ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಇಲ್ಲಿದೆ ಸುಖ ನಿದ್ರೆಗೆ 5 ಸರಳ ಸೂತ್ರಗಳು

ನಿದ್ದೆಯ ಕೊರತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿ. ಪ್ರತಿನಿತ್ಯ ನಿಮ್ಮನ್ನು ಕಾಡುವ ನಿದ್ರಾಹೀನತೆಗೆ ಇಲ್ಲಿದೆ ಪರಿಹಾರ.

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ದೊಡ್ಡ ಸಮಸ್ಯೆ ನಿದ್ರಾಹೀನತೆ. ಇದಕ್ಕೆ ವಯಸ್ಸಿನ ಭೇದವಿಲ್ಲ. ದಿನವಿಡೀ ಎಷ್ಟೇ ಕೆಲಸ ಮಾಡಿ ದಣಿದಿದ್ದರೂ ರಾತ್ರಿ ಹಾಸಿಗೆ ಮೇಲೆ ಮಲಗಿದರೆ ನಿದ್ರೆ ಮಾತ್ರ ದೂರ. ಒಂದುವೇಳೆ ನಿದ್ರೆ ಬಂದರೂ ಕೂಡಾ ಪದೇ ಪದೇ ಎಚ್ಚರವಾಗುವುದು ಸಾಮಾನ್ಯ. ಇದರಿಂದ ಮರುದಿನ ಬೆಳಿಗ್ಗೆ ಏಳಲು ಆಲಸ್ಯ, ಕೆಲಸದಲ್ಲೂ ಏಕಾಗ್ರತೆಯ ಕೊರತೆ. ಇದರಿಂದ ಒಂದೊಂದೇ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ ತೋರಿದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗುವುದು ಖಚಿತ. ಆದ್ದರಿಂದ ನಿದ್ದೆ ಬಹಳ ಮುಖ್ಯ. ಕೆಲಸದ ಒತ್ತಡ, ಆತಂಕ, ಆರ್ಥಿಕ ಸಮಸ್ಯೆ ಮುಂತಾದವುಗಳು ನಿದ್ರಾಹೀನತೆಗೆ ಕಾರಣಗಳಾಗಿವೆ. ಈ ಸಮಸ್ಯೆಗೆ ಪರಿಹಾರವೇನು? ದೇಹಕ್ಕೆ ಅಗತ್ಯವಿರುವ ಉತ್ತಮ ನಿದ್ರೆ ಮಾಡುವುದು ಹೇಗೆ? ನಿಮಗೂ ಈ ಪ್ರಶ್ನೆಗಳಿದ್ದರೆ ಇಲ್ಲಿದೆ ಸುಖ ನಿದ್ರೆಗೆ 5 ಸರಳ ಸೂತ್ರಗಳು.

ಆಳವಾಗಿ ಉಸಿರಾಡಿ

ನಿದ್ದೆ ಮಾಡಲು ಬೆಡ್‌ ರೂಮ್‌ ಸೇರಿದ ತಕ್ಷಣ ಹಾಸಿಗೆ ಮೇಲೆ ಕುಳಿತು ಸ್ವಲ್ಪ ಹೊತ್ತು ಆಳವಾಗಿ ಉಸಿರಾಡಿ. ಆ ಸಮಯದಲ್ಲಿ ನಿಮ್ಮ ಕಣ್ಣು ಮುಚ್ಚಿರಲಿ. ನಿಧಾನವಾಗಿ ಉಸಿರಾಡಿ, ನಿಮ್ಮ ಉಸಿರನ ಮೇಲೆ ನಿಮ್ಮ ಗಮನವಿರಲಿ. ಇದರಿಂದ ದೇಹ ಮತ್ತು ಮನಸ್ಸ ವಿಶ್ರಾಂತಿ ಸ್ಥಿತಿ ತಲುಪಲು ಸಹಾಯವಾಗುತ್ತದೆ. ಆಗ ಸುಖ ನಿದ್ರೆ ನಿಮ್ಮನ್ನು ಆವರಿಸುತ್ತದೆ.

ಸ್ನಾಯುಗಳಿಗೆ ವಿಶ್ರಾಂತಿ ಕೊಡಿ

ನಿದ್ದೆ ಮಾಡುವ ಮೊದಲು ಧ್ಯಾನ ಮಾಡಿ. ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡಿದಾಗ ನಿದ್ದೆ ನಿಮ್ಮನ್ನಾವರಿಸುತ್ತದೆ. ಹಾಗಾಗಿ ಸರಳ ಉಡುಪು ಧರಿಸಿ. ಆರಾಮದಾಯಕ ಹಾಸಿಗೆ, ತಲೆದಿಂಬುಗಳನ್ನು ಆಯ್ದುಕೊಳ್ಳಿ. ಸರಿಯಾದ ಭಂಗಿಯಲ್ಲಿ ನಿದ್ರಿಸುವುದನ್ನು ರೂಢಿಸಿಕೊಳ್ಳಿ.

