ಎತ್ತು ಕೊಳ್ಳಲು ಕಾಸಿಲ್ಲದೇ ಪತ್ನಿಯಿಂದ ಉಳುಮೆ ಮಾಡಿಸಿದ ರೈತ..ಅನ್ನದಾತನ ಸಂಕಷ್ಟ ಕೇಳೋರ್ಯಾರು!?
ಎತ್ತಿನ ಜಾಗದಲ್ಲಿ ಸ್ವಂತ ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿರುವ ಹೃದಯವಿದ್ರಾವಕ ದೃಶ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ದೇಶಕ್ಕೆ ಅನ್ನ ನೀಡುವ ರೈತನೊಬ್ಬನ ಬದುಕು ಎಷ್ಟು ದುಸ್ತರವಾಗಿದೆ ಎಂಬುದಕ್ಕೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದಿಯೋನಿ ತಾಲೂಕಿನ ಬಂಬಾಲಿ ಗ್ರಾಮದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಪ್ರಕೃತಿಯ ವಿಕೋಪ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೆ ಸಿಲುಕಿದ ಬಡ ಕೃಷಿಕನೊಬ್ಬ, ಬಿತ್ತನೆ ಹಂಗಾಮು ಕೈತಪ್ಪಿ ಹೋಗಬಾರದು ಎಂಬ ಆತಂಕದಿಂದ ಎತ್ತಿನ ಜಾಗದಲ್ಲಿ ಸ್ವಂತ ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿರುವ ಹೃದಯವಿದ್ರಾವಕ ದೃಶ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಇಲ್ಲಿನ ನಿವಾಸಿ ಕಾಶಿನಾಥ್ ಗಾಯಕ್ವಾಡ್ ಎಂಬ ಬಡ ರೈತ ನಂಬಿಕೊಂಡಿದ್ದ ಜೋಡೆತ್ತುಗಳಲ್ಲಿ ಒಂದು, ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಸಾವನ್ನಪ್ಪಿತ್ತು. ಪ್ರಸ್ತುತ ಮುಂಗಾರು ಹಂಗಾಮು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ. ಬಿತ್ತನೆಗೆ ಸಮಯ ಮೀರಿ ಹೋದರೆ ಇಡೀ ವರ್ಷ ಉಪವಾಸ ಬೀಳಬೇಕಾಗುತ್ತದೆ ಎಂಬ ಭಯ ಕಾಶಿನಾಥ್ ಅವರನ್ನು ಕಾಡತೊಡಗಿತು. ಆದರೆ, ಮಾರುಕಟ್ಟೆಗೆ ಹೋಗಿ ಹೊಸದೊಂದು ಎತ್ತು ಖರೀದಿಸಲು ಅವರ ಬಳಿ ಬಿಡಿಗಾಸೂ ಇರಲಿಲ್ಲ.
ಯಾವ ಬ್ಯಾಂಕ್ ಅಥವಾ ಅಧಿಕಾರಿಗಳೂ ನೆರವಾಗದ ಕಾರಣ ಬೇರೆ ದಾರಿಯಿಲ್ಲದೆ, ನೇಗಿಲಿನ ಒಂದು ಬದಿಗೆ ಇದ್ದ ಒಂಟಿ ಎತ್ತನ್ನು ಕಟ್ಟಿದ ರೈತ, ಮತ್ತೊಂದು ಬದಿಗೆ ಹೆಂಡತಿಯ ಭುಜದ ಮೇಲೆ ನೊಗ ಇಟ್ಟು ಇಡೀ ಹೊಲವನ್ನು ಹಸನು ಮಾಡಿದ್ದಾರೆ. ಗಂಡನ ಸಂಕಷ್ಟಕ್ಕೆ ಹೆಗಲು ಕೊಟ್ಟ ಹೆಂಡತಿ, ಸುಡುವ ಬಿಸಿಲನ್ನೂ ಲೆಕ್ಕಿಸದೆ ಎತ್ತಿನಂತೆ ಭಾರ ಹೊತ್ತು ಸಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಗಳ ವಿಡಿಯೋ ಭಾರಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಕೃಷಿ ವ್ಯವಸ್ಥೆ ಮತ್ತು ರೈತರ ನಿಜವಾದ ದುಸ್ಥಿತಿಗೆ ಈ ಚಿತ್ರಣವೇ ಕನ್ನಡಿ ಹಿಡಿದಂತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇಷ್ಟಾದರೂ ಕಣ್ಣುಮುಚ್ಚಿ ಕುಳಿತಿರುವ ಸ್ಥಳೀಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವರು ತಕ್ಷಣವೇ ಈ ಬಡ ರೈತ ಕುಟುಂಬದ ನೆರವಿಗೆ ಧಾವಿಸಬೇಕು ಮತ್ತು ಅವರಿಗೆ ಹೊಸ ಎತ್ತನ್ನು ಕೊಡಿಸಬೇಕು ಎಂದು ಇಂಟರ್ನೆಟ್ ಬಳಕೆದಾರರು ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ.



