್ತಮ ಇಂಟೀರಿಯರ್ ಡಿಸೈನ್‌ ಜೊತೆಗೆ ಕಾರಿನ ಹೊರಭಾಗವು ಅತ್ಯಾಕರ್ಷಣವಾಗಿದೆ. ಆರಾಮದಾಯಕ ಸೀಟುಗಳು, ಪ್ರೀಮಿಯಂ ಲುಕ್‌ನ ಜೊತೆಗೆ ಸುರಕ್ಷಾ ಮಾನದಂಡಗಳೂ ಇದರಲ್ಲಿವೆ. ಇದರಿಂದ ಸುರಕ್ಷಿತ ಚಾಲನೆಗೆ ಅನುಮಾನವಿಲ್ಲದಂತಾಗಿದೆ.

ಇನ್ನು ಈ ಕಾರು E20 ರಿಂದ E100 ವರೆಗಿನ ಯಾವುದೇ ಮಿಶ್ರಣದಲ್ಲಿ ಸರಾಗವಾಗಿ ಚಲಿಸಲಿದೆ. ಕಂಪನಿ ಇದಕ್ಕಾಗಿಯೇ ಐಸಿಇಯನ್ನು ವಿಶೇಷವಾಗಿ ನವೀಕರಿಸಿದೆ. ಇದು ಕೋಲ್ಡ್‌ ಸ್ಟಾರ್ಟ್‌ ಸಮಸ್ಯೆ ಬಗೆಹರಿಸಲು ಹೀಟೆಡ್‌ ಫ್ಯೂಯಲ್‌ ರೈಲ್‌ ಮತ್ತು ಎಥೆನಾಲ್‌ ಪ್ರಮಾಣ ಅಳೆಯಲು ಎಥೆನಾಲ್‌ ಸೆನ್ಸಾರ್‌ ಅನ್ನು ಅಳವಡಿಸಿದೆ.

ವಾಹನ ಜಗತ್ತಿನಲ್ಲಿ ಎಥೆನಾಲ್‌ ಅಳವಡಿಕೆ ಒಂದು ಕ್ರಾಂತಿ ಹೇಗೆ?

ನೂರು ಪ್ರತಿಶತ ಎಥೆನಾಲ್‌ನಲ್ಲಿ ವಾಹನಗಳು ಓಡುವುದರಿಂದ ಇಂಗಾಲದ ಹೊರಸೂಸುವಿಕೆಯು ಕಡಿಮೆಯಾಗಿ ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದು ಪೆಟ್ರೋಲ್‌ಗಿಂತ ಚಾಲನಾ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ವಿದೇಶಿ ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಕಬ್ಬು ಮತ್ತು ಜೋಳದಿಂದ ಉತ್ಪಾದಿಸುವ ಜೈವಿಕ ಎಥೆನಾಲ್‌ನಿಂದಾಗಿ ದೇಶದ ಬೆನ್ನೆಲುಬಾದ ರೈತರ ಆದಾಯ ಹೆಚ್ಚಾಗಲಿದೆ. ಸಾವಯವ ವಸ್ತುಗಳಿಂದ ತಯಾರಿಸಬಹುದಾದ ಎಥೆನಾಲ್‌ ನವೀಕರಿಸಬಹುದಾದ ಶಕ್ತಿಯ ಮೂಲವಾಗಿದೆ. ಇದು ಗ್ಯಾಸೋಲಿನ್‌ ಅಗತ್ಯವನ್ನು ಕಡಿಮೆ ಮಾಡಿ ದೇಶದ ಇಂಧನ ಭದ್ರತೆಯನ್ನು ಹೆಚ್ಚಿಸಬಲ್ಲದು.

Also Read : ಪೆಟ್ರೋಲ್ ವೆಚ್ಚ ಕಡಿತಕ್ಕೆ ಹೊಸ ತಂತ್ರಜ್ಞಾನ! ಫ್ಲೆಕ್ಸ್ ಫ್ಯೂಯೆಲ್ ವ್ಯಾಗನ್‌ಆರ್ ಲಾಂಚ್

ಎಥೆನಾಲ್‌ ಕಾರು ದುಬಾರಿಯೇ?

ಕಾರು ಖರೀದಿಸುವಾಗ ಅದರ ಬೆಲೆ ಹೆಚ್ಚು ಎನಿಸಿದರೂ ಇಂಧನ ವೆಚ್ಚವು ಸಾಕಷ್ಟು ಕಡಿಮೆಯಾಗಲಿದೆ. ಇದರಿಂದ ಮಾಸಿಕ ವೆಚ್ಚ ಕಡಿಮೆಯಾಗಿದೆ. ಎಥೆನಾಲ್‌ ಕಾರುಗಳನ್ನು ಉತ್ತೇಜಿಸಲು ಭಾರತ ಸರ್ಕಾರವು ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ 5,000 ಹೊಸ ಎಥೆನಾಲ್‌ ಪಂಪ್‌ಗಳನ್ನು ತೆರೆಯುವ ಯೋಜನೆಯಿದೆ. ಸದ್ಯ ಮಾರುತಿ ಹೊಸ ವ್ಯಾಗನ್‌ಆರ್‌ ನ ಬೆಲೆ ಬಹಿರಂಗ ಪಡಿಸಿಲ್ಲ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.