ತೂಕ ಇಳಿಕೆಗೆ ಮೊಟ್ಟೆ ಬೆಸ್ಟ್ ಹೇಗೆ? ಆಹಾರ ತಜ್ಞರು ಹೇಳುವ ಈ ಕ್ರಮ ಪಾಲಿಸಿ ನೋಡಿ
ಮೊಟ್ಟೆ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಎನ್ನುವುದು ಬಹಳಷ್ಟು ಜನರ ಅನಿಸಿಕೆಯಾಗಿದೆ. ಆದರೆ ತೂಕ ಇಳಿಕೆಯ ಪ್ರಯತ್ನದಲ್ಲಿರುವವರಿಗೆ ಮೊಟ್ಟೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ಫಿಟ್ನೆಸ್ ತಜ್ಞರು ಹೇಳುತ್ತಾರೆ. ಹೇಗೆ? ಇಲ್ಲಿದೆ ಓದಿ.
ಇಂದಿನ ಧಾವಂತದ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಮಂತ್ರ ಜಪಿಸುವುದು ಸಾಮಾನ್ಯ. ಫಿಟ್ ಆಗಿರಬೇಕೆಂದು ಆಹಾರಪದ್ಧತಿ, ವ್ಯಾಯಾಮ, ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಾರೆ. ಆಹಾರಕ್ರಮದಲ್ಲಂತೂ ಮೇಲಿಂದ ಮೇಲೆ ಬದಲಾವಣೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ ತೂಕ ಹೆಚ್ಚಾಗುತ್ತದೆ ಎಂದು ಕೆಲವೊಂದು ಪೌಷ್ಟಿಕ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸುತ್ತಾರೆ. ಅದರಲ್ಲಿ ಮೊಟ್ಟೆ ಕೂಡಾ ಒಂದು. ಅಗಾಧ ಪೌಷ್ಟಿಕಾಂಶಗಳ ಗಣಿಯಾಗಿರುವ ಮೊಟ್ಟೆಯನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿ ಇದೆ. ಆದರೆ ಫಿಟ್ನೆಸ್ ತಜ್ಞರ ಪ್ರಕಾರ ಸಮತೋಲಿತ ಆಹಾರದ ಭಾಗವಾಗಿ ದಿನವೊಂದಕ್ಕೆ ಒಂದು ಮೊಟ್ಟೆ ಸೇವಿಸುವುದು ತೂಕ ಇಳಿಕೆಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಹಾಗಾದರೆ ತೂಕ ಇಳಿಕೆಯ ಪ್ರಯಾಣದಲ್ಲಿರುವವರಿಗೆ ಮೊಟ್ಟೆ ಹೇಗೆ ಪ್ರಯೋಜನಕಾರಿಯಾಗಿದೆ? ಇಲ್ಲಿದೆ ಓದಿ.
ತೂಕ ಇಳಿಕೆಗೆ ಮೊಟ್ಟೆ ಹೇಗೆ ಪ್ರಯೋಜನಕಾರಿ?
ಮೊಟ್ಟೆಯಲ್ಲಿ ಅಗಾಧ ಪೌಷ್ಟಿಕಾಂಶಗಳು ಇರುವುದರಿಂದ ಅದನ್ನು ಸೇವಿಸಿದಾಗ ಹೆಚ್ಚು ಕಾಲ ಹೊಟ್ಟೆ ತುಂಬಿರುತ್ತದೆ. ಪದೇ ಪದೇ ಹಸಿವಾಗುವುದು ದೂರವಾಗುತ್ತದೆ. ತಜ್ಞರ ಪ್ರಕಾರ ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಒಂದು ಮೊಟ್ಟೆಯಲ್ಲಿ ಸರಾಸರಿ 6 ಗ್ರಾಂ ಪ್ರೋಟೀನ್ ಇರುತ್ತದೆ. ಕ್ಯಾಲೊರಿ ಕಡಿಮೆ ಇರುತ್ತದೆ. ಪ್ರೋಟೀನ್ ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ. ಇದರಿಂದ ದೀರ್ಘಕಾಲದವರೆಗೆ ಹಸಿವನ್ನು ತಡೆಯಬಹುದಾಗಿದೆ. ಜೊತೆಗೆ ತಿನ್ನುವ ಅತಿ ಬಯಕೆಯನ್ನು ಕಡಿಮೆ ಮಾಡುತ್ತದೆ. ಇದು ತೂಕ ಇಳಿಕೆಗೆ ಬಹಳ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ!
ಮೊಟ್ಟೆ ತಿನ್ನಲು ಸರಿಯಾದ ಸಮಯ ಯಾವುದು?
ಪ್ರೋಟೀನ್ ಭರಿತ ಉಪಹಾರದೊಂದಿಗೆ ದಿನವನ್ನು ಪ್ರಾರಂಭಿಸಬೇಕು ಎನ್ನುವುದು ಆಹಾರ ತಜ್ಞರ ಸಲಹೆಯಾಗಿದೆ. ಏಕೆಂದರೆ ಮೊಟ್ಟೆ ಹಸಿವನ್ನು ಉತ್ತಮವಾಗಿ ನಿಯಂತ್ರಿಸಬಹುದು ಎಂದು ಹಲವಾರು ಅಧ್ಯಯನಗಳಿಂದ ತಿಳಿದು ಬಂದ ವಿಷಯವಾಗಿದೆ. ಮೊಟ್ಟೆಗಳನ್ನು ತಿನ್ನುವವರಿಗೆ ಬಹಳ ಸಮಯದವರೆಗೆ ಹೊಟ್ಟೆತುಂಬಿರುವಂತೆ ಅನಿಸತ್ತದೆ. ದಿನವಿಡೀ ಅನಗತ್ಯ ತಿಂಡಿಗಳು ಮತ್ತು ಹೆಚ್ಚುವರಿ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಮೊಟ್ಟೆ ತಿನ್ನುವ ಸರಿಯಾದ ಕ್ರಮ
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬೇಯಿಸಿದ ಅಥವಾ ಲಘುವಾಗಿ ಬೇಯಿಸಿದ ಮೊಟ್ಟೆಗಳು ಉತ್ತಮ ಆಯ್ಕೆಯಾಗಿದೆ. ಎಣ್ಣೆ ಅಥವಾ ಬೆಣ್ಣೆಯಲ್ಲಿ ಹುರಿದ ಮೊಟ್ಟೆಗಳಲ್ಲಿ ಹೆಚ್ಚುವರಿ ಕ್ಯಾಲೊರಿಗಳು ಇರುವುದರಿಂದ ಅದನ್ನು ಸೇವಿಸುವುದನ್ನು ಬಿಡಿ. ಅಷ್ಟೇ ಅಲ್ಲದೇ ಪೌಷ್ಟಿಕ ತಜ್ಞರು ಮೊಟ್ಟೆಗಳನ್ನು ಪಾಲಕ್, ಟೊಮೆಟೊ, ಬೆಲ್ ಪೆಪರ್ ಮತ್ತು ಈರುಳ್ಳಿಯಂತಹ ತರಕಾರಿಗಳೊಂದಿಗೆ ಬೆರೆಸಿ ತಿನ್ನಲು ಶಿಫಾರಸು ಮಾಡುತ್ತಾರೆ. ಹಾಗೆ ತಿನ್ನುವುದರಿಂದ ದೇಹಕ್ಕೆ ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಒದಗಿಸುತ್ತದೆ. ಇದು ಸಮತೋಲಿತ ಊಟದ ಜೊತೆಗೆ ಹಸಿವನ್ನು ನಿಯಂತ್ರಿಸುತ್ತದೆ.



