ಕಾನೂನು ಮೀರಿದರೆ ಕ್ರಮ ಖಚಿತ: ಖಡಕ್ ಸಂದೇಶ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಗೃಹ ಸಚಿವರಾಗಿ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಿಯಾಂಕ್ ಖರ್ಗೆ, ಕಾನೂನು ಸುವ್ಯವಸ್ಥೆ, ಮಹಿಳಾ ಸುರಕ್ಷತೆ ಮತ್ತು ಡ್ರಗ್ಸ್ ನಿಯಂತ್ರಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಿಯಾಂಕ್ ಖರ್ಗೆ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ, ಬೆಂಗಳೂರು ಟ್ರಾಫಿಕ್ ಸಮಸ್ಯೆ, ಮಹಿಳೆಯರ ಭದ್ರತೆ ಹಾಗೂ ಡ್ರಗ್ಸ್ ಜಾಲದ ಕುರಿತು ಸವಿಸ್ತಾರ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಸರ್ಕಾರ ತಮ್ಮ ಮೇಲೆ ಮಹತ್ವದ ಜವಾಬ್ದಾರಿ ವಹಿಸಿದ್ದು, ಇಲಾಖೆಯ ಕಾರ್ಯವೈಖರಿ ಕುರಿತು ಸಮಗ್ರ ಮಾಹಿತಿ ಪಡೆಯುತ್ತಿರುವುದಾಗಿ ಹೇಳಿದರು. ಹಿಂದಿನ ಆಡಳಿತದಲ್ಲಿ ಜಾರಿಯಲ್ಲಿದ್ದ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ತಿಳಿಸಿದರು.
ಕಾನೂನಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶ ನೀಡಿದ ಅವರು, ಕಾನೂನು ಎಲ್ಲರಿಗೂ ಒಂದೇ. ಯಾರು ಆಗಿದ್ದರೂ ಕಾನೂನಿನ ಚೌಕಟ್ಟು ಮೀರಿ ನಡೆದುಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಮತ್ತು ದ್ವೇಷ ಭಾಷಣಗಳ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆದಿದೆ. ಜನರಲ್ಲಿ ದ್ವೇಷ ಮತ್ತು ಅಶಾಂತಿ ಹುಟ್ಟಿಸುವ ರೀತಿಯ ಪೋಸ್ಟ್‌ಗಳು ಅಥವಾ ಭಾಷಣಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖರ್ಗೆ ಎಚ್ಚರಿಕೆ ನೀಡಿದರು.
ವಿವಿಐಪಿ ಸಂಚಾರದಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಈ ಸಮಸ್ಯೆಗೆ ಪರ್ಯಾಯ ಕ್ರಮಗಳನ್ನು ರೂಪಿಸಲು ಸೂಚನೆ ನೀಡಿರುವುದಾಗಿ ಅವರು ಹೇಳಿದರು.