ಗಡಿಯಾರ ನೋಡುವುದನ್ನು ನಿಲ್ಲಿಸಿ

ಕೆಲವರು ನಿದ್ದೆ ಬರಲಿಲ್ಲ ಎಂದರೆ ಪದೇ ಪದೇ ಗಡಿಯಾರ ನೋಡುತ್ತಾರೆ. ನಾಳೆ ಬೆಳಿಗ್ಗೆ ಬೇಗ ಏಳಬೇಕು ಎಂದು ಮತ್ತೊಂದಿಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಇದು ನಿದ್ದೆಯ ನಿಮ್ಮಿಂದ ದೂರ ಓಡುವಂತೆ ಮಾಡುತ್ತದೆ. ಹಾಗಾಗಿ ನಿದ್ದೆ ಮಾಡಲು ಒಂದು ಟೈಮ್‌ ಟೇಬಲ್‌ ಹಾಕಿಕೊಳ್ಳಿ. ಪ್ರತಿದಿನ ಒಂದೇ ವೇಳೆಗೆ ಮಲಗುವುದನ್ನು ರೂಢಿಸಿಕೊಳ್ಳಿ. ಮೊದಲಿಗೆ ಸ್ವಲ್ಪ ಕಷ್ಟವಾದರೂ ಪ್ರತಿದಿನ ಪಾಲಿಸಿದರೆ ನಿದ್ರಾಹೀನತೆ ದೂರವಾಗುತ್ತದೆ.

ಇದನ್ನೂ ಓದಿ: ನಿಮಗೂ ಈ ರೀತಿ ಚಹಾ ಕುಡಿಯುವ ಅಭ್ಯಾಸವಿದೆಯಾ : ಹಾಗಾದ್ರೆ ಅದನ್ನ ಇಂದೇ ಬದಲಾಯಿಸಿಕೊಳ್ಳಿ, ಇಲ್ಲವಾದ್ರೆ ಆರೋಗ್ಯ ಹಾನಿ ಗ್ಯಾರಂಟಿ

ಆಲ್ಕೊಹಾಲ್‌ ತ್ಯಜಿಸಿ

ಆಲ್ಕೊಹಾಲ್‌ ಕುಡಿದರೆ ಬೇಗ ನಿದ್ರಿಸಬಹುದು ಎಂದುಕೊಂಡಿದ್ದಾರೆ. ನಿದ್ದೆಯೇನೋ ಬರುತ್ತದೆ. ಆದರೆ ಸ್ವಲ್ಪ ಸಮಯದನಂತರ ಎಚ್ಚರವಾಗುತ್ತದೆ ಇಲ್ಲವೇ ಭಾಗಶಃ ಎಚ್ಚರವಾಗುತ್ತದೆ. ಸಂಶೋಧನೆಗಳ ಪ್ರಕಾರ ಅಲ್ಕೊಹಾಲ್‌ ಸೇವನೆಯಿಂದ ನಿದ್ರಾಹೀನತೆ ಹೆಚ್ಚಾಗತ್ತದೆ ಎನ್ನಲಾಗಿದೆ.

ಫೋನ್‌ನಿಂದ ದೂರವಿರಿ

ಮಲಗಲು ಒಂದು ಗಂಟೆ ಇರುವಾಗಲೇ ಕಂಪ್ಯೂಟರ್‌, ಫೋನ್‌, ಟ್ಯಾಬ್ಲೆಟ್‌ ಬಳಸಬೇಡಿ. ಗ್ಯಾಜೆಟ್‌ಗಳ ಅತಿ ಬಳಕೆ ನಿಮ್ಮ ಸುಖ ನಿದ್ದೆಯನ್ನು ಕಸಿದುಕೊಳ್ಳುತ್ತದೆ. ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಹೀಗಾಗಿ ಗ್ಯಾಜೆಟ್‌ ಬಳಕೆ ನಿಲ್ಲಿಸಿ. ಸಾಧ್ಯವಾದರೆ ಉತ್ತಮ ಪುಸ್ತಕಗಳನ್ನು ಓದಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories