ಐಫೋನ್ ಬಳಕೆದಾರರಿಗಾಗಿ ವಾಟ್ಸಾಪ್ ಹೊಸ ಮಲ್ಟಿ ಅಕೌಂಟ್ ಫೀಚರ್ ಬಿಡುಗಡೆ

ಐಫೋನ್ ಬಳಕೆದಾರರಿಗಾಗಿ ವಾಟ್ಸಾಪ್ ಹೊಸ ಮಲ್ಟಿ ಅಕೌಂಟ್ ಫೀಚರ್ ಬಿಡುಗಡೆ ಮಾಡುತ್ತಿದ್ದು, ಒಂದೇ ಆ್ಯಪ್‌ನಲ್ಲಿ ಎರಡು ವಿಭಿನ್ನ ಖಾತೆಗಳನ್ನು ಸುಲಭವಾಗಿ ನಿರ್ವಹಿಸುವ ಅವಕಾಶ ಕಲ್ಪಿಸುತ್ತಿದೆ.

ಐಫೋನ್ ಬಳಕೆದಾರರಿಗೆ ವಾಟ್ಸಾಪ್ ಹೊಸ ಅನುಕೂಲಕರ ಫೀಚರ್‌ನ್ನು ಪರಿಚಯಿಸಲು ಆರಂಭಿಸಿದೆ. ಇನ್ನು ಮುಂದೆ ಒಂದೇ ಐಫೋನ್‌ನಲ್ಲಿ ಎರಡು ವಿಭಿನ್ನ ವಾಟ್ಸಾಪ್ ಖಾತೆಗಳನ್ನು ಬಳಸುವ ಅವಕಾಶ ಸಿಗಲಿದ್ದು, ವೈಯಕ್ತಿಕ ಹಾಗೂ ಕಚೇರಿ ನಂಬರುಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವವರಿಗೆ ಇದು ಉಪಯುಕ್ತವಾಗಲಿದೆ.

ಇದುವರೆಗೆ ಎರಡು ವಾಟ್ಸಾಪ್ ಖಾತೆ ಬಳಸಬೇಕಾದರೆ ಬಳಕೆದಾರರು ಪ್ರತ್ಯೇಕವಾಗಿ ವಾಟ್ಸಾಪ್ ಬಿಸಿನೆಸ್ ಆ್ಯಪ್ ಬಳಸಬೇಕಾಗಿತ್ತು ಅಥವಾ ಮತ್ತೊಂದು ಮೊಬೈಲ್ ಅವಲಂಬಿಸಬೇಕಾಗುತ್ತಿತ್ತು. ಆದರೆ ಹೊಸ ಮಲ್ಟಿ ಅಕೌಂಟ್ ಫೀಚರ್‌ನಿಂದ ಒಂದೇ ವಾಟ್ಸಾಪ್ ಆ್ಯಪ್‌ನಲ್ಲಿ ಎರಡು ಖಾತೆಗಳನ್ನು ಸೇರಿಸಬಹುದು.

ಎರಡನೇ ಖಾತೆ ಸೇರಿಸುವ ಪ್ರಕ್ರಿಯೆಯೂ ಸರಳವಾಗಿದೆ. ಬಳಕೆದಾರರು ವಾಟ್ಸಾಪ್ ಸೆಟ್ಟಿಂಗ್ಸ್‌ಗೆ ತೆರಳಿ ಹೊಸ ಖಾತೆಯನ್ನು ಸೇರಿಸಬಹುದು. ಎರಡನೇ ಮೊಬೈಲ್ ನಂಬರ್ ಅಥವಾ ಕ್ಯೂಆರ್ ಕೋಡ್ ಮೂಲಕ ಖಾತೆ ಸಕ್ರಿಯಗೊಳಿಸುವ ಅವಕಾಶವೂ ಲಭ್ಯವಿದೆ.

ಒಮ್ಮೆ ಸೆಟಪ್ ಪೂರ್ಣಗೊಂಡ ಬಳಿಕ ಖಾತೆಗಳ ನಡುವೆ ಪದೇ ಪದೇ ಲಾಗಿನ್ ಮತ್ತು ಲಾಗೌಟ್ ಮಾಡುವ ಅಗತ್ಯವಿರುವುದಿಲ್ಲ. ಬಳಕೆದಾರರು ಬೇಕಾದಾಗ ಸುಲಭವಾಗಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಬದಲಾಯಿಸಬಹುದು.

ವಾಟ್ಸಾಪ್ ಎರಡೂ ಖಾತೆಗಳನ್ನು ಸಂಪೂರ್ಣ ಪ್ರತ್ಯೇಕವಾಗಿ ನಿರ್ವಹಿಸುತ್ತದೆ. ಒಂದು ಖಾತೆಯ ಚಾಟ್‌ಗಳು, ನೋಟಿಫಿಕೇಶನ್‌ಗಳು ಹಾಗೂ ಸೆಟ್ಟಿಂಗ್‌ಗಳು ಮತ್ತೊಂದು ಖಾತೆಯೊಂದಿಗೆ ಹಂಚಿಕೆಯಾಗುವುದಿಲ್ಲ. ಇದರಿಂದ ವೈಯಕ್ತಿಕ ಮತ್ತು ವೃತ್ತಿಪರ ಬಳಕೆ ಇನ್ನಷ್ಟು ಸುಲಭವಾಗಲಿದೆ.

ಖಾತೆ ಬದಲಾಯಿಸಲು ‘You’ ಟ್ಯಾಬ್ ಮೇಲೆ ಸ್ವಲ್ಪ ಸಮಯ ಒತ್ತಿಹಿಡಿದರೆ ಸಾಕು. ಲಿಂಕ್ ಮಾಡಲಾದ ಖಾತೆಗಳು ಪರದೆಯಲ್ಲಿ ಕಾಣಿಸಿಕೊಂಡು ಬೇಕಾದ ಖಾತೆಗೆ ತಕ್ಷಣ ಬದಲಾಯಿಸಬಹುದು.

ಈ ಹೊಸ ಫೀಚರ್ ಹಂತ ಹಂತವಾಗಿ ಬಿಡುಗಡೆ ಆಗುತ್ತಿರುವುದರಿಂದ ಎಲ್ಲರಿಗೂ ಒಂದೇ ವೇಳೆ ಲಭ್ಯವಾಗುವುದಿಲ್ಲ. ನಿಮ್ಮ ಐಫೋನ್‌ನಲ್ಲಿ ಈ ಆಯ್ಕೆ ಕಾಣಿಸದಿದ್ದರೆ ವಾಟ್ಸಾಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿ ಕೆಲವು ದಿನ ಕಾಯಬೇಕಾಗಬಹುದು.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories