ವಾಹನ ಸವಾರರೇ ಗಮನಿಸಿ : ಇನ್ಮುಂದೆ ಮೊಬೈಲ್‌ಗೆ ಬರಲಿದೆ ಹೊಗೆ ಪರೀಕ್ಷೆಯ ಸಂದೇಶ

ಸಾರಿಗೆ ಇಲಾಖೆಯಿಂದ ನೋಂದಣಿಯಾಗಿ ರಸ್ತೆಗೆ ಇಳಿಯುವ ಪ್ರತೀ ವಾಹನ ಕೂಡ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಪಡೆಯೋದು ಕಡ್ಡಾಯವಾಗಿದೆ. ವಾಹನ ಸವಾರರು ವ್ಯಾಲಿಡಿಟಿ ಮುಗಿದಿದ್ದರೂ ಕೂಡ, ಅದನ್ನು ಮರೆಯುತ್ತಿದ್ದಾರೆ.

ಬೆಂಗಳೂರು : ಪರಿಸರ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ತಂತ್ರಜ್ಞಾನ ಆಧಾರಿತ ಹೊಸದೊಂದು ಮಹತ್ವದ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಇನ್ನು ಮುಂದೆ ಸಾರ್ವಜನಿಕರು ತಮ್ಮ ವಾಹನಗಳ ಹೊಗೆ ತಪಾಸಣೆ ಮಾಡಿಸಿದ ತಕ್ಷಣ, ಅದಕ್ಕೆ ಸಂಬಂಧಿಸಿದ ದೃಢೀಕರಣದ ಮಾಹಿತಿ ನೇರವಾಗಿ ಅವರ ಮೊಬೈಲ್ ಸಂಖ್ಯೆಗೆ ಸಂದೇಶದ ಮೂಲಕ ರವಾನೆಯಾಗಲಿದೆ.

ಸಾರಿಗೆ ಇಲಾಖೆಯಿಂದ ನೋಂದಣಿಯಾಗಿ ರಸ್ತೆಗೆ ಇಳಿಯುವ ಪ್ರತೀ ವಾಹನ ಕೂಡ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಪಡೆಯೋದು ಕಡ್ಡಾಯವಾಗಿದೆ. ವಾಹನ ಸವಾರರು ವ್ಯಾಲಿಡಿಟಿ ಮುಗಿದಿದ್ದರೂ ಕೂಡ, ಅದನ್ನು ಮರೆಯುತ್ತಿದ್ದಾರೆ. ನಿರ್ಲಕ್ಷ್ಯದಿಂದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ನವೀಕರಿಸದೆ ಸಂಚಾರ ಮಾಡ್ತಾರೆ. .

ಇದನ್ನು ತಡೆಗಟ್ಟಲು ಇಲಾಖೆಯು ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದೆ. ಹೊಸ ನಿಯಮದ ಪ್ರಕಾರ, ಸವಾರರು ಹೊಗೆ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ, ವಾಹನದ ವಿವರ ಹಾಗೂ ಪ್ರಮಾಣಪತ್ರದ ಮಾನ್ಯತೆಯ ಅವಧಿಯ ಸಂದೇಶ ಮೊಬೈಲ್ ತಲುಪಲಿದೆ.

ಈ ವಿನೂತನ ಉಪಕ್ರಮದಿಂದಾಗಿ ವಾಹನ ಸವಾರರಿಗೆ ತಮ್ಮ ಇಮಿಷನ್ ಸರ್ಟಿಫಿಕೇಟ್‌ನ ಅಂತಿಮ ದಿನಾಂಕವನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಅವಧಿ ಮುಗಿಯುವ ಕೆಲವು ದಿನಗಳ ಮುಂಚಿತವಾಗಿಯೇ ಸವಾರರಿಗೆ ಮುನ್ನೆಚ್ಚರಿಕೆ ಸಂದೇಶ ಕಳುಹಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಸಾರ್ವಜನಿಕರು ಸಾರಿಗೆ ಪೊಲೀಸರ ತಪಾಸಣೆ ವೇಳೆ ದಂಡ ಪಾವತಿಸುವುದರಿಂದ ಪಾರಾಗಬಹುದು.

ಮಾಲಿನ್ಯ ತಡೆಗಟ್ಟುವ ಸರ್ಕಾರದ ಪ್ರಯತ್ನಗಳಿಗೆ ಸಾರ್ವಜನಿಕರು ಸಹಕರಿಸಬೇಕಿದೆ. ನಕಲಿ ಪ್ರಮಾಣಪತ್ರಗಳ ದಂದೆಗೆ ಬ್ರೇಕ್ ಹಾಕಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈ ವ್ಯವಸ್ಥೆಯು ಸಾರಿಗೆ ಇಲಾಖೆಗೆ ಸಹಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡುವ ನಿರೀಕ್ಷೆಯಿದೆ.

vehicle emission test alert mobile message New Rules Kannada news

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »